ಕಮಲಾಪುರದಲ್ಲಿ ಮಡಿಕೆ ತಯಾರಿಕೆ ಕಮಾಲ್

Team Udayavani, May 10, 2019, 12:53 PM IST

ಗೌರಿಬಿದನೂರು: ಪುರಾಣಗಳ ಕಾಲದಿಂದಲೂ ಮಾನವನ ನಾಗರಿಕತೆ ಬೆಳೆಯುತ್ತಾ ಬಂದಿರುವುದೇ ಮಣ್ಣಿನ ಮಡಿಕೆಗಳಿಂದ ಎನ್ನಬಹುದು. ಆಧುನಿಕತೆಯ ಜೀವನ ಶೈಲಿಯಲ್ಲಿ ತಾಮ್ರದ ಪಾತ್ರೆಗಳು, ಇಂಡಾಲಿಯಂ ಪಾತ್ರೆಗಳು, ಸ್ಟೀಲ್ ಪಾತ್ರೆಗಳಿಗೆ ಒಗ್ಗಿಕೊಂಡು ನಮಗೆ ಹಲವಾರು ದಶಕಗಳೇ ಕಳೆದಿದ್ದರೂ ತಣ್ಣನೆಯ ನೀರನ್ನು ಕುಡಿಯಲು ಫ್ರಿಡ್ಜ್ಗಿಂತಲೂ ಇಂದಿಗೂ ಮಣ್ಣಿನ ಮಡಿಕೆಯನ್ನೇ ಅವಲಂಬಿಸಿದ್ದೇವೆ.

ಸೇವಾ ಸಂಸ್ಥೆಗಳು ಸಾರ್ವಜನಿಕರಿಗೆ ಉಚಿತವಾಗಿ ಕುಡಿಯಲು ನೀರಿನ ಅರವಟಿಗೆಗಳನ್ನು ಸ್ಥಾಪಿಸಿ ಅದರಲ್ಲಿ ಮಣ್ಣಿನ ಮಡಿಕೆಗಳನ್ನೇ ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಈಗಾಗಲೇ ಮೂಲೆ ಗುಂಪಾಗಿರುವ ಕುಂಬಾರಿಕೆ ಗೌರಿಬಿದನೂರು ತಾಲೂಕಿನಲ್ಲಿ ಅಳಿದುಳಿದಿದೆ ಎನ್ನಬಹುದಾಗಿದೆ.

ರಾಜ್ಯ ಹೆದ್ದಾರಿ ಬೆಂಗಳೂರು ರಸ್ತೆಯಲ್ಲಿ ಬರುವ ತೊಂಡೇಬಾವಿ ಹೋಬಳಿಯಲ್ಲಿ ಕಮಲಾಪುರ ಎಂಬ ಪುಟ್ಟಗ್ರಾಮವಿದ್ದು, ಈ ಗ್ರಾಮದಲ್ಲಿ ಹಿಂದೆ ಸುಮಾರು 30 ಕುಟುಂಬಗಳು ಇದ್ದವು. ಪ್ರಸ್ತುತ ಇರುವ ಕೆಲವೇ ಕುಟುಂಬಗಳು ಮಡಿಕೆಗಳನ್ನು ತಯಾರಿಕೆ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ತಯಾರಿಸುವ ವಿಧಾನ: ಪ್ರತಿ ವರ್ಷ ಜನವರಿಯಲ್ಲಿ ಸ್ಥಳೀಯ ಪೋತೇನಹಳ್ಳಿ ಕೆರೆಯಿಂದ ಜೇಡಿಮಣ್ಣನ್ನು ತಂದು ಸಂಗ್ರಹಿಸಿ ಮಡಿಕೆ ತಯಾರಿಸುತ್ತಾರೆ. ಜನವರಿಯಿಂದ ಜೂನ್‌ವರೆಗೆ ಮಡಿಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.

ನೈಪುಣ್ಯತೆ ಬೇಕು: ಮಡಿಕೆಗಳನ್ನು ವಿವಿಧ ಶೈಲಿಗಳಲ್ಲಿ ತಯಾರಿಸಲು ಸಾಕಷ್ಟು ನೈಪುಣ್ಯತೆ ಹಾಗೂ ಕೌಶಲ್ಯತೆ ಬೇಕಾಗಿದ್ದು, ಹಳಬರು ಇಂದಿಗೂ ಇಂತಹ ಕೌಶಲ್ಯದಿಂದ ಮಡಿಕೆ ತಯಾರು ಮಾಡುತ್ತಿದ್ದಾರೆ. ಹಿಂದೆ ಧಾನ್ಯಗಳನ್ನು ಸಂಗ್ರಹಿಸಲು ಮಣ್ಣಿನಿಂದ ತಯಾರಾದ ವಾಡೆಗಳನ್ನು ಬಳಸುತ್ತಿದ್ದರು.

ಅದು ಕಾಲಕ್ರಮೇಣ ನೇಪಥ್ಯಕ್ಕೆ ಸರಿದ ಮೇಲೆ ಇದೇ ವಾಡೆಗಳನ್ನು ಈಗ ನಗರ ಪ್ರದೇಶದಲಿ ್ಲತಂಧೂರಿ ರೋಟಿ ಮತ್ತು ಕುಲ್ಚಾಗಳನ್ನು ತಯಾರಿಸಲು ಬಳಸುತ್ತಿದ್ದು, ನಗರ ಪ್ರದೇಶದಲ್ಲಿ ಹೆಚ್ಚು ವಾಡೆಗಳು ಡಾಬಾಗಳಿಗೆ ಮಾರಾಟವಾಗುತ್ತಿದೆ ಎಂದು ಕುಂಬಾರಿಕೆ ಮಾಡುತ್ತಿರುವ ಚಿಕ್ಕಸಿದ್ದಪ್ಪ ಹೇಳುತ್ತಾರೆ.

ಮಳೆ ಬಾರದೆ ವ್ಯವಸಾಯವು ಸಾಕಷ್ಟು ನಷ್ಟವಾಗುತ್ತಿರುವ ಇಂದಿನ ದಿನಗಳಲ್ಲಿ ಕುಂಬಾರಿಕೆಯ ಮೇಲೂ ಹೆಚ್ಚು ಪರಿಣಾಮ ಬೀರುತ್ತದೆ ಎನ್ನುತ್ತಾರಾದರೂ ಮಡಿಕೆಗಳನ್ನು ತಯಾರು ಮಾಡಲು ಸುಡಬೇಕಾದ ನೀಲಗಿರಿ ಸೊಪ್ಪು ಸಿಗುವುದು ಕಷ್ಟಕರವಾಗಿದೆ.

ಖರೀದಿಸಲು ಸಹ ದುಬಾರಿಯಾಗಿರುವುದರಿಂದ ಮಡಿಕೆ ತಯಾರಿಸುವ ವೆಚ್ಚವೂ ಹೆಚ್ಚಾಗುತ್ತಿದೆ ಎನ್ನುವ ಅವರು, ಮಡಿಕೆಯನ್ನು ಎರಡು ಬಣ್ಣದಲ್ಲಿ ತಯಾರಿಸುತ್ತಿದ್ದು ಕೆಂಪುಬಣ್ಣದ ಮಡಿಕೆಗೆ ಬಣ್ಣ ಹಾಕಲಾಗುತ್ತಿದ್ದು ಅವುಗಳು ನಗರ ಪ್ರದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಕೆಲವು ನಗರ ಪ್ರದೇಶದವರು ಬಂದು ಸಗಟಾಗಿ ಮಡಿಕೆಗಳನ್ನು ಖರೀದಿಸಿ ಬೆಂಗಳೂರಿನಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವ ಅವರು ಮಡಿಕೆಗಳನ್ನು ತಯಾರಿಸುವುದುಕ್ಕಿಂತಲೂ ಅವುಗಳನ್ನು ಒಂದು ಕಡೆಯಿಂದ ಮತ್ತೂಂದೆಡೆಗೆ ಸಾಗಾಣಿಕೆ ಮಾಡುವುದು ಕಷ್ಟಕರವಾಗಿದ್ದು, ಲಾರಿಗಳಲ್ಲಿ ಒಣಹುಲ್ಲನ್ನು ತುಂಬಿ ಸಾಗಾಣಿಕೆ ಮಾಡಲಾಗುತ್ತದೆ ಎಂದು ಹೇಳುತ್ತಾರೆ ಕಮಲಾಪುರದ ಚಿಕ್ಕಸಿದ್ದಪ್ಪ.

ಕಾಯಕಕ್ಕೆ ತನ್ನ ಇಬ್ಬರು ಮಕ್ಕಳು ಹಾಗೂ ಮನೆಯ ಮಹಿಳೆಯರ ಬೆಂಬಲವೂ ಸೇರಿ 6 ತಿಂಗಳು ಶ್ರಮವಹಿಸಿ ಮಡಿಕೆಗಳನ್ನು ತಯಾರಿಸಿದರೆ ಜನವರಿಯಿಂದ ಜೂನ್‌ವರೆಗೆ ಮಾರಾಟ ಮಾಡಿದರೆ ಖರ್ಚುಗಳೆಲ್ಲವೂ ಹೋಗಿ 1.5 ಲಕ್ಷದಿಂದ 2 ಲಕ್ಷ ಆದಾಯ ಬರುತ್ತದೆ ಎಂದು ಹೇಳಿದರು.

ಪ್ರತಿ ವ್ಯಕ್ತಿಯಿಂದ ದಿನಕ್ಕೆ 20 ಮಡಿಕೆ ತಯಾರಿ

ಪ್ರತಿ ವ್ಯಕ್ತಿ ಒಂದು ದಿನಕ್ಕೆ 20 ಮಡಿಕೆಗಳನ್ನು ತಯಾರಿಸಬಹುದು. ಈ ಗುಡಿ ಕೈಗಾರಿಕೆಯಲ್ಲಿ ಮಹಿಳೆಯರೂ ಸಹಾಯ ಮಾಡುವುದರಿಂದ ಮಾರಾಟ ಮಾಡಲು, ತಯಾರಿಸಲು ಹಾಗೂ ಮಣ್ಣನ್ನು ಹದಮಾಡಲು ಪುರುಷರಿಗೆ ಸಹಾಯ ಮಡುವುದು ಹೆಚ್ಚು ಉಪಕಾರಿಯಾಗಿದೆ. ಆಧುನಿಕ ವಿನ್ಯಾಸದ ಹೂವಿನ ಕುಂಡ, ಪಾಟುಗಳು ಮುಂತಾದವುಗಳಿಂದ ಹೆಚ್ಚು ವ್ಯಾಪಾರ ಮತ್ತು ಮಾರಾಟವಾಗುತ್ತಿದೆ ಎನ್ನಲಾಗಿದ್ದು, ಆಧುನಿಕತೆಯ ಅತಿರೇಕದಿಂದ ಹೊಸದು ಹೋಗಿ ಹಳೆಯ ಪರಿಕಲ್ಪನೆಗಳು ಮರು ಕಳಿಸುತ್ತದೆ ಎನ್ನುವುದಕ್ಕೆ ಮೂಲೆಗುಂಪಾಗಿದ್ದ ಕುಂಬಾರಿಕೆ ಹೊಸ ಶೈಲಿಯಲ್ಲಿ ಹೆಚ್ಚು ಬೆಳಕಿಗೆ ಬರಲಿ ಎಂಬುದು ಎಲ್ಲರ ಆಶಯ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ