ಕ್ಲಚ್ ಬದಲು ಆಕ್ಸಿಲೇಟರ್ ಒತ್ತಿ 2 ಜೀವ ಕಳೆದ
Team Udayavani, Feb 7, 2023, 11:05 AM IST
ಬೆಂಗಳೂರು: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಶಾಸಕ ಹರತಾಳು ಹಾಲಪ್ಪ ಅವರ ಬೀಗರ ಕಾರಿನ ಚಾಲಕ ಸರಣಿ ಅಪಘಾತ ಎಸಗಿದ್ದು, ದುರ್ಘಟನೆಯಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಹಲಸೂರು ಗೇಟ್ ಸಂಚಾರ ಠಾಣೆವ್ಯಾಪ್ತಿಯ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂಭಾಗ ಸೋಮವಾರ ನಡೆದಿದೆ.
ಇದೇ ವೇಳೆ ನಾಲ್ವರು ಗಾಯಗೊಂಡಿದ್ದಾರೆ.ಮತ್ತೂಂದೆಡೆ ಕಾರಿನಲ್ಲಿ ಶಾಸಕಹರತಾಳು ಹಾಲಪ್ಪ ಹೆಸರಿನ ಪಾಸ್ ಹೊಂದಿರುವ ಸ್ಟೀಕರ್ ಪತ್ತೆಯಾಗಿದೆ.
ಎಚ್‌ಬಿಆರ್ ಲೇಔಟ್ ನಿವಾಸಿ, ವಾಹನಗಳ ಬಿಡಿ ಭಾಗಗಳ ಮಾರಾಟಗಾರ ಮಜೀದ್ ಖಾನ್ (36) ಮತ್ತು ಕೆ.ಜಿ.ಹಳ್ಳಿ ನಿವಾಸಿ, ಪಾರ್ಕಿಂಗ್ ಸ್ಥಳದ ನಿರ್ವಾಹಕ ಅಯ್ಯಪ್ಪ(60) ಮೃತರು. ಕೃತ್ಯ ಎಸಗಿದ ಕಾರು ಚಾಲಕ ಯಲ ಹಂಕ ನ್ಯೂಟೌನ್ ನಿವಾಸಿ ಮೋಹನ್ (48) ಎಂಬಾತನನ್ನು ಬಂಧಿಸಲಾಗಿದೆ.
ಘಟನೆಯಲ್ಲಿ ರಿಯಾಜ್ ಪಾಷಾ, ಮೊಹಮ್ಮದ್ ರಿಯಾಜ್, ಮೊಹಮ್ಮದ್ ಸಲೀಂ, ಶೇರ್ ಗಿಲಾನಿ ಎಂಬುವರು ಗಾಯಗೊಂಡಿದ್ದಾರೆ. ಈ ಕಾರು ಆಟೋ ಗೇರ್ ವಾಹನವಾಗಿದ್ದು, ಕಾರು ನಿಯಂತ್ರಿಸಲು ಕ್ಲಚ್ ಬದಲು ಆಕ್ಸಿಲೇಟರ್ ಒತ್ತಿದ್ದೇ ಘಟನೆಗೆ ಕಾರಣವಾಗಿದೆ.
ಗಾಬರಿಗೊಂಡು ಕ್ಲಚ್ ಒತ್ತುವ ಬದಲು, ಆಕ್ಸಿಲೇಟರ್ ಒತ್ತಿದ್ದಾನೆ. ಹೀಗೆಂದುಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಹೇಳಿದರು.
ಮಧ್ಯಾಹ್ನ 3.30ರ ಸುಮಾರಿಗೆ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂಭಾಗದಲ್ಲಿರುವ ಸಿಗ್ನಲ್ ನಲ್ಲಿ ಕೆಂಪು ದೀಪ ಕಾಣಿಸಿದೆ. ಹೀಗಾಗಿ ವಾಹನ ಸವಾರರು ವಾಹನಗಳನ್ನು ನಿಲ್ಲಿಸಿದ್ದರು. ಮಜೀದ್ ಖಾನ್ ಹೋಂಡಾ ಆಕ್ಟೀವಾದಲ್ಲಿ ಪರಿಚಯಸ್ಥ ರಿಯಾಜ್ ಪಾಷಾ ಜತೆ ನಿಂತಿದ್ದರು. ಮೊಹಮ್ಮದ್ ರಿಯಾಜ್ ಬೈಕ್‌ನ ಹಿಂಬದಿ ಅಯ್ಯಪ್ಪ ಕುಳಿತಿದ್ದರು. ಇತರೆ ಗಾಯಾಳುಗಳು ತಮ್ಮ ಬೈಕ್‌ಗಳಲ್ಲಿ ಕುಳಿತಿದ್ದರು. ಈ ವೇಳೆ ಅತೀವೇಗವಾಗಿ ಬಂದ ಇನೋವಾ ಕ್ರಿಸ್ಟಾ ಕಾರಿನ ಚಾಲಕ ಮೋಹನ್ 3 ಬೈಕ್, 2 ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಮುಜೀದ್ ಖಾನ್ ಬೈಕ್‌ಗೆ ಡಿಕ್ಕಿ ಹೊಡೆದಾಗ ಮುಜೀದ್ ಖಾನ್ ಕೆಳಗೆ ಬಿದ್ದಿದ್ದಾರೆ. ಆಗ ಕಾರು ನಿಯಂತ್ರಿಸದೆ ಚಾಲಕ ಅವರಮೇಲೆಯೇ ಕಾರು ಹತ್ತಿಸಿದ್ದಾನೆ. ಅದರಿಂದ ತೀವ್ರರಕ್ತಸ್ರಾವವಾಗಿ ಮುಜೀದ್ ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನು ಮತ್ತೂಂದು ಬೈಕ್ ನಲ್ಲಿ ಹಿಂಬದಿ ಕುಳಿತಿದ್ದ ಅಯ್ಯಪ್ಪ ಕೂಡ ಕೆಳಗೆ ಬಿದ್ದಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆಮೃತಪಟ್ಟಿದ್ದಾರೆ. ಇನ್ನು 2 ಕಾರಿನಲ್ಲಿ ಕುಳಿತಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ವಾಹನಗಳು ಜಖಂಗೊಂಡಿವೆ.
ಶಾಸಕ ಹಾಲಪ್ಪ ಬೀಗರ ವಾಹನ :
ಶಾಸಕ ಹರತಾಳು ಹಾಲಪ್ಪ ಪುತ್ರಿ ಯಲಹಂಕ ನಿವಾಸಿ, ನಿವೃತ್ತ ಅರಣ್ಯಾಧಿಕಾರಿ ರಾಮು ಸುರೇಶ್ ಎಂಬುವರ ಪುತ್ರನ ಜತೆ ವಿವಾಹವಾಗಿದ್ದಾರೆ. ಜಪ್ತಿ ಮಾಡಲಾಗಿರುವ ಕಾರು ರಾಮುಸುರೇಶ್ ಹೆಸರಿನಲ್ಲಿದೆ. ಆದರೆ, ಭಾನುವಾರ ಹಾಲಪ್ಪರ ಪುತ್ರಿ ತಂದೆ ಹಾಲಪ್ಪರ ಹೆಸರಿನಲ್ಲಿ ಸ್ಟಿಕರ್ ಅನ್ನುಮಾವನ ಕಾರಿಗೆ ಹಾಕಿಕೊಂಡು ಸಾಗರಕ್ಕೆ ತೆರಳಿದ್ದರು. ಸೋಮವಾರ ಮುಂಜಾನೆ ಇದೇ ಕಾರಿನಲ್ಲಿ ಬೆಂಗಳೂರಿಗೆಬಂದಿದ್ದಾರೆ. ಆದರೆ, ಸ್ಟಿಕರ್ ತೆಗೆದಿಲ್ಲ. ಚಾಲಕ ಮೋಹನ್ ಆಕಾರು ತಂದು ಅಪಘಾತ ಎಸಗಿದ್ದಾನೆ ಎಂದು ಹಾಲಪ್ಪಅಳಿಯ ಮಾಹಿತಿ ನೀಡಿದ್ದಾರೆ ಎಂದು ಸಂಚಾರ ಠಾಣೆ ಪೊಲೀಸರು ಮಾಹಿತಿ ನೀಡಿದರು.
ಯಾವ ಕಾರಣಕ್ಕೆ ಸ್ಟಿಕರ್ ಪಾಸ್? : ಸಾಮಾನ್ಯವಾಗಿ ಶಾಸಕರಿಗೆ ಸ್ಟಿಕರ್ ಪಾಸ್ ಕೊಡುವುದುವಿಧಾನಸೌಧ ಮತ್ತು ವಿಕಾಸಸೌಧ ಪ್ರವೇಶಿಸಲು ಅಥವಾ ಟೋಲ್‌ಗೇಟ್‌ನಲ್ಲಿ ಉಚಿತ ಪ್ರವೇಶ ಹಾಗೂ ಇತರೆ ಸೌಲಭ್ಯಗಳಿಗಾಗಿ. ಆದರೆ, ಹರತಾಳು ಹಾಲಪ್ಪ ಪುತ್ರಿ ಯಾವ ಕಾರಣಕ್ಕೆ ಮಾವ ರಾಮುಸುರೇಶ್ ಕಾರಿಗೆ ತಮ್ಮ ತಂದೆಯ ಶಾಸಕರ ಸ್ಟಿಕರ್ ಬಳಸಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ. ಘಟನೆ ಸಂಬಂಧ ತನಿಖೆ ನಡೆಯಬೇಕಿದೆ ಎಂದು ಪೊಲೀಸರು ಸಂಚಾರ ಠಾಣೆ ಹೇಳಿದರು.