ಮೀನುಪಾಲನೆ ತರಬೇತಿಗೆ ಶೀಘ್ರ ಚಾಲನೆ
Team Udayavani, Dec 19, 2021, 5:58 PM IST
ನಾಲತವಾಡ: ಮೀನು ಉದ್ಯಮಕ್ಕೆ ರಾಜ್ಯದಲ್ಲಿ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ನಮ್ಮ ಇಲಾಖೆಯಿಂದ ಮೀನು ಮರಿ ಪಾಲನೆ ಕೇಂದ್ರಗಳನ್ನು ಅಭಿವೃದ್ಧಿಗೊಳಿಸುತಿದ್ದೇವೆ ಎಂದು ಮೀನುಗಾರಿಕೆ ಸಚಿವ ಎಸ್.ಅಂಗಾರ ಹೇಳಿದರು.
ಸಿದ್ದಾಪುರ ಡ್ಯಾಂ (ನಾರಾಯಣಪುರ) ಮೀನುಮರಿ ಪಾಲನಾ ಕೇಂದ್ರಕ್ಕೆ ಶನಿವಾರ ಬೆಳಗ್ಗೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀನಿನ ಕೃಷಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕಾದರೆ ರಾಜ್ಯದಲ್ಲಿ ಮೀನುಗಳ ಉದ್ಪಾದನೇ ಕೂಡ ಹೆಚ್ಚಾಗಬೇಕಾಗಿದೆ. ರಾಜ್ಯದಲ್ಲಿ ಮೀನುಮರಿ ಪಾಲನಾ ಕೇಂದ್ರದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತಿದ್ದೇವೆ. ಅಂತರ್ ರಾಜ್ಯದಲ್ಲಿ ಹೋಗಿ ಮೀನುಮರಿ ತೆಗೆದುಕೊಂಡು ಪಾಲನೆ ಮಾಡುವ ಸ್ಥಿತಿ ಸದ್ಯ ರಾಜ್ಯದಲ್ಲಿ ಇದೆ. ಆದ್ದರಿಂದ ನಮ್ಮ ರಾಜ್ಯದಲ್ಲಿಯೇ ಮೀನುಮರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಿ ಮೀನು ಉದ್ಯಮಕ್ಕೆ ಪ್ರೋತ್ಸಾಹಿಸುವ ಯೋಜನೆ ಹಾಕಿಕೊಂಡಿದ್ದೇನೆ. ಮೀನುಮರಿ ಉತ್ಪಾದನೆ ಕೇಂದ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಲ್ಲಿರಬೇಕು. ಒಂದು ವೇಳೆ ಕಳಪೆ ಕಾಮಗಾರಿ ಕಂಡು ಬಂದಲ್ಲಿ ಬಿಲ್ಲುಗಳನ್ನು ತಡೆ ಹಿಡಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಮೀನುಮರಿ ಪಾಲನೇ ಕೇಂದ್ರದ ಅಭಿವೃದ್ಧಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ನನ್ನ ಗಮಕ್ಕೆ ತಂದಿದ್ದಾರೆ. ಇಂದು ನಾರಾಯಣಪುರ ಮೀನುಮರಿ ಪಾಲನಾ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೀನುಮರಿಗಳ ಉತ್ಪಾದನೆಗೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಮುಂದಿನ ದಿನದಲ್ಲಿ ಈ ಮೀನುಪಾಲನೆ ಕೇಂದ್ರದಲ್ಲಿ ಮೀನು ಸಾಕಾಣಿಕೆ ತರಬೇತಿ ಕೇಂದ್ರ ಸಹ ಆರಂಭಿಸಲಾಗುವುದು ಎಂದರು.
ನಾರಾಯಣಪುರ ಮೀನುಮರಿ ಪಾಲನಾ ಕೇಂದ್ರದಲ್ಲಿ ನಡೆಯುತ್ತಿರುವ ಮೀನಿನ ಹೊಂಡ, ಜಂಗಲ್ ಕಟಿಂಗ್, ಸಿ.ಸಿ.ರಸ್ತೆ, ತಂತಿಬೇಲಿ ನಿರ್ಮಾಣ, ಹ್ಯಾಚರಿ, ಸ್ಟೋರೇಜ್ ಟ್ಯಾಂಕ್ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಇದ್ದರು.