ರಂಜಾನ್‌ ಉಪವಾಸ: ಸಮೋಸ, ಖರ್ಜೂರ್‌ಗೆ ಭಾರೀ ಬೇಡಿಕೆ

Team Udayavani, May 15, 2019, 3:00 AM IST

ದೇವನಹಳ್ಳಿ: ನಗರದ ಮಸೀದಿ ರಸ್ತೆಯಲ್ಲಿ ಕರ್ಜುರ ಸೇರಿದಂತೆ ನಾನಾ ಬಗೆಯ ಹಣ್ಣುಗಳು, ಖಾದ್ಯಗಳ ಖದರ್‌ ದಾರಿ ಹೋಕರ ಗಮನ ಸೆಳೆಯುತ್ತಿದ್ದರೆ. ಸಂಜೆಯ ಉಪವಾಸ ಮುರಿಯುವ ವೇಳೆಗೆ ಸಮೋಸ, ಖರ್ಜೂರು ಸೇರಿ ವಿವಿಧ ತಿನುಸುಗಳ ವಾಸನೆ ಪ್ರತಿಯೊಬ್ಬರ ಬಾಯಿಯಲ್ಲಿ ನೀರುಣಿಸುತ್ತವೆ.

ಮುಸಲ್ಮಾನರಿಗೆ ರಂಜಾನ್‌ ಪವಿತ್ರ ಹಬ್ಬವಾಗಿದ್ದು, ಒಂದು ತಿಂಗಳ ಕಾಲ ಉಪವಾಸ ವೃತ ಕೈಗೊಂಡು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ದೇವರ ಆರಾಧನೆ ಮೂಲಕ ಪ್ರಾರ್ಥನೆ ಸಲ್ಲಿಸುವ ಪದ್ಧತಿ ತಲೆತಲಾತರಗಳಿಂದ ನಡೆದುಕೊಂಡು ಬಂದಿದೆ.

ಹಿಜರಿ ತಿಂಗಳಲ್ಲಿ ಅತ್ಯಂತ ಶ್ರೇಷ್ಠ ತಿಂಗಳಾಗಿರುವ ರಂಜಾನ್‌ ಮಾಸ ಆರಂಭವಾಗಿದೆ. ಈ ತಿಂಗಳಲ್ಲಿ ಪ್ರತಿಯೊಬ್ಬ ಮುಸ್ಲಿಮರಿಗೆ ಉಪವಾಸ ಕಡ್ಡಾಯವಾಗಿದೆ. ವರ್ಷದ 11ತಿಂಗಳು ಕಾಯಕಕ್ಕೆ ಮೀಸಲಿಟ್ಟಿದ್ದು, ಒಂದು ತಿಂಗಳು ಪೂರ್ತಿ ಉಪವಾಸ ಮಾಡುವ ಮೂಲಕ ಅಲ್ಲಹನ ಸ್ಮರಣೆ ಮಾಡುವ ಹಾಗೂ ಎಲ್ಲರೂ ಸಂಭ್ರಮಿಸುವ ಬಹುದೊಡ್ಡ ಹಬ್ಬ ರಂಜಾನ್‌ ಆಗಿದೆ.

ಸಮೋಸ, ಖರ್ಜೂರ್‌ಗೆ ಭಾರೀ ಬೇಡಿಕೆ: ಸಮೋಸ ಮತ್ತು ಖರ್ಜೂರು ಜೊತೆಗೆ ಹಣ್ಣಿನ ಗಾಡಿಗಳಿಗೆ ಇಫ್ತಾರ್‌ ವೇಳೆ ಬಿಡುವಿಲ್ಲದ ಕೆಲಸ. ಅದುವರೆಗೆ ಹಸಿದಿದ್ದವರನ್ನು ತಣಿಸುವುದು ಇದೇ ಅಂಗಡಿಗಳು. ಪಪಾಯ, ಬಾಳೆಹಣ್ಣು, ಮೋಸಂಬಿಗೂ ಬೇಡಿಕೆ ಹೆಚ್ಚಾಗಿದೆ. ಮಸೀದಿ ರಸ್ತೆ ಉದ್ದಗಲಕ್ಕೂ ಇರುವ ಅಂಗಡಿಗಳಲ್ಲಿ ಸಮೋಸ ಹೆಚ್ಚಾಗಿ ಮಾರಾಟವಾಗುತ್ತಿರುವುದು ವಿಶೇಷವಾಗಿದೆ.

ಸಮೋಸ, ಬೋಂಡಾ, ವಡೆ ವಾಸನೆ ಗ್ರಾಹಕರನ್ನು ಕೈಬೀಸಿ ಕರೆಯುವಂತೆ ಮಾಡುತ್ತಿವೆ. ಬೆಳಗ್ಗೆ 4.30ರ ವೇಳೆಗೆ ಸೂರ್ಯ ಹುಟ್ಟುವ ಮುನ್ನಾ ಒಂದಿಷ್ಟು ಆಹಾರ ಸೇವನೆ ಮಾಡಿ ಮುಗಿಸಿರುತ್ತಾರೆ. ನಂತರ ಸುಮಾರು ಸಂಜೆ 6.30ರ ನಂತರ ಅಂದರೆ ಸೂರ್ಯಾಸ್ತವಾದ ನಂತರ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ನಂತರ ಉಪವಾಸ ಮುರಿದು ಆಹಾರ ಸೇವನೆ ಮಾಡುತ್ತಾರೆ.

ಉಪವಾಸ ಮುರಿಯುವ ಮುನ್ನಾ ಸಮೋಸ ಹಾಗೂ ಇತರೆ ಖಾದ್ಯ ಪದಾರ್ಥಗಳನ್ನು ಮುಂದಿಟ್ಟುಕೊಂಡು ನಿಗದಿತ ಸಮಯದಲ್ಲಿ ಉಪವಾಸವನ್ನು ಅಂತ್ಯ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಸಮೋಸ ಹಾಗೂ ಖರ್ಜೂರುಗಳಿಗೆ ಒಂದು ತಿಂಗಳವರೆಗೂ ಹೆಚ್ಚಿನ ಬೇಡಿಕೆ ಇರುತ್ತದೆ.

ರಸ್ತೆ ಬದಿ ವ್ಯಾಪಾರ ಬಲು ಜೋರು: ಬೆಲೆ ಏರಿಕೆ ನಡುವೆಯೂ ಮುಸ್ಲಿಂ ಬಾಂಧವರು ಪವಿತ್ರ ಹಬ್ಬದ ಆಚರಣೆಗೆ ಸಜ್ಜಾಗುತ್ತಿದ್ದಾರೆ. ನಗರದ ಪ್ರಮುಖ ಮಸೀದಿಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸಮೋಸ, ಬೋಂಡಾ, ತರಹೇವಾರಿ ಹಣ್ಣುಗಳು, ತಿಂಡಿ ತಿನಿಸುಗಳು ರಸ್ತೆ ಬದಿಯಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿವೆ. ವ್ಯಾಪಾರಿಗಳೂ ಸಹ ಹಬ್ಬದಲ್ಲಿ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಬೆಲೆ ಏರಿಕೆ ಬಿಸಿ: ಪ್ರತಿ ಸಂಜೆ ಸಮೋಸ ಅಂಗಡಿಯಲ್ಲಿ ಸುಮಾರು 2ಸಾವಿರಕ್ಕೂ ಹೆಚ್ಚು ಸಮೋಸ ಮಾರಾಟವಾಗುತ್ತಿವೆ. ಮುಸ್ಲಿಂ ಬಾಂಧವರು ತಾಮುಂದು ನೀ ಮುಂದು ಎಂದು ಖರೀದಿಸುವಲ್ಲಿ ನಿರತರಾಗುತ್ತಾರೆ. ಮಸೀದಿಯಲ್ಲಿ ಒಟ್ಟಾಗಿ ಕುಳಿತು ಉಪವಾಸ ಮುರಿಯುವುದು ವಾಡಿಕೆಯಾಗಿದೆ.

ಬೆಲೆ ಏರಿಕೆ ಹೆಚ್ಚಾಗಿರುವುದರಿಂದ ಸಮೋಸ ಮಾಡುವುದಕ್ಕೆ ಹೆಚ್ಚಿನ ಬೆಲೆ ನೀಡಿ ಪದಾರ್ಥಗಳನ್ನು ಮಾರುಕಟ್ಟೆಯಿಂದ ತರಬೇಕು. ಹಾಕುವ ಬಂಡವಾಳ ಕೈಗೆಟುಕುವುದಿಲ್ಲ. ಆಗಿನಿಂದ ಮಾಡಿಕೊಂಡು ಬಂದಿರುವ ಸಮೋಸ ಮಾರಾಟವನ್ನು ಮುಂದುವರೆಸಿಕೊಂಡು ಹೋಗಿದ್ದೇವೆ ಎಂದು ವ್ಯಾಪಾರಿ ಫಯಾಜ್‌ ಹೇಳುತ್ತಾರೆ.

ದರಗಳು ಎಷ್ಟಾದರೂ ಸರಿ: ರಂಜಾನ್‌ ನಮ್ಮ ಪವಿತ್ರ ಹಬ್ಬವಾಗಿದ್ದು, ಎಷ್ಟೇ ದರಗಳು ಏರಿಕೆಯಾದರೂ ಹಬ್ಬವನ್ನು ಮಾಡುವುದು ಆಗಿನಿಂದಲೂ ಬಂದಿರುತ್ತದೆ. ಸಮೋಸ 30ರೂ. ಆದರೂ, ತಿನ್ನುವ ಮನ ಸೆಳೆಯುತ್ತದೆ. ಒಂದು ಸಮೋಸ 10ರೂ.ಗೆ ಸಿಗುತ್ತದೆ. ಉಪವಾಸ ಮುರಿಯುವ ಮುನ್ನಾ ಮನೆಗಳಿಗೂ ಪಾರ್ಸಲ್‌ ಕಟ್ಟಿಸಿಕೊಂಡು ಬರುತ್ತೇವೆ. ಜೊತೆಯಲ್ಲಿ ಹಣ್ಣು ಹಂಪಲು, ಖರ್ಜೂರ, ಇತರೆ ಖಾದ್ಯಗಳನ್ನು ತರುತ್ತೇವೆ ಎಂದು ಗ್ರಾಹಕ ಸಿಕಂದರ್‌ ಪಾಷಾ ಹೇಳುತ್ತಾರೆ.

* ಎಸ್‌.ಮಹೇಶ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ