ಯಳಂದೂರು: 56 ಅರ್ಜಿಗಳು ಸ್ವೀಕಾರ
Team Udayavani, Feb 21, 2021, 1:45 PM IST
ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ 56 ಅರ್ಜಿಗಳು ಸ್ವೀಕಾರಗೊಂಡವು. ಕಂದಾಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮ ಬೆಳಗ್ಗೆ 10 ಗಂಟೆಗೆ ಆರಂಭಗೊಂಡಿತು. ಸಂಜೆ 5 ರ ತನಕ ನಡೆಯಿತು.
ಇದರಲ್ಲಿ ಸ್ಥಳದಲ್ಲೇ ಪಿಂಚಣಿ ಮಂಜೂರಾತಿ ಆದೇಶ ಪ್ರತಿಗಳನ್ನು ಕೆಲವು ಫಲಾನುಭವಿಗಳಿಗೆ ವಿತರಿಸಲಾಯಿತು. ಉಪ ತಹಶೀಲ್ದಾರ್ ವೈ.ಎಂ. ನಂಜಯ್ಯ ಮಾತನಾಡಿ, ಪ್ರತಿ ತಿಂಗಳ 3 ನೇ ಶನಿವಾರ ಜಿಲ್ಲಾದ್ಯಂತ ಪ್ರತಿ ತಾಲೂಕಿನಲ್ಲೂ ಈ ಕಾರ್ಯಕ್ರಮದ ಆಯೋಜಿಸಲಾಗುವುದು. ಆದರೆ ಒಂದು ಗ್ರಾಮದಲ್ಲಿ ಮಾತ್ರ ಜಿಲ್ಲಾಧಿಕಾರಿ ವಾಸ್ತವ್ಯ ಹೂಡುತ್ತಾರೆ. ಇತರೆ ಕಡೆಗಳಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತದೆ. ವಿವಿಧ ಇಲಾಖೆಗಳ ವತಿಯಿಂದ ಕುಂದುಕೊರತೆ ಆಲಿಸಲಾಗುತ್ತದೆ. ಸಾಧ್ಯವಾದಲ್ಲಿ ಸ್ಥಳದಲ್ಲೇ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ವಹಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಒಟ್ಟು 56 ಅರ್ಜಿಗಳು ಬಂದಿವೆ. ಇದರಲ್ಲಿ ಕಂದಾಯ ಇಲಾಖೆಗೆ 26, ತಾಪಂಗೆ 9, ಸರ್ವೆ ಇಲಾಖೆಗೆ 15, ಸೆಸ್ಕ್ಗೆ 2, ಕೃಷಿ 1, ಹಿಂದುಳಿದ ವರ್ಗಗಳ ಇಲಾಖೆಗೆ 2 ಹಾಗೂ ಬ್ಯಾಂಕ್ ಸಂಬಂಧಿತ 2 ಅರ್ಜಿಗಳು ಸಲ್ಲಿಕೆಯಾಗಿವೆ. ಇದನ್ನು ಪರಿಶೀಲಿಸಿ ಸಾಧ್ಯವಾದಷ್ಟು ಬೇಗ ಕ್ರಮ ವಹಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಕೆಸ್ತೂರು ಗ್ರಾಮದ ಪರಿಶಿಷ್ಟ ಜಾತಿಯ ಬೀದಿಯಲ್ಲಿ ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಗ್ರಾಮಸ್ಥರು ದೂರಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಉಪ ತಹಶೀಲ್ದಾರ್ ಈ ಬಗ್ಗೆ ಜಾಗದ ಸರ್ವೆ ನಡೆಸಿ ಆದಷ್ಟು ಬೇಗ ಇದನ್ನು ತೆರವುಗೊಳಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು. ಜಿಪಂ ಸದಸ್ಯೆ ಉಮಾವತಿ, ಗ್ರಾಪಂ ಅಧ್ಯಕ್ಷ ಬಾಲುಪ್ರಸಾದ್, ಉಪಾಧ್ಯಕ್ಷೆ ಶೋಭಾ, ಗ್ರಾಪಂ ಸದಸ್ಯರು ಡಾ. ಅಮರ್, ಡಾ. ಪ್ರವೀಣ್, ಕಂದಾಯ ಇಲಾಖೆಯ ನಂಜುಂಡ, ರಾಣಿ, ಸತೀಶ್, ಶರತ್, ಅನಿಲ್ ಇತರರಿದ್ದರು.