
ಕೆಟ್ಟ ಭವಿಷ್ಯ ಹೇಳಿದ್ದಕ್ಕೆ ಹಲ್ಲೆ: ಕೊಲೆ !
Team Udayavani, Mar 25, 2023, 1:21 PM IST

ಬೆಂಗಳೂರು: ಕುಡಿದ ಮತ್ತಿನಲ್ಲಿ ಕೈ ನೋಡಿ ಕೆಟ್ಟದಾಗಿ ಭವಿಷ್ಯ ಹೇಳಿದ್ದಕ್ಕೆ ಸ್ನೇಹಿತರಿಬ್ಬರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಗೋವಿಂದರಾಜನಗರದ ನಿವಾಸಿ ನರೇಶ್ (34) ಕೊಲೆಯಾದವ. ಮುತ್ತುರಾಜ್ ಪರಾರಿಯಾಗಿರುವ ಆರೋಪಿ.
ನರೇಶ್ ಗಾರೆ ಕೆಲಸ ಮಾಡುತ್ತಿದ್ದರೆ ಮುತ್ತುರಾಜ್ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಇಬ್ಬರೂ ತಮ್ಮ ಸಹಚರರ ಜತೆಗೆ ಶುಕ್ರವಾರ ಬೆಳಗ್ಗೆ ಗೋವಿಂದರಾಜನಗರ ಠಾಣಾ ವ್ಯಾಪ್ತಿಯ ಬಾರ್‌ವೊಂದಕ್ಕೆ ಹೋಗಿ ಮದ್ಯಪಾನ ಮಾಡಿದ್ದರು. ಕುಡಿದ ಮತ್ತಿನಲ್ಲಿ ನರೇಶ್ ಸ್ನೇಹಿತ ಮುತ್ತುರಾಜ್ ಕೈ ನೋಡಿ ಭವಿಷ್ಯ ಹೇಳುವುದಾಗಿ ತಮಾಷೆ ಮಾಡಿದ್ದ. ಬಳಿಕ ಕೆಟ್ಟದಾಗಿ ಭವಿಷ್ಯ ನುಡಿದಿದ್ದ. ಇದರಿಂದ ಆಕ್ರೋಶಗೊಂಡ ಮುತ್ತುರಾಜ್ ಬಾರ್‌ನಿಂದ ಹೊರ ಬಂದ ಬಳಿಕ ನರೇಶ್ ಜತೆಗೆ ಜಗಳವಾಡಿದ್ದ. ರಸ್ತೆ ಬದಿ ಬಿದ್ದಿದ್ದ ಕಲ್ಲು ಎತ್ತಿಕೊಂಡು ನರೇಶ್ ಮುಖಕ್ಕೆ ಗುದ್ದಿದ್ದ. ಇದರಿಂದ ನರೇಶ್ ಗಾಯಗೊಂಡು ಮೃತಪಟ್ಟಿದ್ದಾನೆ.
ಇತ್ತ ನರೇಶ್ ಮೃತಪಟ್ಟಿರುವುದು ದೃಢಪಡುತ್ತಿದ್ದಂತೆ ಆರೋಪಿ ಮುತ್ತುರಾಜ್ ತಲೆಮರೆಸಿಕೊಂಡಿದ್ದು, ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
