ರೈಲ್ವೆ ಯೋಜನೆಗೆ 36 ಸಾವಿರ ಕೋಟಿ ರೂ.
ಪೂರ್ಣಗೊಂಡ ಯೋಜನೆ ಉದ್ಘಾಟಿಸಲು ಪ್ರಧಾನಿ ಮೋದಿಗೆ ಆಹ್ವಾನ: ಸಂಸದ ಜಿಗಜಿಣಗಿ
Team Udayavani, Mar 3, 2021, 7:53 PM IST
ವಿಜಯಪುರ : ಜಿಲ್ಲೆಯ ರೈಲ್ವೆ ಯೋಜನೆಗಳ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ರೈಲ್ವೆ ಇಲಾಖೆಗೆ 36 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳು ಪ್ರಗತಿಯಲ್ಲಿವೆ. ಜಿಲ್ಲೆಯಲ್ಲಿ ಯೋಜನೆಗಳು ತ್ವರಿತಾಗಿ ಪೂರ್ಣಗೊಳ್ಳಲಿದ್ದು ಇವುಗಳ ಲೋಕಾರ್ಪಣೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗುತ್ತದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಮಂಗಳವಾರ ನಗರದ ಇಬ್ರಾಹಿಂಪುರ ರೈಲ್ವೆ ಲೆವೆಲಿಂಗ್ ಕ್ರಾಸಿಂಗ್ ನಂ. 80ರಲ್ಲಿ ನಿರ್ಮಿಸಿರುವ ರಸ್ತೆ ಮೇಲ್ಸೆತುವೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ರೈಲ್ವೆ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ನಡುವೆ ವೆಚ್ಚ ಹಂಚಿಕೆ ಆಧಾರದಲ್ಲಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ರೈಲ್ವೆಯ ಪಾಲು 8.24 ಕೋಟಿ ರೂ.ಗಳಾಗಿದೆ. ರಾಜ್ಯ ಸರ್ಕಾರದ ಪಾಲು 18.01 ಕೋಟಿ ರೂ. ಇದ್ದು, 14.05 ಕೋಟಿ ರೂ. ವೆಚ್ಚದಲ್ಲಿ 2017ರಲ್ಲಿ ಆರಂಭಿಸಲಾಗಿತ್ತು. ಇದೀಗ ಕಾಮಗಾರಿ ಲೋಕಾರ್ಪಣೆ ಮಾಡಲಾಗಿದೆ ಎಂದರು.
ಜಿಲ್ಲೆಯ ಜನತೆಯ ಬಹದು ದಿನಗಳ ಬೇಡಿಕೆಯಾಗಿದ್ದ ವಿಮಾನ ನಿಲ್ದಾಣ ಕಾಮಗಾರಿ ಆರಂಭಗೊಂಡಿದ್ದು, ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 18 ಗಂಟೆಯಲ್ಲಿ 28 ಕಿ.ಮೀ ರಸ್ತೆ ನಿರ್ಮಾಣ ಮಾಡುವ ಮೂಲಕ ಲಿಮ್ಕಾ ದಾಖಲೆ ಬರೆದು ಇತಿಹಾಸ ನಿರ್ಮಿಸಲಾಗಿದೆ. ನಿರಂತರ ಪ್ರಯತ್ನಗಳಿಂದ ಇಂತಹ ಅಭಿವೃದ್ಧಿ ಕಾರ್ಯಗಳು ಆಗಲು ಸಾಧ್ಯವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜಿಲ್ಲೆಯ ರೈಲ್ವೆ ಜೋಡಿ ಮಾರ್ಗ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನ ನಡೆಸಿದೆ. ಜಿಲ್ಲೆಯಲ್ಲಿ 36 ಸಾವಿರ ಕೋಟಿ ರೂ. ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ವಿವಿಧ ರಸ್ತೆಗಳಿಗಾಗಿ ಕೇಂದ್ರ ಸರ್ಕಾರದಿಂದ 5 ಸಾವಿರ ಕೋಟಿ ರೂ. ಮಂಜೂರಾಗಿದೆ ಎಂದರು.
ಅಲಿಯಾಬಾದ್ ನಾಕಾ ರಸ್ತೆ ಮೇಲ್ಸೆತುವೆಗೆ ಟೆಂಡರ್ ಕಾರ್ಯ ಪೂರ್ಣಗೊಂಡಿದ್ದು, ಕಾಮಗಾರಿಗೆ ಚಾಲನೆ ಶೀಘ್ರದಲ್ಲಿಯೇ ದೊರೆಯಲಿದೆ. ಮುಳುವಾಡ ರೈಲ್ವೆ ಮೇಲ್ಸೆತುವೆ, ಚಡಚಣ ಹತ್ತಿರ ಅಂಡರ್ ಪಾಸ್, ಸವನಳ್ಳಿ ಬ್ರಿಡ್ಜ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಚತುಷ್ಪಥ ನಿರ್ಮಾಣಕ್ಕಾಗಿ 57 ಕೋಟಿ ರೂ. ಮಂಜೂರಾಗಿದೆ. ಇಬ್ರಾಹಿಂಪುರ ಅಂಡರ್ ಪಾಸ್
ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 80ರಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. 2018ರ ಗಣತಿಯಂತೆ ಲೆವೆಲ್ ಕ್ರಾಸಿಂಗ್ ಗೇಟ್ ರೈಲು ವಾಹನ ಏಕಮಾನವ 2,03,580 ಆಗಿದೆ. 2016ರಲ್ಲಿ ಇಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ದೊರೆಯಿತು.
ಇಬ್ರಾಹಿಂಪುರ ರಸ್ತೆ ಮೇಲ್ಸೆತುವೆ ಆದ್ಯತೆ ಮೇಲೆ ಪೂರ್ಣಗೊಳಿಸಿ, ಮೇಲ್ಸೆತುವೆಗೆ ವಜ್ರ ಹನುಮಾನ್ ಬ್ರಿಡ್ಜ್ ಎಂದು ನಾಮಕರಣ ಮಾಡುವಂತೆ ಸಲಹೆ ನೀಡಿದರು. ರಾಷ್ಟ್ರೀಯ ಹೆದ್ದಾರಿ ಇರುವ ಕಾರಣದಿಂದ ಈ ರಸ್ತೆ ಮೇಲ್ಸೇತುವೆ ಕಾಮಗಾರಿ ಸವಾಲಿನಿಂದ ಕೂಡಿದ್ದು ಕಾಮಗಾರಿಯ ವ್ಯಾಪ್ತಿ, ವಿಸ್ತರಣೆ ಮತ್ತು ಬದಲಾವಣೆಯ ಹೊರತಾಗಿಯೂ ಮೂರು ವರ್ಷಗಳಲ್ಲಿ ಇದನ್ನು ಪೂರ್ಣಗೊಳಿಸಲಾಗಿದೆ. ಈ ರಸ್ತೆ ಮೇಲ್ಸೇತುವೆಯು ಬೋ ಸ್ಟ್ರಿಂಗ್ ಗರ್ಡರ್ ಇರುವ 1ಗಿ30 ಮೀ. ರೈಲು ಸ್ಪಾನ್ ಹೊಂದಿದೆ.
ಅಥಣಿಯ ಕಡೆ 18 ಮೀ. ಸ್ಪಾನ್ ಇರುವ 1 ಆರ್ ಸಿಸಿಟಿ ಬೀಮ್ ನಿರ್ಮಾಣ ಮಾಡಲಾಗಿದೆ. 256 ಮೀ. ಉದ್ದದ ರ್‍ಯಾಂಪ್ ಹೊಂದಿದೆ. ಜೊತೆಗೆ ಎರಡೂ ಕಡೆಯಲ್ಲಿ ಸೇವಾ ರಸ್ತೆಗಳಿದ್ದು ಮೇಲ್ಸೇತುವೆ ರಸ್ತೆ ಪಥ ಹೊಂದಿದೆ.
ರಾಷ್ಟ್ರೀಯ ಹೆದ್ದಾರಿ ಮತ್ತು ಬಾಗಲಕೋಟೆ ರಸ್ತೆಗಳು ಸೇರುವ ಕಡೆ ಟ್ರಾμಕ್ ಐಲ್ಯಾಂಡ್ ಒದಗಿಸಲಾಗಿದ್ದು, 18 ಮೀಟರ್ ಓಪನ್ ಸ್ಟ್ರಾನ್ ಇರುವ ನಾಲ್ಕು ಆರ್ ಸಿಸಿಟಿ ಬೀಮ್ ಒದಗಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕಡೆ 64.7 ಮೀ.ನ ಒಂದು ಆರ್‌ಸಿಸಿಟಿ ಬಾಕ್ಸ್ ಹಾಗೂ ಬಾಗಲಕೋಟೆ ಕಡೆಯಲ್ಲಿ 6ಗಿ5 ಮೀ. ಆರ್‌ಸಿಸಿಟಿ ಬಾಕ್ಸ್ ಅಳವಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಕಡೆ 306 ಮೀ. ಉದ್ದದ ರ್‍ಯಾಂಪ್ ರಸ್ತೆ, ಬಾಗಲಕೋಟೆ ಕಡೆ 259 ಮೀ. ಉದ್ದದ ರ್‍ಯಾಂಪ್ ರಸ್ತೆ ನಿರ್ಮಿಸಲಾಗಿದೆ. ಜೊತೆಗೆ ಎರಡು ಕಡೆಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ರಸ್ತೆ ಮೇಲ್ಸೇತುವೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50ರಲ್ಲಿ ಅಥಣಿ ರಸ್ತೆಯ ಕಡೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಬೈಪಾಸ್ ರಸ್ತೆ ಕಡೆ ಹಾಗೂ ಅಥಣಿ ರಸ್ತೆಯಿಂದ ಸುಗಮ ಸಂಚಾರ ಸಾಧ್ಯವಾಗಿಸುತ್ತದೆ. ಮುಖ್ಯ ಮೆಲ್ಸೇತುವೆ, ಸರ್ವೀಸ್ ರಸ್ತೆಗಳಲ್ಲಿ ಪ್ರಕಾಶಮಾನ ಬೀದಿ ದೀಪ ಅಳವಡಿಸಲಾಗಿದೆ ಎಂದರು.
ಮೇಲ್ಮನೆ ಸದಸ್ಯ ಅರುಣ ಶಹಾಪುರ ಮಾತನಾಡಿದರು. ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಸಚಿವರಾದ ಅಪ್ಪಾಸಾಹೇಬ್ ಪಟ್ಟನಶೆಟ್ಟಿ, ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲಖೇಡೆ, ಅಪರ ಜಿಲ್ಲಾ ಧಿಕಾರಿ ರಮೇಶ ಕಳಸದ ಸೇರಿದಂತೆ ಇತರರು ಇದ್ದರು.