ಮುಂದಿನ ವಾರ ಕೇರಳ ಸಿಎಂ ಜತೆ ಎಚ್ಡಿಕೆ ಸಭೆ?
Team Udayavani, Jul 30, 2018, 7:00 AM IST
ಬೆಂಗಳೂರು: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಿರುವುದನ್ನು ತೆರವುಗೊಳಿಸುವಂತೆ ಒತ್ತಾಯಿಸುತ್ತಿರುವ ಕೇರಳ ಸರ್ಕಾರದ ಜತೆ ಮುಂದಿನವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಕೇರಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಕುರಿತಂತೆ ಇರುವ ವಿವಾದದ ಬಗ್ಗೆ ಮುಂದಿನ ವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜತೆ ಸಮಾಲೋಚನೆ ನಡೆಸುವುದಾಗಿ ಹೇಳಿದ್ದಾರೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧವಿದ್ದು, ಇದನ್ನು ತೆರವುಗೊಳಿಸುವಂತೆ ಕಳೆದ ಹಲವು ವರ್ಷಗಳಿಂದ ಕೇರಳ ಸರ್ಕಾರ ಪ್ರಯತ್ನ ಮಾಡುತ್ತಲೇ ಇದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಅದಕ್ಕೆ ಒಪ್ಪುತ್ತಿಲ್ಲ. ಪ್ರಕರಣ ಸುಪ್ರೀಂಕೋರ್ಟ್ನಲ್ಲಿದ್ದು, ಎರಡೂ ರಾಜ್ಯಗಳು ಒಟ್ಟಾಗಿ ಒಂದು ತೀರ್ಮಾನ ಕೈಗೊಂಡು ಈ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತುಕತೆಗೆ ಮುಂದಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.