ರಮೇಶ್ ಜಾರಕಿಹೊಳಿ ನಿವಾಸಕ್ಕೆ ಎಸ್ ಸಿ, ಎಸ್ ಟಿ ಸಮಾಜದ ಮಠಾಧೀಶರು: ಗೌಪ್ಯ ಸಭೆ
Team Udayavani, Nov 28, 2022, 5:33 PM IST
ಬೆಳಗಾವಿ: ಎಸ್ ಸಿ, ಎಸ್ ಟಿ ಸಮುದಾಯದ ವಿವಿಧ ಪೀಠಗಳ ಏಳು ಜನ ಮಠಾಧೀಶರು ಬೆಳಗಾವಿಯ ವಿದ್ಯಾನಗರದಲ್ಲಿರುವ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ಗೌಪ್ಯ ಸಭೆ ನಡೆಸಿದರು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಚಿತ್ರದುರ್ಗ ಶಿವಶರಣ ಮಾದಾರಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮೈಸೂರು ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಚಿತ್ರದುರ್ಗ ಬಂಜಾರಾ ಗುರುಪೀಠದ ಸಂತ ಸೇವಾಲಾಲ ಸ್ವಾಮೀಜಿ, ಚಿತ್ರದುರ್ಗ ಮೇದಾರ ಕೇತೇಶ್ವರ ಗುರುಪೀಠದ ಶ್ರೀ ಬಸವಪ್ರಭು ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಚಿತ್ರದುರ್ಗ ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ, ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಭೇಟಿ ನೀಡಿದರು.
ಜಾರಕಿಹೊಳಿ ಅವರ ಮನೆಗೆ ಆಗಮಿಸಿದ ಮಠಾಧೀಶರನ್ನು ರಮೇಶ್ ಜಾರಕಿಹೊಳಿ ಹಾಗೂ ಲಕನ್ ಜಾರಕಿಹೊಳಿ ಶಾಲು ಹೊದಿಸಿ ಹಣ್ಣು ಹಂಪಲು ನೀಡಿ ಗೌರವ ಸಲ್ಲಿಸಿದರು. ಜಾರಕಿಹೊಳಿ ಸಹೋದರರು ಆಶೀರ್ವಾದ ಪಡೆದು ಗೌಪ್ಯ ಸಭೆ ನಡೆಸಿದರು. ಮಾಧ್ಯಮದವರನ್ನು ಹೊರಗೆ ಕಳುಹಿಸಿ ಗೌಪ್ಯ ಸಭೆ ನಡೆಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.