ಬೀದರ್: ಕೋವಿಡ್ 19 ಸೋಂಕಿಗೆ ಎರಡು ಸಾವು; 59 ಹೊಸ ಪಾಸಿಟಿವ್ ಕೇಸ್
Team Udayavani, Sep 9, 2020, 11:35 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೀದರ್: ಜಿಲ್ಲೆಯಲ್ಲಿ ಬುಧವಾರ ಮತ್ತೆ ಕೋವಿಡ್ 19 ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ ಹಾಗೂ 59 ಜನರಿಗೆ ಹೊಸದಾಗಿ ಈ ಸೋಂಕು ತಗುಲಿದೆ.
ಬೀದರ ನಗರದ ನಜರತ ಕಾಲೊನಿಯ 77 ವರ್ಷದ ವೃದ್ಧ ಹಾಗೂ ಭಾಲ್ಕಿ ತಾಲೂಕಿ ಕರಡ್ಯಾಳ ಗ್ರಾಮದ 55 ವರ್ಷದ ಮಹಿಳೆ ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದಾರೆ.
ಇವರಿಬ್ಬರು ಉಸಿರಾಟ, ಕೆಮ್ಮು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಇಬ್ಬರನ್ನೂ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಜಿಲ್ಲೆಯ ಸೋಂಕಿತರ ಸಂಖ್ಯೆ ಈಗ 5102ಗೆ ಏರಿಕೆಯಾಗಿದ್ದರೆ ಮೃತರ ಸಂಖ್ಯೆ 143ಕ್ಕೆ ವೃದ್ಧಿಸಿದೆ. ಒಂದೇ ದಿನ 98 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 4431ಗೆ ಹೆಚ್ಚಿದೆ. ಇನ್ನೂ 524 ಸಕ್ರಿಯ ಪ್ರಕರಣಗಳಿವೆ.