ಸೈಕಲ್ ಕದ್ದರೆ ದೂರು ನೀಡಲ್ಲ ಎಂದು 54 ಸೈಕಲ್‌ಗಳನ್ನು ಕದ್ದ ಭೂಪ
Team Udayavani, May 29, 2022, 10:27 AM IST
ಬೆಂಗಳೂರು: ಸೈಕಲ್ ಕಳ್ಳತನ ಮಾಡಿದರೆ ಸಾಮಾನ್ಯವಾಗಿ ಪೊಲೀಸ್ ಠಾಣೆಗೆ ದೂರು ನೀಡಲು ಹೋಗುವುದಿಲ್ಲ ಎಂಬುದನ್ನು ಅರಿತು ವಿವಿಧ ಕಂಪನಿಗಳ ಸೈಕಲ್ ಕಳ್ಳತನಕ್ಕೆ ಇಳಿದಿದ್ದ ಆರೋಪಿಯನ್ನು ಸುದ್ದಗುಂಟೆ ಪೊಲೀಸರು ಬಂಧಿಸಿದ್ದಾರೆ.
ಮೈಲಸಂದ್ರದ ನಿವಾಸಿ ಬಾಲ ಅಲಿಯಾಸ್ ಬಾಲರಾಜ್(48) ಬಂಧಿತ ಸೈಕಲ್ ಕಳ್ಳ. ಈ ಮೊದಲು ಈತ ತಿಲಕ್ ನಗರದಲ್ಲಿ ವಾಸವಾಗಿದ್ದನು. ತದನಂತರ ಮೈಲಸಂದ್ರಕ್ಕೆ ಬಂದು ನೆಲೆಸಿದ್ದ. ಈತನಿಂದ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿ 6 ಲಕ್ಷ ರೂ. ಮೌಲ್ಯದ 54 ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಹಿಂದೆ ಮನೆಗಳ್ಳತನ ಪ್ರಕರಣದಲ್ಲಿ ಬಂಧಿತನಾಗಿ ಜೈಲಿಗೆ ಹೋಗಿ ಹೊರಬಂದಿದ್ದ ಈತ ಮತ್ತೆ ಕಳ್ಳತನಕ್ಕಿಳಿದಿದ್ದ. ಬೈಸಿಕಲ್‌ಗಳನ್ನು ಕಳ್ಳತನ ಮಾಡಿದರೆ ಯಾರೂ ಪೊಲೀಸ್ ಠಾಣೆಗೆ ದೂರು ನೀಡುವುದಿಲ್ಲ ಎಂದು ಅಂದುಕೊಂಡ ಆರೋಪಿ ಬರೀ ಸೈಕಲ್‌ಗಳನ್ನು ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿ ಬಾಲರಾಜನನ್ನು ಬಂಧಿಸಿ ವಿಚಾರಣೆ ಮಾಡಿದಾಗ, ಸುಮಾರು 6 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 54 ಬೈಸಿಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಪೊಲೀಸ್ ಸರ್ಪಗಾವಲಿನಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶ
10 ಪ್ರಕರಣ ಬೆಳಕಿಗೆ ಬಂದಿವೆ
ತನಿಖೆ ವೇಳೆ ಆಗ್ನೇಯ, ದಕ್ಷಿಣ ಹಾಗೂ ಪಶ್ಚಿಮ ವಿಭಾಗದ ಹಲವಾರು ಪೊಲೀಸ್ ಠಾಣೆಗಳಲ್ಲಿ ಆರೋಪಿ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂಬುದು ಬೆಳಕಿಗೆ ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.
ಜತೆಗೆ ಆರೋಪಿ ಬಂಧನದಿಂದ ಸುದ್ದಗುಂಟೆ ಪೊಲೀಸ್ ಠಾಣೆಯ 9 ಪ್ರಕರಣ, ಮಡಿವಾಳ ಠಾಣೆಯ ಒಂದು ಪ್ರಕರಣ ಸೇರಿ ಒಟ್ಟು 10 ಪ್ರಕರಣಗಳು ಪತ್ತೆಯಾಗಿರುತ್ತವೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮಾಡಿರಬಹುದಾದ ಕಳ್ಳತನಗಳ ಬಗ್ಗೆಯೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇನ್‌ಸ್ಪೆಕ್ಟರ್ ಜಿ.ನಾಯಕ್ ಅವರ ನೇತೃತ್ವದ ತಂಡ ಈ ಕಾರ್ಯಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ ಸೈಕಲ್ ಕಳ್ಳತನದ ಬಗ್ಗೆ ಮತ್ತಷ್ಟು ತನಿಖೆ ಕೈಗೊಂಡಿದೆ.