ಕೋರೇಗಾಂವ್ ಯುದ್ಧ ದಲಿತರ ಸ್ವಾಭಿಮಾನದ ಸಂಕೇತ
Team Udayavani, Jan 2, 2020, 3:00 AM IST
ಚಿಕ್ಕಬಳ್ಳಾಪುರ: ಪೇಶ್ವೆಗಳು ತಮ್ಮದೊಂದಿಗೆ ನಡೆಸಿಕೊಳ್ಳುತ್ತಿದ್ದ ಶೋಷಣೆ, ಗುಲಾಮಗಿರಿಯಿಂದ ಮುಕ್ತಿ ಪಡೆಯಲು ಮಹರ್ ಯೋಧರು ಕಡಿಮೆ ಸಂಖ್ಯೆಯಲ್ಲಿದ್ದರೂ ಸುಮಾರು 30 ಸಾವಿರ ಪೇಶ್ವೆಗಳ ಸೈನ್ಯರನ್ನು ಸೋಲಿಸಿ ಕೋರೇಗಾಂವ್ ಯುದ್ಧದಲ್ಲಿ ವಿಜಯದ ಪತಾಕೆ ಹಾರಿಸಿದ್ದು, ದಲಿತರ ಸ್ವಾಭಿಮಾನದ ಸಂಕೇತ ಎಂದು ಚಿಂತಕ ಡಾ.ಕೋಡಿರಂಗಪ್ಪ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಶೌರ್ಯ ಮೆರೆದು ಮಡಿದ ಮಹಾರ್ ಯೋಧರ ಸ್ಮರಣಾರ್ಥ ಆಯೋಜಿಸಲಾಗಿದ್ದ ಕೋರೇಗಾಂವ್ ಯುದ್ಧ ವಿಜಯೋತ್ಸವ ಕಾರ್ಯ ಕ್ರಮದಲ್ಲಿ ಮಾತನಾಡಿದರು.
ದಲಿತರಿಗೆ ದೊಡ್ಡ ಪ್ರೇರಣೆ: ಕೋರೇಗಾಂವ್ ಯುದ್ಧ ದಲಿತರಿಗೆ ದೊಡ್ಡ ಪ್ರೇರಣೆ ಕಲ್ಪಿಸಿದೆ. ದೇಶದ ಇತಿಹಾದ ದಿಕ್ಕುನ್ನು ಬದಲಿಸಿದೆ. ಆದರೆ ಇಂದು ದ್ವೇಷ, ಅಸೂಯೆ ಬಿತ್ತುವ ಜನ ದೇಶದಲ್ಲಿ ಹೆಚ್ಚಾಗಿದ್ದಾರೆ. ದೇಶದ ಇತಿಹಾಸವನ್ನು ಅರಿತರೆ ಮಾತ್ರ ಒಳ್ಳೆಯ ಸಮಾಜ ನಿರ್ಮಾಣ ಮಾಡಬಹುದು. ಅಂಬೇಡ್ಕರ್ ಅಂದು ಇತಿಹಾಸ ಓದಿ ತಿಳಿದುಕೊಂಡ ನಂತರ ಕೋರೇಗಾಂವ್ ಯುದ್ಧದ ಅರಿವು ಅದರ ಮಹತ್ವ ಎಲ್ಲರಿಗೂ ತಿಳಿಯಿತು ಎಂದರು.
ಇಂದಿಗೂ ದೇಶದಲ್ಲಿ ಅಸ್ಪೃಶ್ಯತೆ ತಾಂಡವ: ಪ್ರತಿಯೊಬ್ಬರು ಇತಿಹಾಸವನ್ನು ವರ್ತಮಾನದಲ್ಲಿ ನಿಂತು ಭವಿಷ್ಯವನ್ನು ಕಂಡುಕೊಳ್ಳಬೇಕು. ಇಂದಿಗೂ ದೇಶದಲ್ಲಿ ಅಸ್ಪೃಶ್ಯತೆ, ಅಸಮಾನತೆ ದೊಡ್ಡ ಪ್ರಮಾಣದಲ್ಲಿ ಯಾರ ಕಣ್ಣಿಗೂ ಕಾಣದಂತೆ ತಾಂಡವಾಡುತ್ತಿದೆ. ಸ್ವಾತಂತ್ರ ಬಂದ ಬಳಿಕ ಸರ್ಕಾರಗಳು ದಲಿತರಿಗೆ ಸಮಾನ ಶಿಕ್ಷಣ, ಅಸ್ಪೃಶ್ಯತೆ ನಿವಾರಣೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಇವತ್ತು ಭಾರತ ಜಗತ್ತಿನಲ್ಲಿಯೆ ಬಲಿಷ್ಠವಾಗಿರುತ್ತಿತ್ತು. ಎಲ್ಲಿಯವರೆಗೆ ಸಮಾಜದಲ್ಲಿ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೂ ದೇಶ ಉದ್ಧಾರ ಆಗುವುದಿಲ್ಲ ಎಂದರು.
ದಲಿತರಿಗೆ ಒಳ್ಳೆಯ ಶಕ್ತಿ: ಕೋರೇಗಾವಂವ್ ಯುದ್ಧದ ವಿಜಯೋತ್ಸವ ನಿಜಕ್ಕೂ ದಲಿತರಿಗೆ ಒಳ್ಳೆಯ ಶಕ್ತಿ, ಸಮರ್ಥ ಇದೆ ಎಂಬುದನ್ನು ತೋರಿಸಿಕೊಟ್ಟಿದೆ. ಅದನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಂಡು ಮುನ್ನಡೆದರೆ ಜೀವನದಲ್ಲಿ ಉನ್ನತ ಸ್ಥಾನ ಪಡೆಯ ಬಹುದು ಎಂದು ತಿಳಿಸಿದರು.
ದಲಿತರ ಪಾಲಿಗೆ ಸ್ವಾಭಿಮಾನದ ಸಂಕೇತ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕ ಸುಧಾ ವೆಂಕಟೇಶ್ ಮಾತನಾಡಿ, ಕೋರೇಗಾಂವ್ ಯುದ್ಧದ ವಿಜಯೋತ್ಸವ ದಲಿತ ಹಾಗೂ ಶೋಷಿತ ಸಮುದಾಯಗಳಲ್ಲಿ ಸ್ವಾಭಿಮಾನ ಹಾಗೂ ಸ್ವಾವಲಂಬನೆಯ ಜಾಗೃತಿ ಪ್ರಜ್ಞೆ ಮೂಡಿಸಿವೆ. ಕೋರೇಗಾಂವ್ ಯುದ್ಧ ಐತಿಹಾಸಿಕವಾಗಿದೆ.
ಆದರೆ ಇತಿಹಾಸಕಾರರು ಕೋರೇಗಾಂವ್ ಯುದ್ಧ ಚರಿತ್ರೆಯನ್ನು ಯಾರಿಗೂ ತಿಳಿಯದಂತೆ ಮುಚ್ಚಿಡುವ ಕುತಂತ್ರ ನಡೆಸಿದ್ದಾರೆ. ಆದರೆ ಅದು ಅಂಬೇಡ್ಕರ್‌ಗೆ ತಿಳಿದ ನಂತರ ಅದರ ಮಹತ್ವ ಇಂದು ಪ್ರತಿಯೊಬ್ಬರಿಗೂ ಅರ್ಥವಾಗಿದೆ. ಗುಲಾಮಗಿರಿ ಮುಕ್ತಿಗಾಗಿ ಹೋರಾಡಿದ ಮಹರ್ ಸೈನಿಕರು ಪೇಶ್ವೆಗಳನ್ನು ಸೋಲಿಸಿದ್ದು, ಈ ಯುದ್ಧ ದಲಿತರ ಪಾಲಿಗೆ ಸ್ವಾಭಿಮಾನದ ಸಂಕೇತವಾಗಿದೆ ಎಂದರು.
ವೇದಿಕೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಗಾನ ಅಶ್ವತ್ಥ್, ಹಿರಿಯ ಜಿಲ್ಲಾ ಸಂಚಾಲಕ ನಾಗೇಶ್, ಮುಖಂಡರಾದ ರಾಮಚಂದ್ರ, ಸತೀಶ್, ವೆಂಕಟೇಶ್, ಮುನಿಕೃಷ್ಣ, ಚಿಕ್ಕಪ್ಪಯ್ಯ, ಶ್ರೀನಿವಾಸ್, ಶಿವಣ್ಣ, ಮುನಿರಾಜು, ಅಂಜಿ, ಅಂಗಟ್ಟ ರಾಜಪ್ಪ, ಆನಂದ್, ಗಂಗಾಧರ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕದಸಂಸ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕುತಂತ್ರದಿಂದ ಇಂದು ದಲಿತರ ಶಕ್ತಿ, ಸಮರ್ಥ್ಯವನ್ನು ದಮನ ಮಾಡುವ ಕೆಲಸ ಮಾಡಲಾಗುತ್ತಿದೆ. ರಾಜಕೀಯ ಅಧಿಕಾರ ಸಿಕ್ಕರೂ ದಲಿತರಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ. ಪ್ರಬುದ್ಧ ಭಾರತ ನಿರ್ಮಾಣಕ್ಕೆ ಹಾಗೂ ಅಂಬೇಡ್ಕರ್, ಬುದ್ಧ, ಬಸವಣ್ಣನ ಅಶಯಗಳನ್ನು ಈಡೇರಿಸುವ ದಿಕ್ಕಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು.
-ಡಾ.ಕೋಡಿರಂಗಪ್ಪ, ಚಿಂತಕರು