ಮಳೆ ನಡುವೆಯೂ ಸಡಗರದ ಗಣೇಶ ಚತುರ್ಥಿ

Team Udayavani, Sep 15, 2018, 12:05 PM IST

ಬೆಂಗಳೂರು: ನಗರದೆಲ್ಲೆಡೆ ಗುರುವಾರ ಮಳೆಯ ನಡುವೆಯೂ ಸಡಗರ ಸಂಭ್ರಮದಿಂದ ಗಣೇಶ ಚತುರ್ಥಿ ಆಚರಿಸಲಾಯಿತು. ಯುವಕರು, ಪುಟ್ಟ ಮಕ್ಕಳು ಹಾಗೂ ಮಹಿಳೆಯರು ಮುಂಜಾನೆಯಿಂದಲೇ ಗಣೇಶನ ಸ್ವಾಗತಕ್ಕೆ ಸಂಭ್ರಮದಿಂದ ಸಿದ್ಧತೆ ನಡೆಸಿದ್ದರು. ಅಂಗಡಿಯಿಂದ ಗಣೇಶನ ಮೂರ್ತಿಗಳನ್ನು ಖರೀದಿಸುವ ವೇಳೆ ಅಕ್ಕಿ ಮತ್ತು ಸಗಣಿಯುಂಡೆಯಲ್ಲಿ ಗರಿಕೆ ಇರಿಸಿ, ಕುಂಕುಮ ಹಚ್ಚಿ ಪೂಜೆ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.

ಭಾದ್ರಪದ ಶುಕ್ಲಪಕ್ಷದ ಚೌತಿಯಂದು ಮನೆಗೆ ಆಗಮಿಸಿದ ಗಣೇಶ ಮೂರ್ತಿಗೆ ಮಹಿಳೆಯರು ವಿವಿಧ ಅಲಂಕಾರಗಳನ್ನು ಮಾಡಿ ಪೂಜೆ ಸಲ್ಲಿಸಿದರು. ಪಂಚೆ ಉಡಿಸಿ, ಕೊಡುಬಳೆ ಹಾರ, ಚಕ್ಕುಲಿ ಹಾರ, ಕರ್ಜಿಕಾಯಿ ಹಾರ, ಜರಿ, ಟಿಕ್ಕಿ ಹಾಗೂ ಬಣ್ಣದ ಕಾಗದಗಳಿಂದ ಮಾಡಿದಂತಹ ಹಾರ, ಹೂವಿನ ಹಾರ ಇತ್ಯಾದಿಗಳನ್ನು ಹಾಕಿ ಅಲಂಕಾರ ಮಾಡಲಾಗಿತ್ತು.

ಸರ್ವ ವಿಘ್ನ ನಿವಾರಕ ವಿನಾಯಕನಿಗೆ ಪೂಜೆ ಸಲ್ಲಿಸಿದ ನಂತರ, ಭಕ್ತರು ವಿವಿಧ ಶೋಕ್ಲಗಳನ್ನು ಪಠಿಸಿದರು. ಮೋದಕ, ಕಡುಬು, ಚಕ್ಕುಲಿ, ನಿಪ್ಪಟ್ಟು, ಕೊಡುಬಳೆ, ರವೆ ಉಂಡೆ, ಹಣ್ಣು ಹಂಪಲನ್ನು ಇಟ್ಟು ನೈವೈದ್ಯ ಮಾಡಿದರು. ಸಂಜೆ ವೇಳೆಗೆ ಪುಟ್ಟ ಮಕ್ಕಳು, ಮಹಿಳೆಯರು ತಮ್ಮ ಅಕ್ಕಪಕ್ಕದ ಮನೆಯಲ್ಲಿ ಇರಿಸಿದ ಗಣೇಶ ಮೂರ್ತಿಗಳಿಗೆ ಅಕ್ಷತೆ ಹಾಕಿ ನಮಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಗಣೇಶನನ್ನು ಕಾಣಲು ಬಂದಂತಹ ಹೆಣ್ಣು ಮಕ್ಕಳಿಗೆ ಅರಿಶಿಣ ಕುಂಕುಮ ಹಾಗೂ ಸಿಹಿ ಪದಾರ್ಥಗಳನ್ನು ನೀಡಿದರು.

ಅರ್ಪಾಟ್‌ಮೆಂಟ್‌ಗಳಲ್ಲಿ ಗಣಪ: ಐಟಿ ಬಿಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಮಾಡುತ್ತಿರುವ ಅರ್ಪಾಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿರುವವರು ಅರ್ಪಾರ್ಟ್‌ಮೆಂಟ್‌ಗೆ ಒಂದರಂತೆ ದೊಡ್ಡ ಗಣೇಶ ಮೂರ್ತಿಗಳನ್ನು ಕೂರಿಸಿ ಸಡಗರದಿಂದ ಹಬ್ಬ ಆಚರಿಸಿದರು. ಈ ಬಾರಿ ಬಹುತೇಕ ಮಂದಿ ಮಣ್ಣಿನ ಗಣೇಶಮೂರ್ತಿಗಳಿಗೆ ಆದ್ಯತೆ ನೀಡಿದ್ದು ವಿಶೇಷವಾಗಿತ್ತು. ಸಂಜೆ ವೇಳೆಗೆ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದ ಮಕ್ಕಳು ನಾಟಕ, ನೃತ್ಯ ಪ್ರದರ್ಶನ ನೀಡಿದರು.

ದೇವಾಲಯಗಳಲ್ಲಿ ಭಕ್ತಿ-ಭಾವ: ನಗರದಲ್ಲಿರುವ ವಿವಿಧ ವಿನಾಯಕ ದೇವಾಯಗಳಿಗೆ ಮುಂಜಾನೆಯಿಂದಲೇ ಭಕ್ತರು ಆಗಮಿಸುತ್ತಿದ್ದರು. ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಲು ಭಕ್ತರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಬಸನಗುಡಿಯ ದೊಡ್ಡ ಗಣೇಶನ ದೇವಸ್ಥಾನದಲ್ಲಿ ಗಣಪತಿಗೆ ಹಾಲು, ಮೊಸರು, ಜೇನುತುಪ್ಪ, ಎಳನೀರಿನ ಅಭಿಷೇಕ ಮಾಡಲಾಯಿತು. ಅಲ್ಲದೆ, ವಿವಿಧ ಬಗೆಯ ಹೂವುಗಳಿಂದ ಮೂಷಿಕ ವಾಹನನನ್ನು ಅಲಂಕರಿಸಲಾಗಿತ್ತು. ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಜಯನಗರ 4ನೇ ಬಡಾವಣೆಯಲ್ಲಿರುವ ಪವರ್‌ ಗಣೇಶ ದೇವಸ್ಥಾನ, ಕೋರಮಂಗಲದ ಕೆಎಚ್‌ಬಿ ಕಾಲೋನಿಯ ಟೆಕ್ಕಿ ಗಣೇಶ ದೇವಾಲಯ, ಹನುಮಂತನಗರದಲ್ಲಿರುವ ಪಂಚಮುಖೀ ಗಣೇಶ ದೇವಾಲಯ ಸೇರಿದಂತೆ ವಿವಿಧ ಗಣಪತಿಯ ದೇವಾಲಯಗಳಲ್ಲಿ ಬೆಣ್ಣೆ, ಜೇನುತುಪ್ಪ, ಹಾಲು, ಮೊಸರು, ಎಳನೀರು ಸೇರಿದಂತೆ ಹಲವು ಪದಾರ್ಥಗಳಿಗೆ ದೇವರಿಗೆ ಅಭಿಷೇಕ ಮಾಡಲಾಯಿತು. ನಂತರ ವಿವಿಧ ರೀತಿಯ ಪೂಜೆ ಮಾಡಿ, ಹೋಮ-ಹವನ ನೆರವೇರಿಸಲಾಯಿತು.

ಬಡಾವಣೆಗಳಲ್ಲಿ ಮೆರವಣಿಗೆ: ನಗರದಲ್ಲಿರುವ ಹಲವಾರು ಗಣೇಶೋತ್ಸವ ಸಮಿತಿಗಳು ತಮ್ಮ ಬಡಾವಣೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಗುರುವಾರ ಮುಂಜಾನೆ ಮೂರ್ತಿ ಪ್ರತಿಷ್ಠಾಪಿಸಿದ ನಂತರ ವಿವಿಧ ರೀತಿಯಲ್ಲಿ ಅಲಂಕಾರ ಮಾಡಿದರು. ಕೆಲವು ಗಣೇಶೋತ್ಸವ ಸಮಿತಿಗಳು ಪರಿಸರ ಜಾಗೃತಿ ಹಾಗೂ ಸಹಬಾಳ್ವೆಯ ಸಂದೇಶ ಸಾರುವಂತಹ ಗಣೇಶ ಮೂರ್ತಿಗಳನ್ನು ಕೂರಿಸಿದ್ದು ವಿಶೇಷವಾಗಿತ್ತು.

ಮಧ್ಯಾಹ್ನದ ವೇಳೆಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಸಣ್ಣ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ಯುವಕರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಾದ ಗೃಹಿಣಿಯರಿಗೆ ಗೃಹೋಪಯೋಗಿ ವಸ್ತುಗಳು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ, ಯುವಕರಿಗೆ ಟಿ-ಶರ್ಟ್‌, ಕ್ರಿಕೆಟ್‌ ಬ್ಯಾಟ್‌, ಚೆಂಡು ಸೇರಿದಂತೆ ಮತ್ತಿತರ ವಸ್ತುಗಳನ್ನು ಬಹುಮಾನ ರೂಪದಲ್ಲಿ ನೀಡಲಾಯಿತು. ಸಂಜೆ ವೇಳೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಂತರ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಭಾರತೀಯ ಪಾರಂಪರಿಕ ಶಿಕ್ಷಣ ಪದ್ಧತಿ ಜತೆಗೆ ಶಿಕ್ಷಣಕ್ಕೆ ಹೊಸ ಭಾಷ್ಯ ಬರೆಯಲು ಬೆಂಗಳೂರಿನ ಬಸವೇಶ್ವರ ನಗರದ ಬಿಇಎಂಎಲ್ ಬಡಾವಣೆಯ ಮ್ಯಾಕ್ಸ್‌ಮುಲ್ಲರ್‌...

  • ಬೆಂಗಳೂರು: ಬೆಂಗಳೂರು ಉತ್ತರ ತಾಲೂಕು, ಕಾಚೋಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಲೆಗಳಲ್ಲಿ ಮಕ್ಕಳಿಂದ ಶಾಲಾ ಶೌಚಾಲಯ ಶುಚಿಗೊಳಿಸಿರುವ ವಿಷಯ ಶನಿವಾರ...

  • ಬೆಂಗಳೂರು: ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಭಯೋತ್ಪಾದಕರು ಸಂಚು ರೂಪಿಸಿರುವ ಬಗ್ಗೆ ಗುಪ್ತಚರ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ...

  • ಕೆಂಗೇರಿ: ನಗರದಲ್ಲಿ ಹೆಚ್ಚುತ್ತಿರುವ ಪಿಒಪಿ ಗಣೇಶಮೂರ್ತಿ ತಯಾರಿಕೆ ಘಟಕಗಳ ಮೇಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್‌ ಅವರ...

  • ಬೆಂಗಳೂರು: ನಗರ ಪೊಲೀಸ್‌ ಆಯುಕ್ತರ ಹುದ್ದೆ ವಿಚಾರದಲ್ಲಿ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳ ಕಾನೂನು ಸಂಘರ್ಷ ಅಂತ್ಯಗೊಂಡಿದೆ. ಎಡಿಜಿಪಿ ಭಾಸ್ಕರ್‌ ರಾವ್‌...

ಹೊಸ ಸೇರ್ಪಡೆ