ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್ ಕೊಡೋ ಪೇದೆ ವಿರುದ್ಧ ಅಣ್ಣಾಮಲೈ FIR
Team Udayavani, Feb 16, 2017, 11:16 AM IST
ಚಿಕ್ಕಮಗಳೂರು : ಇಲ್ಲಿನ ಬಾಳೆಹೊನ್ನೂರಿನಲ್ಲಿ ಕಾರಿನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ ಇಬ್ಬರನ್ನು ಎಳೆತಂದು ಮಾರಣಾಂತಿಕವಾಗಿ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಸಾರ್ವಜನಿಕ ವಲಯದಿಂದ ಪೊಲೀಸ್ ಕ್ರಮದ ವಿರುದ್ದ ಆಕ್ರೋಶ ವ್ಯಕ್ತವಾಗದ ಬೆನ್ನಲ್ಲೇ ಥಳಿಸಿರುವ ಪೇದೆ ವರ್ಗಾವಣೆ ಮಾಡಿ ಎಫ್ಐಆರ್ ದಾಖಲಿಸಲಾಗಿದೆ.
ಕಳೆದ ಭಾನುವಾರ ಜಗದೀಶ್ ಮತ್ತು ಸುರಕ್ಷಾ ಎನ್ನುವ ಯುವಕರಿಬ್ಬರು ಕ್ರೀಡಾಂಗಣದ ಬಳಿ ಕಾರಿನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಪೇದೆ ಗಿರೀಶ್ ಇಬ್ಬರನ್ನೂ ಠಾಣೆಗೆ ಎಳೆದೊಯ್ದು ಹಿಗ್ಗಾಮುಗ್ಗಾ ಥಳಿಸಿ ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್ ನೀಡಿದ್ದಾರೆ. ಮಾತ್ರವಲ್ಲದೆ ರಾತ್ರಿ ಇಡೀ ಮುಖಕ್ಕೆ ತಣ್ಣೀರು ಎರಚಿ ಚಿತ್ರ ಹಿಂಸೆ ನೀಡಿರುವ ಬಗ್ಗೆ ಆರೋಪಿಸಲಾಗಿದೆ.
ಪದೇ ಪದೇ ನಿಮ್ಮಿಬ್ಬರ ಮೇಲೆ ನಕ್ಸಲ್ ಕೇಸ್ ಹಾಕಿ ಗುಂಡು ಹಾಕಿ ಕೊಲ್ಲುವುದಾಗಿ ಬೆದರಿಸಿರುವುದಾಗಿ ಜಗದೀಶ್ ಮತ್ತು ಸುರಕ್ಷಾ ಹೇಳಿಕೊಂಡಿದ್ದಾರೆ.
ಥಳಿತದಿಂದ ಜಗದೀಶ್ ಎರಡೂ ಕಣ್ಣುಗಳು ಗಂಭೀರ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಸುರಕ್ಷಾ ಗೆ ನಡೆಯಲು ಸಾಧ್ಯವಾಗುತ್ತಿಲ್ಲ. ಇಬ್ಬರಿಗೂ ಕೊಪ್ಪ ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಪ್ರಕರಣದ ಬಗ್ಗೆ ಗುರುವಾರ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರು ಹಲ್ಲೆ ನಡೆಸಿದ್ದಾರೆನ್ನಲಾಗದ ಪೊಲೀಸ್ ಪೇದೆ ಗಿರೀಶ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.