ನಗರದಲ್ಲಿ ಯಾಕೆ ಇಷ್ಟು ಮಳೆ ಬರ್ತಿದೆ?

Team Udayavani, Sep 4, 2017, 5:15 PM IST

ವಿಜಯ ಕುಮಾರ್‌ ಚಂದರಗಿ

ಬೆಂಗಳೂರು: ಪ್ರಕೃತಿಯ ವೈಪರೀತ್ಯವೇ ಹೀಗೆ. ಮಳೆಗಾಗಿ ವಿಜ್ಞಾನಿಗಳು ಮೇಘಗಳ ಹಿಂದೆಬಿದ್ದಿದ್ದಾರೆ. ವರುಣನ ಆಗಮ ನಕ್ಕಾಗಿ ಜನ ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೆ, ನಗರದಲ್ಲಿ ಮೋಡಗಳೇ ಕಡಿದುಕೊಂಡು ಬಿದ್ದಂತೆ ಮಳೆಯಾಗುತ್ತಿದೆ. ನಗರದ ಜನ “ಮಳೆ ನಿಂತರೆ ಸಾಕು’
ಎಂದು ಬೇಡಿಕೊಳ್ಳುತ್ತಿದ್ದಾರೆ.

ಹೌದು, ಬೆಂಗಳೂರು ಎಂದರೆ ಕಾಂಕ್ರೀಟ್‌ ಕಾಡು. ಅಭಿವೃದ್ಧಿಗಾಗಿ ಬಲಿಯಾದ ನೂರಾರು ಮರಗಳು.
ವಾಹನಗಳದಟ್ಟಣೆ ಮತ್ತು ದಟ್ಟಹೊಗೆ. ಇಷ್ಟೇ ಅಲ್ಲ, ಕೆಲದಿನಗಳಿಂದ ಇದು “ಮಳೆನಾಡು’ ಆಗಿದೆ. ನಿಜ, ಹವಾಮಾನ ವೈಪರೀತ್ಯವು ಜಾಗತಿಕ ಮಟ್ಟದಲ್ಲಿ ನಕಾರಾತ್ಮಕ ಪರಿಣಾಮ ಬೀರಿದೆ. ಆದರೆ, ನಗರದ ಮಟ್ಟಿಗೆ ಇದು ಕೆಲ ಸಕಾರಾತ್ಮಕ ಅಂಶಗಳಿಗೂ ಪೂರಕವಾಗಿದ್ದು, ಮಳೆಯ ಪ್ರಮಾಣ ಹೆಚ್ಚಳಕ್ಕೂ ಕಾರಣವಾಗಿದೆ.

ಕಳೆದ 50ರಿಂದ 100 ವರ್ಷಗಳ ಅಂಕಿ-ಅಂಶಗಳನ್ನು ತೆಗೆದುಕೊಂಡರೆ ವಾಡಿಕೆ ಮಳೆ ಪ್ರಮಾಣದಲ್ಲೇ
ಗಣನೀಯವಾಗಿ ಏರಿಕೆ ಕಂಡುಬರುತ್ತಿದೆ. 1950ರಲ್ಲಿ ಇದು 700-750 ಮಿ.ಮೀ. ಇತ್ತು. 1990ರಲ್ಲಿ 800-830 ಮಿ.ಮೀ. ಆಸುಪಾಸು ತಲುಪಿತು. ಈಗ 965 ಮಿ.ಮೀ. ಆಗಿದೆ. ಇದರಲ್ಲಿ 550 ಮಿ.ಮೀ.ನಷ್ಟು ಮಳೆ ಬರೀ ನಾಲ್ಕು ತಿಂಗಳಲ್ಲೇ ಸುರಿಯುತ್ತದೆ. ಈ ನಿಟ್ಟಿನಲ್ಲಿ ಇದೊಂದು
ಒಳ್ಳೆಯ ಸೂಚನೆ ಆಗಿದೆ ಎಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವಿಶ್ರಾಂತ ಕುಲಸಚಿವ ಮತ್ತು ಹವಮಾನ ತಜ್ಞ ಪ್ರೊ.ಎಂ.ಬಿ. ರಾಜೇಗೌಡ ತಿಳಿಸುತ್ತಾರೆ.

ಆದರೆ, ನಗರದ ಸಮಸ್ಯೆಗೆ ಮಳೆ ಕಾರಣವಲ್ಲ. ನಗರ ಯೋಜನೆಯಲ್ಲಿನ ವೈಫ‌ಲ್ಯ ಗಳು ಈ ಅವಾಂತರಕ್ಕೆ ಕಾರಣ. ಮಳೆ ಹೆಚ್ಚಾಗುತ್ತಿರುವುದು ಒಂದು ಒಳ್ಳೆಯ ಸೂಚನೆ. ಅದೇ ನೀರನ್ನು ಹಿಡಿದಿಟ್ಟು, ಬೇರೆ ಬೇರೆ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಕೆಲಸ ಆಗಬೇಕು. ಆದರೆ, ಇದು ನಿರೀಕ್ಷಿತ
ಪ್ರಮಾಣದಲ್ಲಿ ಆಗುತ್ತಿಲ್ಲ. ಈ ಮಧ್ಯೆ 70-80ರಿಂದ ಈಚೆಗೆ ಮರಗಳ ಸಂಖ್ಯೆ ಇಳಿಮುಖ ವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಭೌಗೋಳಿಕ ರಚನೆ ಕಾರಣ: ಬೆಂಗಳೂರಿನಲ್ಲೇ ಅತಿ ಹೆಚ್ಚು ಮಳೆ ಸುರಿಯಲು ಇದರ ಭೌಗೋಳಿಕ ರಚನೆಯೂ ಪ್ರಮುಖ ಕಾರಣವಾಗಿದೆ. ಸುತ್ತಲಿನ ಪ್ರದೇಶಗಳಿಗೆ ಹೋಲಿಸಿದರೆ, ಬೆಂಗಳೂರು 970 ಮೀಟರ್‌ ಎತ್ತರದಲ್ಲಿದೆ. ಸಮುದ್ರ ದಿಂದ ಬರುವ ಯಾವುದೇ ಮೋಡಗಳಿಗೆ ಇದು ತಡೆಯೊಡ್ಡುತ್ತದೆ. ಹೀಗೆ ಮೋಡಗಳು ಒಂದೆಡೆ ಸಂಗ್ರಹ  ವಾದಾಗ, ಸಹಜವಾಗಿಯೇ ಮಳೆ ಸುರಿಸುತ್ತವೆ.

ಸುತ್ತಲಿನ ಪ್ರದೇಶಗಳಿಗೆ ಹೋಲಿಸಿದರೆ, ಬೆಂಗಳೂರು ಸುಮಾರು 100ರಿಂದ 150 ಮೀಟರ್‌ ಎತ್ತರದಲ್ಲಿದೆ. ಎತ್ತರದ ಪ್ರದೇಶದಲ್ಲಿದ್ದಾಗ ತಾಪಮಾನ, ಗಾಳಿಯ ಒತ್ತಡ ಸೇರಿದಂತೆ ವಾತಾವರಣದಲ್ಲಿ ಸಾಕಷ್ಟು ಏರುಪೇರುಗಳಾಗುತ್ತವೆ. ವಾಹನದಟ್ಟಣೆ, ಕಾಂಕ್ರೀಟ್‌ ಕಾಡು ಮತ್ತಿತರ
ಕಾರಣಗಳಿಂದ ನಗರದ ಉಷ್ಣಾಂಶದಲ್ಲಿ 1ರಿಂದ 2 ಡಿಗ್ರಿ ಸೆಲ್ಸಿಯಸ್‌ ಏರಿಕೆ ಕಂಡುಬಂದಿದೆ. ಇದರಿಂದ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ, ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗುತ್ತದೆ. ಆಗ ಸಹಜವಾಗಿ ಸ್ಥಳೀಯವಾಗಿ ಮೋಡಗಳು ಸೃಷ್ಟಿಯಾಗಿ ಮಳೆ ಸುರಿಸುತ್ತವೆ ಎಂದು ರಾಜ್ಯ
ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸ ರೆಡ್ಡಿ ತಿಳಿಸುತ್ತಾರೆ. 

ವೆಂ.ಸುನೀಲ್‌ ಕುಮಾರ್‌

ಬೆಂಗಳೂರು: ಗಂಟೆಗೆ 60 ಮಿಲಿ ಮೀಟರ್‌ಗೂ ಹೆಚ್ಚು ಮಳೆ ಬಿದ್ದರೆ ಅದನ್ನು ತಡೆಯುವ ಶಕ್ತಿ
ಬೆಂಗಳೂರಿಗಿಲ್ಲ ಹೌದು, ಬಿಬಿಎಂಪಿ ಹಾಗೂ ಜಲ ಮಂಡಳಿಯಲ್ಲಿರುವ ಮೂಲ ಸೌಕರ್ಯ ಹಾಗೂ ಮುನ್ನಚ್ಚರಿಕೆ ಕ್ರಮಗಳು 60 ಮಿ.ಮೀ ಮಳೆಯನ್ನು ಮಾತ್ರ ನಿಭಾಯಿಸಬಲ್ಲವು. ಅದನ್ನು ಮೀರಿದರೆ ನೆರೆ ನಿಶ್ಚಿತ.

ಬೆಂಗಳೂರಿನ ವ್ಯಾಪ್ತಿಯಲ್ಲಿ ಸುರಿಯುವ ಮಳೆ ಸರಾಗವಾಗಿ ಹರಿದು ಹೋಗುವ ರಾಜಕಾಲುವೆ, ಮೋರಿ ಹಾಗೂ ಚರಂಡಿಗಳು, ರಸ್ತೆ ಬದಿ ಬಿದ್ದ ನೀರು ಇಂಗು ವುದು ಇದೆಲ್ಲ ಲೆಕ್ಕಾಚಾರದ ಪ್ರಕಾರ 60 ಮಿ.ಮೀ. ಮಳೆ ಗಷ್ಟೇ ನಗರದಲ್ಲಿ ಜಾಗ. ಇದು ಬಿಟ್ಟು ಹೆಚ್ಚು ಮಳೆ ಬಂದರೆ ಪರಿಸ್ಥಿತಿಯಲ್ಲಿ
ನಿಭಾಯಿಸುವುದು ಸಾಧ್ಯವೇ ಇಲ್ಲ. ಹೀಗಾಗಿಯೇ ಕಳೆದ ಹದಿನೈದು ದಿನಗಳಲ್ಲಿ ಮಳೆಯಿಂದ ಉಂಟಾಗುತ್ತಿರುವ ಅನಾಹುತ ತಡೆಯಲು ಸಾಧ್ಯವಾಗುತ್ತಿಲ್ಲ. ಒಂದು ಕಡೆ ನರೆ ತಡೆಗಟ್ಟು ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳುತ್ತಾ ಹೋದಂತೆ ಮತ್ತೂಂದು ಕಡೆಯಿಂದ ಸಮಸ್ಯೆಗಳು ಎದುರಾಗುತ್ತಲೇ ಇವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 633 ಕಾಲುವೆಗಳನ್ನೊಳಗೊಂಡ 842 ಕಿಲೋ ಮೀಟರ್‌ ಉದ್ದದ
ಮಳೆನೀರು ಕಾಲುವೆಗಳಿವೆ. ಇದರಲ್ಲಿ 415.50 ಕಿ.ಮೀ. ಉದ್ದ ಪ್ರಾಥಮಿಕ ಹಾಗೂ 426.60
ಕಿ.ಮೀ. ಉದ್ದ ಮಧ್ಯಮ ನೀರುಗಾಲುವೆಗಳಾಗಿವೆ. 60 ಮಿ.ಮೀ. ಮಳೆಯ ನೀರು ಮಾತ್ರ ಈ
ಕಾಲುವೆಗಳಲ್ಲಿ ಸರಾಗವಾಗಿ ಹರಿಯಲಿದೆ. ಹೆಚ್ಚು ಮಳೆಯಾದರೆ ಕಾಲುವೆಗಳು ಉಕ್ಕಿ ಹರಿದು
ಸುತ್ತಮುತ್ತಲಿನ ಪ್ರದೇಶಗಳಿಗೆ ನುಗ್ಗಲಿದೆ. ಕಳೆದ ಹದಿನೆಂಟು ದಿನಗಳಿಂದ ನಗರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಆಗಸ್ಟ್‌ 15 ರಿಂದ 31 ರವ ರೆಗೆ 307 ಮಿಲಿ ಮೀಟರ್‌ ಮಳೆಯಾಗಿದೆ. ವಾಡಿಕೆಯಂತೆ ಸೆಪ್ಟಂಬರ್‌ ತಿಂಗಳಲ್ಲಿ 211 ಮಿ.ಮೀ. ಮಳೆಯಾಗಬೇಕು. ಆದರೆ, ಕಳೆದ
ಮೂರೇ ದಿನಗಳಲ್ಲಿ 126.9 ಮಿ.ಮೀ. (ಸೆ.1 -72 ಮಿ.ಮೀ. ಸೆ.2- 33.1 ಮಿ.ಮೀ. ಸೆ.3- 21
ಮಿ.ಮೀ.) ಮಳೆಯಾಗಿದೆ. ಅಂದರೆ ತಿಂಗಳಲ್ಲಿ ಸುರಿಯಬೇಕಾಗಿದ್ದ ಮಳೆಯ ಅರ್ಧದಷ್ಟು. ಈ ಮಳೆಗಾಲದ ಆವಧಿಯ ಜೂನ್‌ 1 ರಿಂದ ಇದು ವರೆಗೆ 563 ಮಿ.ಮೀ. ಮಳೆಯಾಗಿದೆ.

ಹೀಗಾಗಿ, ಕಾಲುವೆಗಳಲ್ಲಿ ಸಮರ್ಪಕವಾಗಿ ನೀರು ಹರಿಯದೆ, ಹಿಮ್ಮುಖವಾಗುತ್ತಿರುವುದು ಪ್ರವಾಹಕ್ಕೆ ಕಾರಣವಾಗಿದೆ. ಇದರೊಂದಿಗೆ ಕೆರೆಗಳಿಗೆ ನೀರು ಪ್ರವೇಶಿಸುವ ಸ್ಥಳಗಳಲ್ಲಿ ಫಾಲ್ಸ್‌ ಮಾದರಿಯ ವ್ಯವಸ್ಥೆಯಿದ್ದರೆ, ಕಾಲುವೆಯಲ್ಲಿ ಹರಿದು ಬರುವ ನೀರು ವೇಗವಾಗಿ ಕೆರೆಯನ್ನು ಪ್ರವೇಶಿಸುತ್ತದೆ.
ಆದರೆ, ನಗರದಲ್ಲಿ ಸದ್ಯ ಪ್ರವಾಹಕ್ಕೆ ಒಳಗಾಗುತ್ತಿರುವ ಪ್ರದೇಶಗಳು ಕೆರೆಯ ಮಟ್ಟಕ್ಕಿಂತ ಕೆಳಭಾಗದಲ್ಲಿರುವುದರಿಂದಾಗಿ ಕಾಲುವೆಯಲ್ಲಿ ನೀರು ನಿಂತಾಗ ತಗ್ಗುಪ್ರದೇಶಗಳ ಕಡೆಗೆ ಹರಿಯುತ್ತದೆ ಎಂದು ಬೃಹತ್‌ ಮಳೆನೀರು ಕಾಲುವೆಯ ವಿಭಾಗದ ಮಾಜಿ ಮುಖ್ಯ ಎಂಜಿನಿಯರ್‌ ಸಿದ್ದೇಗೌಡ ತಿಳಿಸಿದ್ದಾರೆ. 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ