ಜಾಹಿರಾತು ನಿಷೇಧ ನಿರ್ಣಯ ರದ್ದು

Team Udayavani, Feb 7, 2019, 7:10 AM IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ವರ್ಷದ ಮಟ್ಟಿಗೆ ಎಲ್ಲಾ ಬಗೆಯ ಜಾಹೀರಾತು ಗಳನ್ನು ನಿಷೇಧಿಸಿ 2018ರ ಆಗಸ್ಟ್‌ 6ರಂದು ಬಿಬಿಎಂಪಿ ಕೌನ್ಸಿಲ್‌ ಸಭೆ ತೆಗೆದುಕೊಂಡಿದ್ದ ನಿರ್ಣಯವನ್ನು ರದ್ದುಗೊಳಿಸಿ ಬುಧವಾರ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಬಿಬಿಎಂಪಿ ಕೌನ್ಸಿಲ್‌ ಸಭೆಯ ನಿರ್ಣಯವನ್ನು ಪ್ರಶ್ನಿಸಿ ಹಲವು ಜಾಹೀರಾತು ಕಂಪೆನಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾ. ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯಪೀಠ ಬುಧವಾರ ತೀರ್ಪು ಪ್ರಕಟಿಸಿ, ಒಂದು ವರ್ಷದ ಮಟ್ಟಿಗೆ ಎಲ್ಲಾ ಬಗೆಯ ಜಾಹೀರಾತು ಗಳನ್ನು ನಿಷೇಧಿಸಿ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಕೈಗೊಳ್ಳಲಾಗಿದ್ದ ನಿರ್ಣಯ ರದ್ದುಗೊಳಿಸಿ ಆದೇಶಿಸಿತು.

ಬಿಬಿಎಂಪಿ ಕೌನ್ಸಿಲ್‌ ಸಭೆಯ ನಿರ್ಣಯದಿಂದ ಅರ್ಜಿದಾರರ ಕಾನೂನಾತ್ಮಕ ಹಕ್ಕುಗಳ ಉಲ್ಲಂಘನೆಯಾಗಲಿದೆ. ಜಾಹೀರಾತು ನೀತಿ ರೂಪಿಸಿ ಜಾರಿಗೆ ತರುವುದು ಸರ್ಕಾರದ ನೀತಿ ನಿರೂಪಕ ವಿಷಯ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಅದನ್ನು ಜಾರಿಗೆ ತರುವ ಕ್ರಮ ಅರ್ಜಿದಾರರ ಕಾನೂನು ಬದ್ಧ ಹಕ್ಕುಗಳಿಗೆ ತದ್ವಿರುದ್ಧವಾಗಿದೆ. ಅಲ್ಲದೇ ಈ ನಿರ್ಣಯ ಏಕಪಕ್ಷೀಯವಾಗಿದೆ. ಹಾಗಾಗಿ ಈ ನಿರ್ಣಯನ್ನು ಕಾನೂನು ಪಾರಮರ್ಶೆಗೆ ಒಳಪಡಿಸಬಹುದು.

ಅಲ್ಲದೇ ಹೊಸ ಜಾಹೀರಾತು ನೀತಿ ಹಾಗೂ ಬೈಲಾಗಳನ್ನು ರಚಿಸುವ ಉದ್ದೇಶದಿಂದ ನಿರ್ಣಯ ಹೊರಡಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆಯಾದರೂ, ಹೊಸ ನಿಯಮಗಳನ್ನು ರಚಿಸುವವರೆಗೆ ಚಾಲ್ತಿಯಲ್ಲಿರುವ 2006 ಬೈಲಾಗಳ ನಿಯಮಗಳು ಹಾಗೂ ಅರ್ಜಿದಾರರ ಮೂಲಭೂತ ಹಕ್ಕುಗಳನ್ನು ಅಮಾನತಿನಲ್ಲಿರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಹೊಸ ಜಾಹೀರಾತು ನೀತಿ ಜಾರಿಗೊಳಿಸುವ ವಿಧಾನವು ಜಾಹೀರಾತು ದಾರರ ಹಕ್ಕುಗಳು ಮೊಟಕು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಬಿಬಿಎಂಪಿಯ ಮೇಲಿದೆ. ಹೊಸ ನೀತಿ ಜಾರಿಗೆ ಬರುವ ತನಕ ಹಳೆಯ ನಿಯಮಗಳನ್ನೇ ಮುಂದುವರಿಸಬೇಕಿತ್ತು. ಆದರೆ, ಪ್ರಕರಣದಲ್ಲಿ ಚಾಲ್ತಿಯಿಲ್ಲಿರುವ ನಿಯಮಗಳನ್ನು ಅಮಾನತ್ತು ಮಾಡಿರುವುದು ಸರಿಯಲ್ಲ ಎಂದು ಹೇಳಿರುವ ನ್ಯಾಯಪೀಠ, ಈ ಆದೇಶವು ಅಕ್ರಮ ಜಾಹೀರಾತು ಪ್ರದರ್ಶನದ ವಿರುದ್ಧ ಕ್ರಮ ಕೈಗೊಳ್ಳುವ ಬಿಬಿಎಂಪಿಯ ಅಧಿಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಚಾಲ್ತಿಯಲ್ಲಿರುವ 2006ರ ಬೈಲಾಗಳ ಪ್ರಕಾರ ಅಕ್ರಮ ಜಾಹೀರಾತುಗಳ ಮೇಲೆ ಬಿಬಿಎಂಪಿ ಕ್ರಮ ಜರುಗಿಸಬಹುದಾಗಿದೆ ಎಂದು ತಿಳಿಸಿದೆ.

ಬಿಬಿಎಂಪಿ ನಿರ್ಣಯ ಪ್ರಶ್ನಿಸಿ ಸಲ್ಲಿಸಲಾಗಿರುವ ಜಾಹೀರಾತು ಕಂಪನಿಗಳ ವೈಯಕ್ತಿಕ ಮನವಿಗಳನ್ನು ಪರಿಗಣಿಸಿ ನ್ಯಾಯಪೀಠ ಈ ಆದೇಶ ಮಾಡುತ್ತಿದೆ. ಆದರೆ, ಅನಧಿಕೃತ ಜಾಹೀರಾತುಗಳ ನಿಯಂತ್ರಣ ಹಾಗೂ ನಿಷೇಧಕ್ಕೆ ಸಂಬಂಧಿಸಿದ ವಿಚಾರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತ್ತಿರುವ ವಿಭಾಗೀಯ ಪೀಠದ ಮುಂದೆ ಪರಿಹರಿಸಿಕೊಳ್ಳಬಹುದು.

ಅರ್ಜಿದಾರರ ವಾದ ಏನಿತ್ತು?: ಕೌನ್ಸಿಲ್‌ ಸಭೆಯ ನಿರ್ಣಯದಂತೆ ಬಿಬಿಎಂಪಿ ಜಾಹೀರಾತು ಗಳನ್ನು ನಿಷೇಧಿಸಿದೆ. ಆದರೆ. ಕೌನ್ಸಿಲ್‌ ಸಭೆಯ ನಿರ್ಣಯ ಕಾನೂನು ಅಲ್ಲ. ಅರ್ಜಿದಾರ ಜಾಹೀರಾತು ದಾರರು ಕಾನೂನು ಬದ್ಧ ಪರವಾನಿಗೆ ಪಡೆದುಕೊಂಡವರಾಗಿದ್ದಾರೆ. ಈ ಜಾಹೀರಾತು ದಾರರು ಅಳವಡಿಸಿರುವ ಜಾಹೀರಾತು ಫ‌ಲಕಗಳು ಖಾಸಗಿ ಆಸ್ತಿಗಳಲ್ಲಿವೆ. ಅಲ್ಲದೇ ಎಲ್ಲ ರೀತಿಯ ತೆರಿಗೆಗಳನ್ನು, ಶುಲ್ಕಗಳನ್ನು ನಿಯಮಿತವಾಗಿ ಪಾವತಿಸಲಾಗುತ್ತಿದೆ. ಅಕ್ರಮ ಜಾಹೀರಾತು ಗಳನ್ನು ನಿಷೇಧಿಸುವ ನೆಪದಲ್ಲಿ ಕಾನೂನು ಬದ್ಧ ವಹಿವಾಟಿಗೆ ಬಿಬಿಎಂಪಿ ತಡೆಯೊಡ್ಡಿದೆ

ಜಾಹೀರಾತು ಪ್ರದರ್ಶನವು ಸಂವಿಧಾನದ ಪರಿಚ್ಛೇದ 19 (1) (ಅ) ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ವಾಪ್ತಿಗೆ ಬರುತ್ತದೆ. ಇಲ್ಲಿ ವಾಣಿಜ್ಯ ಉದ್ದೇಶದ ಜಾಹೀರಾತು ಪ್ರದರ್ಶನವನ್ನು ‘ವಾಣಿಜ್ಯ ಅಭಿವ್ಯಕ್ತಿ’ (ಕಮರ್ಷಿಯಲ್‌ ಸ್ಪೀಚ್) ಎಂದು ಪರಿಭಾಷಿಸಲಾಗಿದೆ. ಸಂವಿಧಾನದ ಈ ಪರಿಚ್ಛೇದದ ಪ್ರಕಾರ ಕಾನೂನುಬದ್ಧ ಜಾಹೀರಾತು ಪ್ರದರ್ಶನವನ್ನು ನಿಷೇಧಿಸಲು ಅವಕಾಶವಿಲ್ಲ. ಅಲ್ಲದೇ ಬಿಬಿಎಂಪಿಯ ಈ ಕ್ರಮ ಸಂವಿಧಾನದ ಪರಿಚ್ಛೇದ 21ರ ‘ಜೀವಿಸುವ ಹಕ್ಕಿನ’ ಉಲ್ಲಂಘನೆಯಾಗಿದೆ. ನಗರದಲ್ಲಿ ಸುಮಾರು 2 ಸಾವಿರ ಜಾಹೀರಾತು ಸಂಸ್ಥೆಗಳಿವೆ. ಸುಮಾರು ಸುಮಾರು 1.50 ಲಕ್ಷ ಕುಟುಂಬಗಳು ಈ ಉದ್ಯಮವನ್ನು ನೆಚ್ಚಿಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ವಹಿವಾಟು ಸ್ಥಗಿತಗೊಂಡಿದ್ದರಿಂದ ಬಡ ಹಾಗೂ ಮಧ್ಯಮ ವರ್ಗದ 1.50 ಲಕ್ಷ ಕುಟುಂಬಗಳು ಬೀದಿಗೆ ಬಿದ್ದಿವೆ. ಹಾಗಾಗಿ ಬಿಬಿಎಂಪಿಯ ಈ ನಿರ್ಣಯ ರದ್ದುಗೊಳಿಸುವಂತೆ ಅರ್ಜಿದಾರರು ಕೋರಿದ್ದರು.

ಬಿಬಿಎಂಪಿ ಏನು ಹೇಳಿತ್ತು?

ಜಾಹೀರಾತುಗಳಿಂದ ನಗರ ಸೌಂದರ್ಯ ಹಾಳಾಗುತ್ತಿದೆ. ಅಲ್ಲದೇ ಇದು ಪರಿಸರ ಮಾಲಿನ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೇ ಅನಧೀಕೃತ ಜಾಹೀರಾತುಗಳ ಪ್ರದರ್ಶನಕ್ಕೆ ಕಡಿವಾಣ ಹಾಕಲು ಹೊಸ ನೀತಿ ಜಾರಿಗೆ ತರಲಾಗುತ್ತಿದೆ. ಹೀಗಾಗಿ, ಒಂದು ವರ್ಷದ ಮಟ್ಟಿಗೆ ನಗರದ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಜಾಹೀರಾತುಗಳನ್ನು ನಿಷೇಧಿಸಿ ಬಿಬಿಎಂಪಿ ಕೌನ್ಸಿಲ್‌ ಸಭೆ ನಿರ್ಣಯ ಕೈಗೊಂಡಿದೆ. ಈ ರೀತಿ ನಿರ್ಣಯ ಕೈಗೊಳ್ಳುವ ಅಧಿಕಾರ ಬಿಬಿಎಂಪಿಗೆ ಇದೆ. ಅಷ್ಟಕ್ಕೂ ಹೊಸ ಜಾಹೀರಾತು ನೀತಿ ತರುತ್ತಿರುವುದು ಅನಧೀಕೃತ ಜಾಹಿರಾತುಗಳ ನಿಷೇಧಕ್ಕೆ. ಆದರೆ, ಅರ್ಜಿದಾರರು ತಾವು ಅಧಿಕೃತ ಜಾಹೀರಾತುದಾರರು ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಬಿಬಿಎಂಪಿ ನಿರ್ಣಯದಿಂದ ಅವರಿಗೇನು ಸಮಸ್ಯೆ ಎಂದು ಬಿಬಿಎಂಪಿ ವಾದಿಸಿತ್ತು.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ ಕಾನೂನು ಜಾರಿ, ಅಂಬೇಡ್ಕರ್‌ ಸ್ಮಾರ್ಟ್‌ ಕಾರ್ಡ್‌ ವಿತರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ...

  • ಬೆಂಗಳೂರು: ನಗರದಲ್ಲಿ ಹೊಸ ವಾಹನ ಖರೀದಿಸುವವರು ಕಡ್ಡಾಯವಾಗಿ ಆ ವಾಹನ ನಿಲುಗಡೆಗೆ ಜಾಗ ಇರುವ ಬಗ್ಗೆ ದೃಢೀಕರಣ ಪತ್ರ ನೀಡಬೇಕು. ಇನ್ನು ಈಗಾಗಲೇ ವಾಹನ ಇರುವವರಿಗೆ...

  • ಬೆಂಗಳೂರು: "ಬಯಲು ಬಹಿರ್ದೆಸೆ ಮುಕ್ತ' (ಒಡಿಎಫ್) ಎಂದು ಬೆಂಗಳೂರು ಅಧಿಕೃತವಾಗಿ ಪ್ರಮಾಣೀಕರಿಸಿಕೊಳ್ಳದ ಹಿನ್ನೆಲೆಯಲ್ಲಿ ಈ ಬಾರಿಯೂ ಬಿಬಿಎಂಪಿ ಸ್ವಚ್ಛ ಸರ್ವೇಕ್ಷಣ್‌ನಲ್ಲಿ...

  • ಬೆಂಗಳೂರು: ರಸ್ತೆಯಲ್ಲಿನ ಕಸ ಗಾಳಿಗೆ ಹಾರಿ ಮನೆಯೊಳಗೆ ಬರುತ್ತದೆ ಅಂತ ಮನೆಗೆ ಬೀಗಹಾಕಿ ಎಲ್ಲರೂ ಹೊರಗೆ ವಾಸವಿದ್ದರೆ ಹೇಗಿರುತ್ತದೆ? ಕೇಳಲಿಕ್ಕೂ ಇದು ಹಾಸ್ಯಾಸ್ಪದ....

  • ಬೆಂಗಳೂರು: ಮಟನ್‌ ಪ್ರಿಯರಿಗೆ ಸಿಹಿ ಸುದ್ದಿ. ರಾಜ್ಯ ಸರ್ಕಾರವೇ ಈಗ ಕುರಿ ಮಾಂಸದ ಸಂಚಾರಿ ಮಳಿಗೆಗಳನ್ನು ತೆರೆಯುವ ಮೂಲಕ ಮಾಂಸ ಪ್ರಿಯರಿಗೆ ತಾಜಾ ಮಾಂಸದ ಊಟ ನೀಡಲು...

ಹೊಸ ಸೇರ್ಪಡೆ