
ಫಿಟ್ ಇಂಡಿಯಾ ಫ್ರೀಡಂ ರನ್ ಕಾರ್ಯಕ್ರಮಕ್ಕೆ ಚಾಲನೆ
Team Udayavani, Sep 19, 2020, 7:54 PM IST

ಸಂಡೂರು: ಎಲ್ಲರಲ್ಲೂ ದೈಹಿಕ ಸದೃಢತೆ ಮೂಡಿಸಲು ಸರ್ಕಾರ ಈಗ ಸದೃಢ ಭಾರತಕ್ಕಾಗಿ ಸ್ವಾತಂತ್ರ್ಯ ಓಟ ಎಂಬ ಕಾರ್ಯಕ್ರಮವನ್ನು ಅಳವಡಿಸಿದ್ದು ಸರ್ವರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುವಂತೆ ಎನ್ನೆಸ್ಸೆಸ್ ಅಧಿಕಾರಿ ಡಾ| ವಿ.ಚೌಡಪ್ಪ ತಿಳಿಸಿದರು.
ಅವರು ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ ಸದೃಢ ಭಾರತಕ್ಕಾಗಿ ಸ್ವಾತಂತ್ರ್ಯ ಓಟ (ಫಿಟ್ ಇಂಡಿಯ ಫ್ರೀಡಂ ರನ್) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬೊಜ್ಜು, ಒತ್ತಡ, ಆತಂಕ ಮುಂತಾದ ಕಾಯಿಲೆಗಳಿಂದ ಮುಕ್ತರಾಗಲು ಅದರಲ್ಲೂ ಕೋವಿಡ್ 19 ಸೃಷ್ಟಿಸಿರುವ ಸಂಕಷ್ಟದ ಸಮಯದಲ್ಲಿ ರೋಗ ನಿರೋಧಕತೆ ಹೆಚ್ಚಿಸಿಕೊಂಡು ಪ್ರತಿಯೊಬ್ಬರೂ ಆರೋಗ್ಯವಂತರಾಗಿರುವುದೇ ಈ ಓಟದ ಪರಿಕಲ್ಪನೆಯಾಗಿದೆ. ಆಗಸ್ಟ್ 15ರಿಂದ ಅಕ್ಟೋಬರ್ 2ರವರೆಗೆ ಈ ಕಾರ್ಯಕ್ರಮ ಜಾರಿಯಲ್ಲಿರುತ್ತದೆ. ಅದಲ್ಲದೇ ಓಟವನ್ನು ಎಲ್ಲಿಯಾದರೂ ಯಾವುದೇ ಸಮಯದಲ್ಲಿಯಾದರೂ ವಯಸ್ಸಿನ ಭೇದವಿಲ್ಲದೆ ಸುರಕ್ಷತೆಯಿಂದ ಭಾಗವಹಿಸಬಹುದಾಗಿದೆ ಎಂದರು.
ಮಯೂರ ಭವನದಿಂದ ಓಟ ಆರಂಭಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೇಂದ್ರದ ಆವರಣದಲ್ಲಿ ಮೂರು ಕಿಮೀ ಓಟದಲ್ಲಿ ಎಲ್ಲರೂ ಓಡಿದರು. ಡಾ| ಪಿ.ಸಿ. ನಾಗನೂರ್, ಡಾ| ಹೊನ್ನೂರ್ ಸ್ವಾಮಿ, ಪ್ರೊ| ಎಂ.ಡಿ.ಕಣದಾಳಿ, ಪ್ರೊ| ಕೆ.ಜಿ.ಸುಮಾ, ಡಾ| ಮುಬಾರಕ್, ಡಾ| ಬಸವರಾಜ್ ಹಟ್ಟಿ, ಕ್ರೀಡಾ ವಿಭಾಗದ ಶಿವರಾಮ ರಾಗಿ, ಕಣವಿಹಳ್ಳಿ ಪಾಪಯ್ಯ ಸೇರಿದಂತೆ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. ಬಸವರಾಜ್ ಇಳಗಾನೂರ್ ವಂದಿಸಿದರು.
ಟಾಪ್ ನ್ಯೂಸ್
