ಬೀದಿ ನಾಯಿ ದಾಳಿಗೆ ಕೊನೆ ಎಂದು?

Team Udayavani, Jun 27, 2019, 3:10 AM IST

ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಬಿಬಿಎಂಪಿ ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ (ಎಬಿಸಿ) ನಡೆಸುತ್ತಿದೆ. ಆದರೆ, ಬೀದಿ ನಾಯಿಗಳ ಸಂತತಿ ಕ್ಷೀಣಿಸುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

ಇತ್ತೀಚಿನ ದಿನಗಳಲ್ಲಿ ಮತ್ತೇ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿರುವುದು ಎಬಿಸಿ ಶಸ್ತ್ರಚಿಕಿತ್ಸೆಯಲ್ಲಿ ಲೋಪಗಳಾಗುತ್ತಿರುವ ಬಗ್ಗೆ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 2018ರಲ್ಲಿ 45 ಸಾವಿರ ನಾಯಿಗಳಿಗೆ ಎಬಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದಕ್ಕೆ ಬಿಬಿಎಂಪಿ ಅಂದಾಜು 4.5ಕೋಟಿಯನ್ನು ವ್ಯಯಿಸಿದೆ.

ಆದರೆ, ಇದರ ಫ‌ಲಿತಾಂಶ ಮಾತ್ರ ಅಷ್ಟಕಷ್ಟೇ ಎನ್ನುವಂತಿದೆ. ಈ ವರ್ಷ (ಏಪ್ರಿಲ್‌ನಿಂದ) ಇಲ್ಲಿಯವರೆಗೆ 7ಸಾವಿರ ನಾಯಿಗಳಿಗೆ ಎಬಿಸಿ ನಡೆಸಲಾಗಿದೆ. ಇದಕ್ಕೆ 76ಲಕ್ಷರೂ.ಗಳನ್ನು ಖರ್ಚು ಮಾಡಲಾಗಿದೆ. ಪ್ರತಿ ವರ್ಷ ಸಾರ್ವಜನಿಕರ ಹಣ ನೀರಿನಲ್ಲಿ ಹೋಮದಂತಾಗಿದೆ.

ಬೀದಿನಾಯಿಗಳು ಮಕ್ಕಳನ್ನು ಕಚ್ಚುತ್ತಿರುವುದನ್ನು ತಪ್ಪಿಸಲು ಹಲವು ಕ್ರಮಗಳನ್ನು ಬಿಬಿಎಂಪಿ ತೆಗೆದುಕೊಳ್ಳಲಾಗುತ್ತಿದೆಯಾದರೂ, ಇದರ ಫ‌ಲಿತಾಂಶವೇನು ಎನ್ನುವುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ. ನಾಯಿಗಳು ಕಚ್ಚಲು ಬರುವಾಗ ಪ್ರತಿರೋಧಿಸುವ ಮತ್ತು ತಪ್ಪಿಸಿಕೊಳ್ಳುವಷ್ಟು ತಿಳವಳಿಕೆ ಮಕ್ಕಳಲ್ಲಿ ಇಲ್ಲದೆ ಇರುವುದರಿಂದ ಮಕ್ಕಳ ಮೇಲೆ ನಾಯಿಗಳು ಗಂಭೀರವಾದ ದಾಳಿ ಮಾಡುತ್ತಿವೆ.

ಫ‌ಲಿಸದ ಎಬಿಸಿ ಚಿಕಿತ್ಸೆ: ಬಿಬಿಎಂಪಿ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆಗಾಗಿ ಪ್ರತಿ ವರ್ಷ ಕೋಟ್ಯಾಂತರ ರೂ. ಹಣ ವ್ಯಯ ಮಾಡುತ್ತಿದೆ. ಆದರೂ, ನಾಯಿಗಳ ಸಂಖ್ಯೆ ಏರಿಕೆಯಾಗುತ್ತಿದೆಯೇ ಒರತು ಇಳಿಕೆಯಾಗುತ್ತಿಲ್ಲ. ಒಮ್ಮೆ ನಾಯಿ ಶಸ್ತ್ರಚಿಕಿತ್ಸೆಗೆ ಒಳಪಟ್ಟರೆ ಸಂತಾನ ಶಕ್ತಿ ಕಳೆದುಕೊಳ್ಳುತ್ತವೆ. ಆದರೆ, ನಗರದಲ್ಲಿ ನಾಯಿಗಳ ಸಂಖ್ಯೆ ಮಾತ್ರ ಕ್ಷೀಣಿಸುತ್ತಿಲ್ಲ. ಇದಕ್ಕೆ ಪಾಲಿಕೆಯಲ್ಲಿ ಕೆಲವು ಕಡೆ ಎಬಿಸಿ ಕೇಂದ್ರಗಳು ಇಲ್ಲದಿರುವುದು ಮತ್ತು ಪಶುವೈದ್ಯರ ಕೊರತೆಯೂ ಎನ್ನುವ ಆರೋಪವೂ ಇದೆ.

ಪರಿಣಾಮಕಾರಿ ಎಬಿಸಿ ಪರಿಹಾರ: ನಗರದಲ್ಲಿ ಬೀದಿನಾಯಿಗಳ ಹಾವಳಿ ತಪ್ಪಿಸಬೇಕಾದರೆ, ಗುತ್ತಿಗೆ ನೀಡುವ ಸಮಯದಲ್ಲೇ ಹಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಬೇಕು. ಎಬಿಸಿ ಚಿಕಿತ್ಸೆ ಸರಿಯಾಗಿ ನೀಡದಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು, ಒಂದು ವರ್ಷದಲ್ಲಿ ಎಲ್ಲ ನಾಯಿಗಳಿಗೆ ಎಬಿಸಿ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದಾಗ ಸರಿಯಾಗಿ ಕೆಲಸ ಮಾಡುತ್ತಾರೆ. ಇಲ್ಲದಿದ್ದಲ್ಲಿ ನಗರದಲ್ಲಿ ಯಾವುದೇ ಕಾರಣಕ್ಕೂ ಬೀದಿನಾಯಿಗಳು ಕಡಿಮೆಯಾಗುವುದಿಲ್ಲ ಎನ್ನುತ್ತಾರೆ ತಜ್ಞರು.

ಶ್ವಾನವನ್ನು ಪ್ರಚೋದಿಸುವುದು, ಅವುಗಳು ಊಟ ಮಾಡುವಾಗ, ಗರ್ಭಧರಿಸುವ ಸಮಯದಲ್ಲಿ ಅವುಗಳನ್ನು ಕೆಣಕಿದರೆ ಕಚ್ಚುವ ಅಪಾಯ ಹೆಚ್ಚು. ಈ ಬಗ್ಗೆ ಶಾಲೆಗಳಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸಿ, ಶ್ವಾನಗಳಿಗೆ ಎಬಿಸಿ ಮುಂದುವರಿಸಲಾಗುವುದು.
-ಡಾ. ಶಶಿಕುಮಾರ್‌, ಉಪನಿರ್ದೇಶಕ (ಪಶುಪಾಲನೆ)

ನಾಯಿ ಕಚ್ಚಿದ ಜಾಗವನ್ನು ಸ್ವಚ್ಛವಾಗಿ ಸಾಬೂನಿನಿಂದ ತೊಳೆದುಕೊಳ್ಳಬೇಕು. ನಾಯಿ ಕಚ್ಚಿದಾಗ ರೇಬಿಸ್‌ ಚುಚ್ಚುಮದ್ದು ತೆಗೆದುಕೊಳ್ಳುವುದರಿಂದ ಭವಿಷ್ಯದಲ್ಲಿ ಆರೋಗ್ಯದ ಮೇಲಾಗುವ ಅಪಾಯ ತಪ್ಪಿಸಬಹುದು.
-ಭಾನು ಮೂರ್ತಿ, ಕೆ.ಸಿ.ಜನರಲ್‌ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ

ಎಬಿಸಿಗೆ ಒಳಪಟ್ಟ ಶ್ವಾನಗಳ ವಿವರ
ವರ್ಷ ಶ್ವಾನಗಳ ಸಂಖ್ಯೆ
2014-15 29,841
2015-16 35,185
2016-17 8,662
2017-18 34,144
2018-19 45,000
2019-20 7,000 (ಏಪ್ರಿಲ್‌ನಿಂದ ಮೇ)

* ಹಿತೇಶ್‌ ವೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ