ವೀರಶೈವ ಜಂಗಮರ ಪರ ಶಿಫಾರಸು ಪತ್ರ :ಸೆ.20ರಂದು ಹುಮನಾಬಾದ್ ಬಂದ್
ಬೇಡ ಜಂಗಮರು ವೀರಶೈವರಲ್ಲ, ಬೇಡ ಜಂಗಮರು ಮಾಂಸಾಹಾರಿಗಳು
Team Udayavani, Sep 16, 2022, 4:03 PM IST
ಹುಮನಾಬಾದ್ : ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ವೀರಶೈವ ಜಂಗಮರ ಪರ ಶಿಫಾರಸು ಪತ್ರ ನೀಡಿದ ಶಾಸಕರ, ವಿಧಾನ ಪರಿಷತ್ ಸದಸ್ಯರ ನಡೆ ಖಂಡಿಸಿ ದಲಿತ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಸೆಪ್ಟೆಂಬರ್ 20 ರಂದು ಹುಮನಾಬಾದ ಪಟ್ಟಣ ಬಂದ್ ಕರೆ ನೀಡಿರುವುದಾಗಿ ದಲಿತ ಮುಖಂಡ ಅಂಕುಶ ಗೋಖಲೆ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಮೂರು ತಿಂಗಳಿಂದ ವೀರಶೈವ ಜಂಗಮರು ಪರಿಶಿಷ್ಟ ಜಾತಿ ಪ್ರಮಾಣಪತ್ರಕ್ಕಾಗಿ ಹೋರಾಟ ನಡೆಸುತ್ತಿದ್ದು, ಸ್ಥಳೀಯ ಶಾಸಕ ರಾಜಶೇಖರ್ ಪಾಟೀಲ್ ಹಾಗೂ ಅವರ ಸಹೋದರರು ಸರ್ಕಾರಕ್ಕೆ, ಸಚಿವರಿಗೆ ಶಿಫಾರಸು ಪತ್ರ ನೀಡಿರುವುದನ್ನು ಖಂಡಿಸಿ ಸೆ.20ರಂದು ಬಂದ್ ಕರೆ ನೀಡಲಾಗಿದೆ. ಸುಮಾರು ಹತ್ತು ಸಾವಿರ ಜನರು ಪ್ರತಿಭಟನೆಯಲ್ಲಿ ಭಾಗವಹಿಸಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಕೆಎಸ್ ಸಿಂಗ್ ನೇತೃತ್ವದ ತಂಡದ ಪ್ರಕಾರ ಬೇಡ ಜಂಗಮರು ವೀರಶೈವರಲ್ಲ. ಬೇಡ ಜಂಗಮರು ಮಾಂಸಾಹಾರಿಗಳು, ಹಂದಿ ಸೇವನೆ ಮಾಡುತ್ತಾರೆ. ಮಡಿವಂತಿಕೆ ಮಾಡುವರು, ಪಾದ ಪೂಜೆ ಮಾಡಿಸುಕೊಳ್ಳುವರು ಮಾಂಸಹಾರ ಸೇವನೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು,ಸಾಮಾಜಿಕ ಶೈಕ್ಷಣಿಕವಾಗಿ ಹಿಂದುಳಿದ, ಅಸ್ಪರ್ಶತೆಗೆ ಒಳಗಾದವರಿಗಾಗಿ ಸಂವಿಧಾನದ ಅಡಿಯಲ್ಲಿ ಮೀಸಲಾತಿ ನೀಡಲಾಗಿದ್ದು, ಇದರಲ್ಲಿ ಕೂಡ ರಾಜಕೀಯ ಬೆಳೆದು ವಿವಿಧ ಜಾತಿಯವರನ್ನು ಪರಿಶಿಷ್ಟ ಜಾತಿಗೆ ಸೇರಿಕೊಂಡಿದ್ದು, ಇದೀಗ 101 ಜಾತಿಗಳು ಒಳಗೊಂಡಿದೆ. ದೇಶ ಸ್ವಾತಂತ್ರ್ಯವಾಗಿ 75 ವರ್ಷಗಳು ಕಳೆದರು ಕೂಡ ದೇಶದಲ್ಲಿನ ಶೇ.1ರಷ್ಟು ಕೂಡ ನಿಜವಾದ ದಲಿತರು ಉದ್ಧಾರವಾಗಿಲ್ಲ ಎಂದು ಹೇಳಿದ ಅವರು, ದಲಿತರ ಉದ್ಧಾರಕ್ಕಾಗಿ ರಾಜಕೀಯ ವ್ಯಕ್ತಿಗಳು ಶ್ರಮಿಸುತ್ತಿಲ್ಲ. ಇದೀಗ ದಲಿತರು ಜಾಗೃತರಾಗಿದ್ದು, ನಮ್ಮ ಹಕ್ಕು ಕಸಿದುಕೊಳ್ಳುವ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಲಕ್ಷ್ಮಿಪುತ್ರ ಮಾಳಗೆ, ಗೌತಮ ಸಾಗರ, ಗೌತಮ ಚವ್ಹಾಣ್, ಅನೀಲ ದೊಡ್ಡಿ, ಗೌತಮ ಪ್ರಸಾದ, ಶರಣು ಮಿತ್ರಾ ಸೇರಿದಂತೆ ಅನೇಕರು ಇದ್ದರು.