ಮುಂದಿನ ಅವಧಿಗೆ ಉದ್ಯೋಗಾವಕಾಶಕ್ಕೆ ಒತ್ತು
Team Udayavani, Feb 1, 2023, 3:56 PM IST
ಚಿಕ್ಕಬಳ್ಳಾಪುರ: ಇದುವರೆಗೆ ಕ್ಷೇತ್ರದ ಆರೋಗ್ಯ, ಶಿಕ್ಷಣ ಮತ್ತು ನೀರಾವರಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಮುಂದಿನ ಚುನಾವಣೆಯಲ್ಲಿ ಆಯ್ಕೆ ಆದರೆ ಉದ್ಯೋಗಾವಕಾಶ ಕಲ್ಪಿಸಲು ಶ್ರಮಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಭರವಸೆ ನೀಡಿದರು.
ತಾಲೂಕಿನ ಕೊಂಡೇನಹಳ್ಳಿ ಗ್ರಾಪಂ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮಯದಲ್ಲಿ ಬಂದು ಆಮಿಷ ನೀಡುವವರ ಪರ ಒಂದು ದಿನಕ್ಕೆ ಯೋಚನೆ ಮಾಡದೆ, ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುತ್ತಿರುವವರ ಬಗ್ಗೆ ಕಾಳಜಿ ವಹಿಸುವಂತೆ ಕೋರಿದರು. ಈ ಹಿಂದೆ ಮೂರು ಬಾರಿ ನೀವು ತಮ್ಮನ್ನು ಆಯ್ಕೆ ಮಾಡಿದ ಕಾರಣಕ್ಕೆ ಪ್ರತಿ ಬಾರಿಗೂ ಒಂದೊಂದು ಕ್ಷೇತ್ರ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.
ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ: ಆರೋಗ್ಯ, ಶಿಕ್ಷಣ, ಕೃಷಿ, ನೀರಾವರಿ ಸೇರಿ ಎಲ್ಲಾ ವಿಚಾರಗಳ ಬಗ್ಗೆಯೂ ಗಮನ ಹರಿಸಲಾಗಿದೆ. ಕ್ಷೇತ್ರದ ಎಲ್ಲಾ ಪ್ರಾಥಮಿಕ ಆರೋಗ್ಯಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ಕೆಲಸವಾಗಿದೆ.ಶಾಂತಾ ಮೊಬೈಲ್ ಕ್ಲಿನಿಕ್ ಆರಂಭಿಸಿ, ನಿಮ್ಮ ಮನೆ ಬಾಗಿಲಿಗೇ ಆರೋಗ್ಯ ನೀಡುವ ಕೆಲಸ ಮಾಡಲಾಗಿದೆ. ಎಚ್.ಎನ್. ವ್ಯಾಲಿ ನೀರು ತಂದು ಈ ಭಾಗವನ್ನು ಸಮೃದ್ಧಿ ಮಾಡಲಾಗಿದೆ ಎಂದು ವಿವರಿಸಿದರು.
ಕೈಗಾರಿಕೆಗಳ ಸ್ಥಾಪನೆ: ಈ ಹಿಂದಿನ ಅವಧಿ ಗಳಲ್ಲಿ ತುರ್ತು ವಿಚಾರಗಳಿಗೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದು, ಈ ಅವಧಿಯಲ್ಲಿ ಕ್ಷೇತ್ರದ ಪ್ರತಿಯೊಬ್ಬ ಯುವಕನಿಗೆ ಉದ್ಯೋಗ ನೀಡಲು ಕೈಗಾರಿಕೆ ಸ್ಥಾಪಿಸಲಾಗುವುದು. ಅಲ್ಲದೆ, ಎತ್ತಿನಹೊಳೆ ಯೋಜನೆ ಮುಂದಿನ ಒಂದೂವರೆ ವರ್ಷದಲ್ಲಿ ಅನುಷ್ಠಾನಮಾಡುವ ಮೂಲಕ ಈ ಭಾಗಕ್ಕೆ ಶಾಶ್ವತ ನೀರಾವರಿ ಒದಗಿಸಲಾಗುವುದು ಎಂದು ಹೇಳಿದರು.
ಕೊಂಡೇನಹಳ್ಳಿ ಗ್ರಾಪಂನಲ್ಲಿ 403 ಉಚಿತ ನಿವೇಶನಮತ್ತು 100 ಮನೆ ಸೇರಿ ಒಟ್ಟು 512 ಕುಟುಂಬಗಳಿಗೆಸೂರು ಕಲ್ಪಿಸುವ ಕೆಲಸವಾಗುತ್ತಿದೆ. ಸದ್ಬಳಕೆಮಾಡಿಕೊಳ್ಳಲು ಸಚಿವರು ಸಲಹೆ ನೀಡಿದರು.
ನಿವೇಶನ, ಮನೆ ಪಡೆಯಲು ಹಣ ನೀಡಬೇಕಿಲ್ಲ: ಪ್ರಸ್ತುತ ನಿವೇಶನ, ಮನೆಗಳನ್ನು ಪಡೆಯುತ್ತಿರುವವರು ಹಣವನ್ನು ಯಾರಿಗೂ ನೀಡಬೇಕಿಲ್ಲ. ಒಂದು ವೇಳೆ ಹಾಗೆ ಹಣ ನೀಡಿದಲ್ಲಿ ಅವರ ಆದೇಶಪತ್ರ ರದ್ದು ಪಡಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ಆರೋಗ್ಯ ಶಿಕ್ಷಣಕ್ಕೆ ಒತ್ತು: ಒಂದೇ ತಾಲೂಕಿನಲ್ಲಿ ಎರಡು ವೈದ್ಯಕೀಯ ಕಾಲೇಜು ಇರುವುದು ಚಿಕ್ಕಬಳ್ಳಾಪುರದಲ್ಲಿ ಮಾತ್ರ. ಗಾಂಧಿ ಭವನ ನಿರ್ಮಾಣಕಾರ್ಯ ಪೂರ್ಣವಾಗುತ್ತಿದೆ. ಅದೇ ರೀತಿಯಲ್ಲಿ ಕನ್ನಡ ಭವನ ನಿರ್ಮಾಣ ಮುಕ್ತಾಯದ ಹಂತ ತಲುಪಿದೆ ಎಂದು ಹೇಳಿದರು.
ಈ ವೇಳೆ ರಾಮಸ್ವಾಮಿ, ಗ್ರಾಪಂ ಅಧ್ಯಕ್ಷರಾದ ಪವಿತ್ರಾ ಶೈಲೇಂದ್ರ, ಮುನಿರತ್ನಮ್ಮ, ಶ್ರೀಧರ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಕಾಳೇಗೌಡ, ಉಮಾಶಂಕರ್, ಉದಯ್, ಮುರಳಿ ಉಪಸ್ಥಿತರಿದ್ದರು.
ಈಶಾ ಫೌಂಡೇಷನ್‌ಗೆ ಸರ್ಕಾರಿ ಜಾಗ ನೀಡಿಲ್ಲ : ಕ್ಷೇತ್ರದಲ್ಲಿ ಈಶಾ ಫೌಂಡೇಷನ್ ಸಿದ್ಧವಾಗಿದೆ. ಇದರಿಂದ ರೈತರ ಭೂಮಿ ಬೆಲೆ ಹೆಚ್ಚಾಗಿದೆ. ಫೌಂಡೇಷನ್‌ಗೆ ಒಂದೇ ಒಂದು ಎಕರೆ ಸರ್ಕಾರದ ಜಾಗ ಈವರೆಗೂ ನೀಡಿಲ್ಲ ಎಂದು ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು. ಈಶಾಫೌಂಡೇಷನ್ ಮುಖ್ಯಸ್ಥ ಸದ್ಗುರು ಅವರೇ ಭೂಮಿ ಖರೀದಿಸಿ, ಅಭಿವೃದ್ಧಿ ಮಾಡುತ್ತಿದ್ದಾರೆ.ಕಲೆ, ಸಂಗೀತ, ಸಾಂಸ್ಕೃತಿಕ ತರಬೇತಿ ಕೇಂದ್ರಗಳನ್ನು ಈ ಭಾಗದಲ್ಲಿ ತೆರೆಯುವುದಾಗಿ ಅವರು ಹೇಳಿದ್ದಾರೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಪ್ರತಿಷ್ಠಾನ ಬೆಳೆಯಲಿದ್ದು, ಚಿಕ್ಕಬಳ್ಳಾಪುರಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯಲಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜಯಲಲಿತಾ ಟು ಅಜಂ ಖಾನ್; ಶಿಕ್ಷೆಯ ಕಾರಣದಿಂದ ಅನರ್ಹಗೊಂಡ ಸಂಸದ-ಶಾಸಕರ ಪಟ್ಟಿ ಇಲ್ಲಿದೆ
ರೈತರ ಹಕ್ಕಿಗಾಗಿ ಸಂಘಟಿತರಾಗಿ ಹೋರಾಟ ಅನಿವಾರ್ಯ; ಶಾಂತಿ ಪ್ರಸಾದ್ ಹೆಗ್ಡೆ
ಸುಳ್ಯ ನ.ಪಂ. ಸಾಮಾನ್ಯ ಸಭೆ; ನೀರಿನ ಮಿತಬಳಕೆ, ಜಾಗೃತಿ ಅಗತ್ಯ
ಚಿಕ್ಕಮಗಳೂರು: ಮತದಾರರಿಗೆ ಹಂಚಲು ತಂದಿದ್ದ 150 ಕ್ವಿಂಟಾಲ್ ಅಕ್ಕಿ ವಶ
ಎ. 2: “ಬಸಂತ್ ಉತ್ಸವ್’; ಸಿತಾರ್-ಬಾನ್ಸುರಿ ಜುಗಲ್‌ಬಂದಿ