ಉಪಕಣದಲ್ಲಿ ನಾಯಕರಿಗೆ ಅಗ್ನಿ ಪರೀಕ್ಷೆ

Team Udayavani, Nov 2, 2018, 6:00 AM IST

ಬೆಂಗಳೂರು: ರಾಜ್ಯ ರಾಜಕೀಯಕ್ಕೆ ಕರೆಯದೇ ಬಂದ ಅತಿಥಿ – ಈ ಉಪಚುನಾವಣೆ. ಪ್ರಮುಖ ರಾಜಕೀಯ ಪಕ್ಷಗಳಿಗೆ ಬೇಡವಾಗಿದ್ದ ಮೂರು ಲೋಕಸಭಾ ಕ್ಷೇತ್ರಗಳ ಚುನಾವಣೆ ಇನ್ನೇನು ಒಂದು ದಿನ ಬಾಕಿ ಇದೆ ಎನ್ನುವ ಸಂದರ್ಭದಲ್ಲಿ ಪ್ರಮುಖ ಘಟನಾವಳಿಗಳಿಗೆ ಸಾಕ್ಷಿಯಾಗಿದೆ. ಜತೆ ಜೊತೆಗೆ ಮುಖ್ಯ ಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡು, ರಾಮನಗರವನ್ನು ಬಿಟ್ಟುಕೊಟ್ಟಿದ್ದರಿಂದ, ಜಮಖಂಡಿ ಕ್ಷೇತ್ರದ ಶಾಸಕ ಸಿದ್ದು ನ್ಯಾಮೇಗೌಡ ಅವರ ಅಕಾಲಿಕ ನಿಧನದಿಂದ ನಡೆಯುತ್ತಿರುವ ರಾಮನಗರ ಮತ್ತು ಜಮಖಂಡಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗಳು ಘಟಾನುಘಟಿ ರಾಜಕಾರಣಿಗಳ ದಿಕ್ಕು-ದೆಸೆ ಬದಲಿಸುವಂತಿದೆ. 

ರಾಮನಗರದಲ್ಲಿ ಕಾಂಗ್ರೆಸ್‌ ನಾಯಕ ಸಿ.ಎಂ. ಲಿಂಗಪ್ಪ ಪುತ್ರ ಚಂದ್ರಶೇಖರ್‌ ಬಿಜೆಪಿ ಸೇರಿ, ಇನ್ನೇನು ಚುನಾವಣೆಗೆ ಎರಡು ದಿನಗಳಿರುವ ಹೊತ್ತಿನಲ್ಲೇ ಚುನಾವಣಾ ರಣಾಂಗಣದಿಂದ ಕಾಲೆ¤ಗೆದು ಕಾಂಗ್ರೆಸ್‌ ಕ್ಯಾಂಪ್‌ ಸೇರುವ ಮೂಲಕ “ಶಿಸ್ತಿನ ಪಕ್ಷ’ ಬಿಜೆಪಿಗೆ ಹೊಸ ಪಾಠ ಕಲಿಸಿದಂತಿದೆ. “ಆಪರೇಷನ್‌ ಜಪ’ ಮಾಡುತ್ತಿದ್ದ ರಾಜ್ಯ ಬಿಜೆಪಿಗೆ ರಾಜಕೀಯವಾಗಿ ಕಾಂಗ್ರೆಸ್‌ ಮರ್ಮಾಘಾತ ನೀಡಿದೆ. ಒಕ್ಕಲಿಗರ ನೆಲೆಯಲ್ಲಿ ಬಿಜೆಪಿ ಬೇರೂರುವುದು ಕಷ್ಟ ಸಾಧ್ಯ ಎಂಬುದು ಇಲ್ಲಿ ಜಾಹೀರಾಗಿದೆ. ಜತೆಗೆ ಚಂದ್ರಶೇಖರ್‌ ಅವರಂತಹ ಯುವಕರು ಅವಕಾಶವಾದಿ ರಾಜಕಾರಣ ದತ್ತ ಮುಖಮಾಡುತ್ತಿರುವುದೂ ಸ್ಪುಟವಾಗಿದೆ. ಅತ್ತ ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಜನಾರ್ದನ ರೆಡ್ಡಿ ಅವರ ನಾಲಿಗೆ ಮೀರಿದ ಮಾತು ಕಾಂಗ್ರೆಸ್‌ಗೆ ವರದಾನವಾಗಿದೆ. ಇನ್ನೊಂದೆಡೆ ಶಿವಮೊಗ್ಗದಲ್ಲಿ ಈಡಿಗ ಸಮುದಾಯದ ಪ್ರಮುಖ ನಾಯಕ ಕಾಗೋಡು ತಿಮ್ಮಪ್ಪ ಅವರನ್ನು ಎಂಎಲ್‌ಸಿ ಮಾಡಿ, ಮತ್ತೆ ಮಂತ್ರಿ ಮಾಡುತ್ತೇವೆ ಎನ್ನುವ ಜೆಡಿಎಸ್‌ ನಡೆ ಬಿಜೆಪಿ ಪಾಳಯಕ್ಕೆ ತುಸು ಬಿಸಿ ಮುಟ್ಟಿಸಿದೆ. ಅರ್ಥಾತ್‌ ಈ ಉಪಚುನಾವಣೆ ರಾಜ್ಯ ರಾಜಕೀಯದ, ಅದರಲ್ಲೂ ಘಟಾನುಘಟಿ ರಾಜಕಾರಣಿಗಳ ಅವಕಾಶಗಳಿಗೆ ಮತ್ತೂಂದು ಮಜಲು ನೀಡುತ್ತಿರುವುದಂತೂ ಸ ತ್ಯ. ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ಕಾಂಗ್ರೆಸ್‌ನ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಹಾಗೂ ಜೆಡಿಎಸ್‌ನ ಪರಮೋತ್ಛ ನಾಯಕ ಎಚ್‌.ಡಿ. ದೇವೇಗೌಡ ಮತ್ತವರ ಪುತ್ರ ಎಚ್‌.ಡಿ. ಕುಮಾರಸ್ವಾಮಿ ಅವರ ರಾಜಕೀಯ ಪಟ್ಟು ಮತ್ತು ಭವಿಷ್ಯ ಈ ಬಾರಿ ಒರೆಗೆ ಹಚ್ಚುವಂತಾಗಿದೆ. ಜತೆಗೆ ಭವಿಷ್ಯವೂ ನಿರ್ಧಾರವಾಗಲಿದೆಯೇ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.

ಮುಂದೆ ಸಲೀಸಾಗಿ ಮುಖ್ಯಮಂತ್ರಿ ಆಗುತ್ತೇನೆ ಎಂಬ ಭ್ರಮೆಯಲ್ಲೇ ಇದ್ದ ಸಿದ್ದರಾಮಯ್ಯ ಅವರ ಸರ್ಕಾರವನ್ನು ಜನ ಕಿತ್ತೂಗೆದು ಸಮ್ಮಿಶ್ರ ಸರ್ಕಾರ ದತ್ತ ಬೊಟ್ಟು ಮಾಡಿದರು. ಆ ಬಳಿಕ ಕೆಲ ತಿಂಗಳು ಇದ್ದೂ ಇಲ್ಲದಂತೆ ರಾಜಕಾರಣ ಮಾಡಿದ ಸಿದ್ದರಾಮಯ್ಯ ತಮ್ಮ ಸೋಲಿನ ಪರದೆಯನ್ನು ಬೆಳಗಾವಿಯ ಜಾರಕಿಹೊಳಿ ಸೋದರರ ಬಂಡಾಯ ಸಂದರ್ಭದಲ್ಲಿ ಬದಿಗೆ ಸರಿಸಿ ಸಮ್ಮಿಶ್ರ ಸರ್ಕಾರದ ಗಂಡಾಂತರವನ್ನು ಪಾರು ಮಾಡಿದರು. ಆದರೆ, ರಾಜಕೀಯ ಪಕ್ಷಗಳಿಗೆ ಬೇಡವಾದ ಈ ಉಪಚುನಾವಣೆ ಸಿದ್ದರಾಮಯ್ಯ ಅವರಿಗಂತೂ ಮತ್ತೆ ವೇದಿಕೆಯಾಗಿದ್ದು ದಿಟ. ಉಪಚುನಾವಣಾ ಸಮರದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಭಾಷಣಗಳ ಮೂಲಕ
ಪ್ರಮುಖವಾಗಿ ಬಳ್ಳಾರಿಯಲ್ಲಿ ಗಣಿಧಣಿಗಳಿಗೆ ಸೆಡ್ಡುಹೊಡೆಯುತ್ತಲೇ, ಹಳೆಯ ವರಸೆಯಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತಿನ ಕೂರಂಬುಗಳನ್ನು ಎಸೆಯುತ್ತಲೇ ಮತ್ತೆ ಮುಂಚೂಣಿಗೆ ಬಂದಿದ್ದಾರೆ. ಅವರಿಲ್ಲದೇ ಕಾಂಗ್ರೆಸ್‌ ಇಲ್ಲವೇನೋ ಅನ್ನುವುದು
ರಾಜಕೀಯ ಪಡಸಾಲೆಯಲ್ಲಿ ಭಾಸವಾಗಿದೆ. ಜನಾರ್ದನ ರೆಡ್ಡಿ, ಸಿದ್ದರಾಮಯ್ಯ ಅವರ ಪುತ್ರನ ಸಾವಿನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಸ್ವತಃ ಬಿಜೆಪಿ ನಾಯಕರಿಂದ ಛೀಮಾರಿಗೊಳಗಾದರು. ಇದು ರಾಜಕೀಯವಾಗಿ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು “ಅನುಕಂಪದ’ ಅನುಕೂಲವನ್ನು ಸೃಷ್ಟಿಸಿರುವ ಸಾಧ್ಯತೆಯಿದೆ.

ಆದರೆ, ಕಾಂಗ್ರೆಸ್‌ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲೇ  ಆಪತಾºಂಧವನಾಗಿರುವ ಒಕ್ಕಲಿಗ ನಾಯಕ ಡಿ.ಕೆ.ಶಿವಕುಮಾರ್‌ ನಿಧಾನವಾಗಿ “ಕನಕಪುರ ರಿಪಬ್ಲಿಕ್‌’ನಿಂದ “ಬೆಳಗಾವಿ ಮತ್ತು ಬಳ್ಳಾರಿ ರಿಪಬ್ಲಿಕ್‌’ಗೆ ವಿಸ್ತರಿಸಿಕೊಳ್ಳುತ್ತಿರುವುದು ಹೊಸ ಬೆಳವಣಿಗೆ. ಸಿದ್ದರಾಮಯ್ಯ ಬಳಿಕ ಡಿ.ಕೆ.ಶಿ ಅನ್ನುವ ವಾತಾವರಣ ಸೃಷ್ಟಿಗೆ ರಾಮನಗರದ ಬಿಜೆಪಿ ಅಭ್ಯರ್ಥಿಯನ್ನು ಕಾಂಗ್ರೆಸ್‌ಗೆ ವಾಪಸಾಗಿಸಿ ಆ ಪಕ್ಷಕ್ಕೆ ಅಭ್ಯರ್ಥಿಯೇ ಇಲ್ಲದಂತೆ ಮಾಡಿರುವುದು ಮತ್ತಷ್ಟು ಕಾರಣವಾಗಿದೆ. ರಾಜಕೀಯ ಚತುರತೆ ಹೆಚ್ಚಿಸಿಕೊಳ್ಳುತ್ತಿರುವ ಅವರು
ಒಂದೆಡೆ ದೋಸ್ತಿ ಪಕ್ಷ ಜೆಡಿಎಸ್‌ ಅಭ್ಯರ್ಥಿ ಅನಾಯಾಸ ಗೆಲುವಿಗೆ ಶ್ರಮಿಸುತ್ತಲೇ ತಮ್ಮನ್ನು ಐಟಿ ದಾಳಿಯಿಂದ ಕಂಗೆಡುವಂತೆ ಮಾಡುತ್ತಿರುವ ಬಿಜೆಪಿಗೆ ಮುಖಭಂಗ ಮಾಡಿದ್ದಾರೆ. ಬಳ್ಳಾರಿಯಲ್ಲೂ ಉಗ್ರಪ್ಪ ಗೆಲುವಿಗೆ ಯತ್ನಿಸುತ್ತಾ ತಾವು ಜಾತಿಯೊಂದರ ನಾಯಕನಲ್ಲ, ಬದಲಿಗೆ ಮಾಸ್‌ಲೀಡರ್‌ ಆಗಬೇಕೆನ್ನುವ ಅವರ ಆಸೆಗೆ ಚುನಾವಣೆ ಉತ್ತರ ನೀಡಲಿದೆ.

ಬಿಜೆಪಿಯ ರಾಜ್ಯದ ಉತ್ಛ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರಿಗೂ ಈ ಉಪಚುನಾವಣೆ ನಿಧಾನವಾಗಿ ಅಗ್ನಿ ಪರೀಕ್ಷೆಯಾಗಿ ಪರಿಣಮಿಸಿದೆ. ಪುತ್ರ ಬಿ.ವೈ. ರಾಘವೇಂದ್ರ ಅವರ ಗೆಲುವು ಅನಾಯಾಸವಾಗಿದೆ ಎನ್ನುವಷ್ಟರಲ್ಲೇ, ಜೆಡಿಎಸ್‌ನ ಮಧು ಬಂಗಾರಪ್ಪ
ಕಣಕ್ಕಿಳಿದಿರುವುದು ಮತ್ತು ಮಾಜಿ ಪ್ರಧಾನಿ ಎಚ್‌,ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ ಮತ್ತಿತರರು ಅಹಿಂದ ಮತಗಳ ಜತೆ ಒಕ್ಕಲಿಗ ಮತಗಳ ಕ್ರೋಢೀಕರಣಕ್ಕೆ ಯತ್ನಿಸಿರುವುದು, ಮಧು ಅವರನ್ನು ಪ್ರಮುಖ ಈಡಿಗ ನಾಯಕನಂತೆ ಬಿಂಬಿಸಿರುವುದು ಯಡಿಯೂರಪ್ಪ ಅವರ ಚಿಂತೆಗೆ ಕಾರಣವಾಗಿದೆ. ಪುತ್ರನ ಗೆಲುವು ಅವರ ರಾಜಕೀಯ
ಭವಿಷ್ಯವನ್ನೂ ಅವಲಂಬಿಸಿದೆ. ಹಾಗಾಗಿ ಶಿವಮೊಗ್ಗದಲ್ಲೇ ಯಡಿಯೂರಪ್ಪ ಮೊಕ್ಕಾಂ ಹೂಡಿರುವುದು ರಾಮನಗರ, ಬಳ್ಳಾರಿ ಘಟನೆಗಳನ್ನು ನಿಯಂತ್ರಿಸುವುದಕ್ಕೆ ತೊಂದರೆಯಾಗಿದೆ. ವಿಶೇಷ ಎಂದರೆ, ಬಳ್ಳಾರಿಯಲ್ಲಿ ಶ್ರೀರಾಮುಲು ತಮ್ಮ ಸೋದರಿ ಶಾಂತಾ ಗೆಲುವಿಗೆ ಪಣತೊಟ್ಟಿದ್ದು, ಪ್ರಮುಖವಾಗಿ ನಾಯಕ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಬಿಜೆಪಿಯಲ್ಲಿ ತಾನೊಬ್ಬ ಹಿಂದುಳಿದ
ವರ್ಗದ ನಾಯ ಕ ನಾಗಿ ಪ್ರಬಲವಾಗಿ ಬೆಳೆಯಲು ಹರಸಾಹಸ ಮಾಡುತ್ತಿದ್ದಾರೆ. ಅವರ ಯತ್ನಕ್ಕೂ ಈ ಚುನಾವಣೆ ಉತ್ತರ ನೀಡಲಿದೆ.

ಜೆಡಿಎಸ್‌ ಪಾಳಯಕ್ಕೆ ಅಂಥದ್ದೇನೂ ಸತ್ವ ಪರೀಕ್ಷೆಯಿಲ್ಲ. ಶಿವಮೊಗ್ಗ ತನ್ನ ತೆಕ್ಕೆಗೆ ಬಂದರೆ, ಪಕ್ಷದ ವಿಸ್ತರಣೆಗೆ ಹೆಚ್ಚು ಅನುಕೂಲ ಆಗಲಿದೆ. ಇತ್ತ ಮಂಡ್ಯವನ್ನು ತನ್ನ ಹಿಡಿತ ಬಿಗಿಗೊಳಿಸುವ ಧಾವಂತದಲ್ಲಿ ಜೆಡಿಎಸ್‌ ಇದ್ದಂತಿದೆ. ರಾಮನಗರದಲ್ಲಿ ಜೆಡಿಎಸ್‌ ತಾನೇ ಆದ್ವಿತೀಯ ಅನ್ನುವುದನ್ನು ಸಾಬೀತು ಪಡಿಸಲು ಹೊರಟಿದೆ. ಮಾಜಿ ಪ್ರಧಾನಿ ದೇವೇಗೌಡರ ಪಾರುಪತ್ಯ ಮತ್ತೆ ಮುಂದುವರಿದು, ಅವರ ಹೊಸ ರಾಜಕೀಯ ಆಟಗಳು ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳನ್ನು ಹದ್ದುಬಸ್ತಿನಲ್ಲಿಡಲು ಪ್ರಯೋಗವಾಗುತ್ತಲೇ ಇದೆ. ಕಾಂಗ್ರೆಸ್‌ ಪಕ್ಷದ ಜತೆಗಿದ್ದುಕೊಂಡೇ ಶಿವಮೊಗ್ಗವನ್ನು ತಮ್ಮ ಹತೋಟಿಗೆ ಪಡೆದು ಕಾಂಗ್ರೆಸ್‌ ಪಕ್ಷವನ್ನು  ಅಸಹಾಯಕವನ್ನಾಗಿಸುತ್ತದೆಯೇ ಎಂಬುದನ್ನು ಮುಂದಿನ ದಿನಗಳು ಹೇಳಲಿವೆ.

ಮನೆ ಒಡೆಯುವುದೇ ಬಿಜೆಪಿ ಕೆಲಸ: ಡಿಕೆಸು 
ಕುಟುಂಬವನ್ನು ಒಡೆಯುವುದೇ ಬಿಜೆಪಿ ಕೆಲಸವಾಗಿದೆ. ಸಿ.ಎಂ. ಲಿಂಗಪ್ಪ ಅವರ ಪುತ್ರ ಚಂದ್ರಶೇಖರ್‌ ಅವರನ್ನು ಬಿಜೆಪಿಗೆ ಸೇರಿಸಿಕೊಂಡು  ಅಭ್ಯರ್ಥಿ ಮಾಡಿ ಬಲಿಪಶು ಮಾಡಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿದು ಮಾತೃ ಪಕ್ಷಕ್ಕೆ ಮರಳುತ್ತಿರುವ ಚಂದ್ರಶೇಖರ್‌ ತೀರ್ಮಾನವನ್ನು ಸ್ವಾಗತಿಸುತ್ತೇನೆ ಎಂದು ಸಂಸದ ಡಿ.ಕೆ. ಸುರೇಶ್‌ ಹೇಳಿದ್ದಾರೆ. ಚಂದ್ರಶೇಖರ್‌ ಮೂಲತಃ ಕಾಂಗ್ರೆಸ್‌ನವರು. ಬಿಜೆಪಿಯವರು ಇವರ ಕೈಗೆ ಬಿಜೆಪಿ ಬಾವುಟ ಕೊಟ್ಟು ಹೋದವರು ತಿರುಗಿ ನೋಡಿಲ್ಲ. ಮಂಡ್ಯ, ಶಿವಮೊಗ್ಗ, ಬಳ್ಳಾರಿಯಲ್ಲಿ ಗೆಲ್ಲಲು ಹೋರಾಟ ಮಾಡುತ್ತಿದ್ದಾರೆ. ಆದರೆ, ರಾಮನಗರದ ಕಡೆಗೆ ತಿರುಗಿ ನೋಡಿಲ್ಲ. ಹೀಗಾಗಿ ಅವರ ಧೋರಣೆ ಯಿಂದ ಬೇಸತ್ತು ಚಂದ್ರಶೇಖರ್‌ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ತಾವು ಚುನಾವಣೆಯಿಂದ ಹಿಂದೆ ಸರಿದಿರುವ ಬಗ್ಗೆ ಚುನಾವಣಾ ಆಯೋಗಕ್ಕೂ ತಿಳಿಸಿದ್ದಾರೆ ಎಂದು ಹೇಳಿದರು. ಬಿಜೆಪಿ ನಾಯಕರು ನೇರವಾಗಿ ಅಧಿಕಾರ ಹಿಡಿಯಲು ಸಾಧ್ಯವಾಗದೇ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಪ್ರಯತ್ನ ನಡೆಸಿದ್ದಾರೆ. ನ. 7ರಂದು ಹೊಸ ಸರ್ಕಾರ ರಚನೆ ಆಗಲಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ಸ್ಪಷ್ಟಪಡಿಸಬೇಕು ಎಂದು ಡಿ.ಕೆ. ಸುರೇಶ್‌ ಆಗ್ರಹಿಸಿದರು.

ನವೀನ್‌ ಅಮ್ಮೆಂಬಳ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ