ಮಳೆಹಾನಿ ಪ್ರದೇಶಗಳಿಗೆ ಡೀಸಿ ಭೇಟಿ, ಪರಿಶೀಲನೆ

Team Udayavani, May 4, 2019, 3:00 AM IST

ಚಾಮರಾಜನಗರ: ಇತ್ತೀಚಿಗೆ ಬಿದ್ದ ಗಾಳಿ, ಮಳೆಯಿಂದ ಬೆಳೆ ಹಾನಿ ಸಂಭವಿಸಿರುವ ತಾಲೂಕಿನ ವಿವಿಧ ಗ್ರಾಮಗಳ ಜಮೀನುಗಳಿಗೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆಯಿಂದ ಬೆಳೆ ಹಾನಿ ಉಂಟಾಗಿರುವ ತಾಲೂಕಿನ ಹರದನಹಳ್ಳಿ ಹೋಬಳಿಯ ಕಿಲಗೆರೆ, ಯಾನಗಹಳ್ಳಿ, ಮಾದಲವಾಡಿ ಹಾಗೂ ಬೇಲುಕುಪ್ಪೆ, ಮಾಯನಾಯಕನಪುರ ಗ್ರಾಮಗಳಲ್ಲಿರುವ ಜಮೀನುಗಳಿಗೆ ಭೇಟಿ ಕೊಟ್ಟು ಸಂಭವಿಸಿರುವ ಬೆಳೆ ಹಾನಿಯನ್ನು ವೀಕ್ಷಿಸಿದರು.

ಸಮೀಕ್ಷೆ ನಡೆಸಿ ವರದಿ ನೀಡಿ: ಇದೇ ವೇಳೆ ಜಿಲ್ಲಾಧಿಕಾರಿ ಮಳೆಯಿಂದ ನಾಶವಾಗಿರುವ ಬೆಳೆಯ ಮಾಹಿತಿ ಸಂಗ್ರಹಿಸಿ ನಿಖರ ವರದಿಯನ್ನು ಶೀಘ್ರವೇ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ರೈತರು ಬೆಳೆದು ಹಾನಿಗೊಳಗಾಗಿರುವ ಬೆಳೆ ಎಷ್ಟು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಗೀಡಾಗಿದೆ? ಯಾವ ಯಾವ ಬೆಳೆಗಳು ನಾಶವಾಗಿವೆ ಎಂಬ ಬಗ್ಗೆ ತುರ್ತಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಡೀಸಿಗೆ ಅಹವಾಲು ಸಲ್ಲಿಕೆ: ಮಳೆ ಹಾಗೂ ಗಾಳಿಯಿಂದ ಹಾನಿಗೊಳಗಾಗಿರುವ ಬಾಳೆ, ಕಬ್ಬು, ತೆಂಗು ಬೆಳೆಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು. ಇದೇ ವೇಳೆ ರೈತರು ಮಳೆ-ಗಾಳಿಯಿಂದ ಹಾನಿಗೆ ಒಳಗಾಗಿರುವ ಬೆಳೆಗಳ ಕುರಿತು ಮಾಹಿತಿ ನೀಡಿ ತಮ್ಮ ಅಹವಾಲು ಸಲ್ಲಿಸಿದರು.

ಆತಂಕ ವ್ಯಕ್ತಪಡಿಸಿದ ರೈತರು: ಈ ಸಂದರ್ಭದಲ್ಲಿ ಅಲ್ಲಿದ್ದ ರೈತರು ಬೆಳೆ ಹಾನಿಯಿಂದಾಗಿರುವ ತೊಂದರೆಗಳನ್ನು ಜಿಲ್ಲಾಧಿಕಾರಿ ಮುಂದೆ ತೋಡಿಕೊಂಡರು. ಸಾವಿರಾರು ರೂಪಾಯಿ ಸಾಲ ಸೋಲ ಮಾಡಿಕೊಂಡು, ಬಾಳೆ ಬೆಳೆದಿದ್ದೆವು. ಪಂಪ್‌ಸೆಟ್‌ನಲ್ಲಿ ನೀರಿನ ಕೊರತೆಯಿದ್ದರೂ, ಸಂಭಾಳಿಸಿಕೊಂಡು ರಾತ್ರಿ ವೇಳೆಯೆಲ್ಲಾ ಎಚ್ಚರವಾಗಿದ್ದು ನೀರು ಕಟ್ಟಿದ್ದೆವು.

ಸಾಲ ಮಾಡಿ ರಸಗೊಬ್ಬರ ಹಾಕಿ, ಕೀಟನಾಶಕ ಸಿಂಪಡಿಸಿದ್ದೆವು. ತಾವು ಬೆಳೆದ ಬೆಳೆಯು ಇನ್ನೊಂದು ತಿಂಗಳಲ್ಲಿ ಕೈ ಸೇರಬೇಕಿತ್ತು. ಈ ಹಂತದಲ್ಲಿ ಗಾಳಿ ಮಳೆಯಿಂದ ನಾವು ಬೆಳೆದ ಬೆಳೆ ನಾಶವಾಗಿದೆ. ಈಗೇನು ಮಾಡಬೇಕೆಂದು ತಿಳಿಯದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗೆ ಮನವಿ: ನಾವು ತೀರಾ ಸಂಕಷ್ಟದಲ್ಲಿದ್ದೇವೆ. ಸರ್ಕಾರದಿಂದ ಬೆಳೆಹಾನಿಗೆ ನೀಡುವ ಪರಿಹಾರ ಬಹಳ ಕಡಿಮೆಯಿದೆ. ಇದರಿಂದ ಏನೂ ಪ್ರಯೋಜನವಾಗುವುದಿಲ್ಲ. ನಮ್ಮ ಫ‌ಸಲು ಮಾರಾಟ ಮಾಡಿದಾಗ ದೊರಕುತ್ತಿದ್ದ ದರವನ್ನು ಅನುಸರಿಸಿ ಪರಿಹಾರ ಕೊಡಿಸಬೇಕೆಂದು ಜಿಲ್ಲಾಧಿಕಾರಿಗೆ ರೈತರು, ಬೆಳೆಗಾರರು ಮನವಿ ಮಾಡಿಕೊಂಡರು.

ಶೀಘ್ರವೇ ಪರಿಹಾರ ವಿತರಿಸಿ: ಬೆಳೆ ಹಾನಿ ಪರಿಹಾರವನ್ನು ಶೀಘ್ರವೇ ಹಾಗೂ ಸರಿಯಾದ ಪ್ರಮಾಣದಲ್ಲಿ ವಿತರಿಸಬೇಕೆಂದು ಮನವಿ ಮಾಡಿದ ಅವರು, ಈಗ ಅಧಿಕಾರಿಗಳು, ಸಿಬ್ಬಂದಿ ಬೆಳೆ ಹಾನಿ ಸಮೀಕ್ಷೆ ನಡೆಸಿ ಹೋಗುತ್ತಾರೆ. ಆದರೆ ನಂತರ ಒಂದಷ್ಟು ಪರಿಹಾರ ದೊರಕುತ್ತದೆ. ಆದರೆ ಆ ಪರಿಹಾರದ ಹಣ ನೀಡಲು ಬಹಳ ವಿಳಂಬ ಮಾಡಲಾಗುತ್ತದೆ.

ಇದರಿಂದ ಬೆಳೆ ಕಳೆದುಕೊಂಡ ರೈತರಿಗೆ ಇನ್ನಷ್ಟು ಕಷ್ಟವಾಗುತ್ತದೆ ಎಂದು ಬೆಳೆಗಾರರು ದೂರಿದರು. ಜಿಲ್ಲಾಧಿಕಾರಿ ಕಾವೇರಿ ಮಾತನಾಡಿ, ಬೆಳೆ ಹಾನಿಯ ಕುರಿತು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು. ಸೂಕ್ತ ಹಾಗೂ ಸಮರ್ಪಕ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದೆಂದು ಭರವಸೆ ನೀಡಿದರು.

ತಹಶೀಲ್ದಾರ್‌ ಯೋಗಾನಂದ್‌, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ, ಶಿವಲಿಂಗಪ್ಪ, ಸಹಾಯಕ ನಿರ್ದೇಶಕ ನಾಗೇಶ್‌, ಸಹಾಯಕ ತೋಟಗಾರಿಕೆ ಅಧಿಕಾರಿ ನಂಜುಂಡಯ್ಯ, ಕಂದಾಯ ಇಲಾಖೆಯ ಇತರೆ ಅಧಿಕಾರಿಗಳು ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ