ಗಂಡಸರ ಬಗ್ಗೆ ನಾನು ಮಾತನಾಡುವುದಿಲ್ಲ: ಉನ್ನತ ಶಿಕ್ಷಣ ಸಚಿವರ ವಿರುದ್ಧ ಡಿಕೆಶಿ ಆಕ್ರೋಶ
Team Udayavani, Nov 12, 2022, 5:55 PM IST
ಬೆಂಗಳೂರು : ಅವರು ದೊಡ್ಡ ಗಂಡಸು, ಗಂಡಸರ ಬಗ್ಗೆ ನಾನು ಮಾತಾಡುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು ಅಶ್ವತ್ಥನಾರಾಯಣ ವಿರುದ್ಧ ಪರೋಕ್ಷ ಕಿಡಿಕಾರಿದರು.
ಬೆಂಗಳೂರಿಗೆ ಬಿಜೆಪಿಯವರು ಏನಾದರೂ ಸಂದೇಶ ಕೊಟ್ಡಿದ್ದಾರಾ ? ನಿರುದ್ಯೋಗ, 40% ಕಮಿಶನ್, ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ಪತ್ರ ಬರೆದು ಪ್ರಶ್ನೆ ಮಾಡಿದ್ದೆವು. ಅವರು ಉತ್ತರಿಸಿಲ್ಲ ಎಂದರು.
ಒಕ್ಕುಲುತನವನ್ನ ಎಲ್ಲಾ ಸಮುದಾಯದವರೂ ಮಾಡುತ್ತಾರೆ. ಕೆಂಪೇಗೌಡರು, ಕೆಂಗಲ್ ಹನುಮಂತಯ್ಯ, ದೇವೇಗೌಡರು, ಎಸ್.ಎಂ ಕೃಷ್ಣ ಇವರೆಲ್ಲಾ ಇತಿಹಾಸ ಸೃಷ್ಟಿಸಿದ್ದಾರೆ.
ಬಿಜೆಪಿಯವರಿಗೆ ದೇವೇಗೌಡ್ರು, ಕುಮಾರಸ್ವಾಮಿ, ಶಿವಕುಮಾರ್ ಯಾರೂ ಬೇಕಾಗಿಲ್ಲ. ರಾಜಕೀಯಕ್ಕಾಗಿ ಕಾರ್ಯಕ್ರಮ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಸರ್ಕಾರಿ ಹಣ ಯಾಕ್ಕೆ ಬೇಕಿತ್ತು ? ಕಮಿಷನ್ ಹೊಡೆಯೋದಕ್ಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕೆಂಪೇಗೌಡರ ಪ್ರಾಧಿಕಾರ ಮಾಡಿದ್ದು ನಾವು. ಇವರು ಕೇವಲ ಶೋ ಕ್ರಿಯೇಟ್ ಮಾಡಿದ್ದಾರೆ. ಎಲೆಕ್ಷನ್ ಬಂತು ಅಂತಾ ಬಿರುಸಿನ ಪ್ರಚಾರ ಅಂತಿದ್ದಾರೆ. ಅವರ ಸಂಕಲ್ಪದಂತೆ ಜನರು ಸರ್ಕಾರವನ್ನ ಕಿತ್ತು ಒಗೆಯುತ್ತಾರೆ. ಪ್ರಧಾನಿಗಳು ಏನಾದ್ರೂ ಕೊಡುಗೆ ಕೊಡ್ತಾರೆ ಅಂದುಕೊಂಡಿದ್ದೆವು. ನಾವು ಪ್ರಶ್ನೆಗಳನ್ನ ಕೇಳಿದ್ದೆವು ಆದರೆ, ಅದಕ್ಕೆ ಉತ್ತರವನ್ನೂ ಕೊಟ್ಟಿಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ :ಲಾಕ್ ಡೌನ್…ಖಿನ್ನತೆ ನಡುವೆ ಬದುಕು… ರ‍್ಯಾಪಿಂಗ್ ನಿಂದ ಅಲೆಯನ್ನೇ ಸೃಷ್ಟಿಸಿದ ‘ಸೃಷ್ಟಿ’
ಬಿಜೆಪಿಯವರು ಸಮಾಜದ ಅಜೆಂಡಾ ಇಟ್ಟುಕೊಂಡಿಲ್ಲ. ವೋಟ್ ಬ್ಯಾಂಕ್ ಅಜೆಂಡಾ ಇಟ್ಟುಕೊಂಡಿದ್ದಾರೆ. ಮಾಲಾರ್ಪಣೆ ಮಾಡುವುದರಲ್ಲೂ ಸಹ ಅಜೆಂಡಾ ಇಟ್ಟುಕೊಂಡಿದ್ದಾರೆ. ಕೆಂಪೇಗೌಡ ಏರ್ಪೋರ್ಟ್ ಅಂತ ಹೆಸರು ಇಟ್ಟಿದ್ದು ಕಾಂಗ್ರೆಸ್. ನಗರಾಭಿವೃದ್ಧಿ ಇಲಾಖೆಯ ಸಚಿವನಾಗಿದ್ದಾಗ ಜಾಗ ಕೊಟ್ಟಿದ್ದು ನಾನು. ಸಿದ್ದರಾಮಯ್ಯ ಕಾಲದಲ್ಲಿ ಕೆಂಪೇಗೌಡ ಜಯಂತಿ ಮಾಡಿದ್ದು. ಬಿಜೆಪಿಯವರಿಗೆ ಸಂಸ್ಕೃತಿಯೇ ಇಲ್ಲ. ಯಾರನ್ನ ಹೇಗೆ ನಡೆಸಿಕೊಳ್ಳಬೇಕು ಅನ್ನೋದು ಗೊತ್ತಿಲ್ಲ. ಒಬ್ಬ ಮಾಜಿ ಪ್ರಧಾನಿ ಒಂದು ಗೌರವ ಕೊಡಕ್ಕೆ ಆಗಲ್ಲವೇ ? ಇವರಿಗೆ ಶಿಷ್ಟಾಚಾರ ಅಂದ್ರೆ ಏನು ಅಂತಲೇ ಗೊತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.