ಜಿಎಲ್‌ಬಿಸಿ ಕಾಲುವೆಗೆ ನೀರು ಹರಿಸಲು ಮನವಿ
Team Udayavani, Mar 16, 2021, 3:52 PM IST
ಚಿಕ್ಕೋಡಿ: ತಾಲೂಕಿನ ಕೇರೂರ ಗ್ರಾಮದ ಜಿಎಲ್‌ಬಿಸಿ ಕಾಲುವೆಯ ಸ್ವತ್ಛತೆ ಹಾಗೂ ನೀರು ಹರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಈ ಕಾಲುವೆಯ ಮುಖಾಂತರ ಸುಮಾರು ಹತ್ತಾರು ಹಳ್ಳಿಗಳಿಗೆ ಈ ಮೊದಲು ನೀರು ಹರಿಯುತ್ತಿದ್ದು, 10 ವರ್ಷಗಳ ಹಿಂದಿನಿಂದ ಈ ಕಾಲುವೆಗೆ ನೀರು ಸರಿಯಾದ ವೇಳೆಗೆ ಬಂದು ಮುಟ್ಟುತ್ತಿಲ್ಲ. ಅಧಿ ಕಾರಿಗಳ ನಿರ್ಲಕ್ಷ್ಯತನದಿಂದ ಈ ಕಾಲುವೆಗೆ ನೀರು ಬರಲಾರದೇ ಗಿಡ-ಕಂಟಿಗಳು ಬೆಳೆದು, ವಿಷ ಜಂತುಗಳು ಅಡ್ಡಾಡುತ್ತ ಅಕ್ಕ ಪಕ್ಕದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಆದ್ದರಿಂದ ಈ ಹೊತ್ತಿನಿಂದ ಸತತವಾಗಿ ಮುಗಳಖೋಡ ಚೌಕಿಯಲ್ಲಿ .508 ಕ್ಯೂಸೆಕ್ ಮತ್ತು ಜಿಎಲ್‌ಬಿಸಿ ಕಾಲುವೆ ಮೂಲಕ 200 ಕ್ಯೂಸೆಕ್ ನೀರು ಹರಿಸಲು ನೀರಾವರಿ ನಿಗಮದವರು ಮುಂದಾಗಬೆಕು. ಒಂದು ವೇಳೆ ಸ್ವತ್ಛತೆ ಹಾಗೂ ನೀರು ಹರಿಸಲು ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕೇರೂರ ಗ್ರಾಮದ ಎಲ್ಲಾ ರೈತರು ಸೇರಿಕೊಂಡು ಚಿಕ್ಕೋಡಿ ಮಿರಜ ಹೆದ್ದಾರಿ ಬಂದ್ ಮಾಡಿ ನೀರು ಬಿಡುವವರೆಗೂ ಅಲ್ಲೇ ಠಿಕಾಣಿ ಹೂಡುತ್ತೇವೆ ಎಂದು ರೈತ ಸಂಘದ ಚಿಕ್ಕೋಡಿ ತಾಲೂಕು ಅಧ್ಯಕ್ಷ ಮಂಜುನಾಥ ಬಾಳು ಪರಗೌಡ ಎಚ್ಚರಿಕೆ ನೀಡಿದರು.
ಈ ವೇಳೆ ಕೇರೂರ ಗ್ರಾಮ ಘಟಕದ ಅಧ್ಯಕ್ಷ ಬಾಳಗೌಡ ಪಾಟೀಲ, ಬಸಾಗೌಡ ಪಾಟೀಲ, ವೀರೇಂದ್ರ ಪಾಟೀಲ, ರಾಜು ರೆಂದಾಳೆ, ನರಸಗೌಡ ಮಾಂಗನುರೆ, ಬಸು ನಡುವಿನಮನಿ, ಶಂಕರ ಹೆಗಡೆ, ಲೋಹಿತ್ ಮಾಶಾಳೆ, ಕೇದಾರಿ ರೆಂದಾಳೆ, ಕೇದಾರಿ ಮಾಂಗನುರೆ, ಅನ್ನಪ್ಪಾ ಕುಂಬಾರ, ಇಟಪ್ಪಾ ಬಿಳಗೆ, ಇತರರಿದ್ದರು.