

Team Udayavani, Sep 21, 2020, 6:40 PM IST
ಹೊಳಲ್ಕೆರೆ: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ನಡೆದ ಮೆಗಾ ಇ-ಲೋಕ ಅದಾಲತ್‌ನಲ್ಲಿ 629 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 85,53,254 ರೂ. ವಸೂಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೇಮಾ ವಸಂತ ರಾವ್ ಪವಾರ್ ತಿಳಿಸಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಮೆಗಾ ಇ-ಲೋಕ ಅದಾಲತ್ ಗೆ ಚಾಲನೆ ನೀಡಿ ಅವರು ಮಾತನಾಡಿದರು. ಈಗಿನ ಪರಿಸ್ಥಿತಿಯಲ್ಲಿ ಡಿಜಿಟಲ್ ವೇದಿಕೆ ಪ್ರಮುಖ ಪಾತ್ರ ವಹಿಸಲಿದೆ. ವಕೀಲರು ಮತ್ತು ಕಕ್ಷಿದಾರರು ಪರಿಸ್ಥಿತಿಗೆ ಪೂರಕವಾಗಿ ಸ್ಪಂದಿಸುವ ಮೂಲಕ ಇ-ಲೋಕ ಅದಾಲತ್‌ಪ್ರಯೋಜನ ಪಡೆದುಕೊಳ್ಳಬೇಕು. ಕೋವಿಡ್-19 ಹಿನ್ನಲೆಯಲ್ಲಿ ನ್ಯಾಯದಾನದಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ಕಕ್ಷಿದಾರರಿಗೆ ಡಿಜಿಟಲ್ ಅದಾಲತ್ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದೆ. ಹಾಗಾಗಿ ಕಕ್ಷಿದಾರರು ವ್ಯಾಜ್ಯಗಳನ್ನು ರಾಜಿ- ಸಂಧಾನದ ಮೂಲಕ ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಬೇಕು. ಈ ಮೂಲಕ ವ್ಯಾಜ್ಯ ಮುಕ್ತ ಬದುಕು ಕಟ್ಟಿಕೊಳ್ಳಬೇಕೆಂದರು.
ಸಿವಿಲ್ ಹಿರಿಯ ವಿಭಾಗದಲ್ಲಿದ್ದ 1607 ಪ್ರಕರಣಗಳಲ್ಲಿ 462 ರಾಜಿಗೆ ಬಂದಿದ್ದು, 379 ಪ್ರಕರಣಗಳು ಮುಕ್ತಾಯಗೊಂಡಿವೆ. ಸಿವಿಲ್ ಕಿರಿಯ ಪ್ರಿನ್ಸಿಪಲ್ ಕೋರ್ಟ್‌ನಲ್ಲಿ 1117ರಲ್ಲಿ 369 ರಾಜಿಗೆ ಬಂದಿದ್ದು, 227 ಪ್ರಕರಣ ಮುಕ್ತಾಯಗೊಂಡಿವೆ. ಹೆಚ್ಚುವರಿ ಸಿವಿಲ್ ಕಿರಿಯ ನ್ಯಾಯಾಲಯದಲ್ಲಿದ್ದ 468 ರಲ್ಲಿ 80 ಪ್ರಕರಣಗಳು ಬಂದಿದ್ದು, 23 ಪ್ರಕರಣಗಳುರಾಜಿಯಾಗಿವೆ. ಬ್ಯಾಂಕ್ ಹಾಗೂ ಹಣಕಾಸು ಪ್ರಕರಣಗಳಲ್ಲಿ 85,53,254 ರೂ. ಗಳನ್ನು ಬ್ಯಾಂಕ್ ಹಾಗೂ ಕಕ್ಷಿದಾರರಿಗೆ ವಸೂಲಿ ಮಾಡಿಕೊಟ್ಟಿದೆ ಎಂದರು.
ಕಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧಿಧೀಶ ರವಿ ಮಾತನಾಡಿ, ಮೆಗಾ ಇ-ಲೋಕ ಅದಾಲತ್ ಕಕ್ಷಿದಾರರಿಗೆ ಸಹಕಾರಿ. ಪರಸ್ಪರ ಹೊಂದಾಣಿಕೆಯಿಂದ ವ್ಯಾಜ್ಯಗಳಿಂದ ಮುಕ್ತಿ ಪಡೆದುಕೊಂಡು ಆರ್ಥಿಕ ನಷ್ಟ ಇಲ್ಲದಂತೆ ನ್ಯಾಯ ಪಡೆದುಕೊಳ್ಳಬಹುದು ಎಂದರು.
ಕಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾ ಧೀಶ ನಾಗೇಶ್, ವಕೀಲರ ಸಂಘದ ಅಧ್ಯಕ್ಷ ಜಿ.ಈ. ರಂಗಸ್ವಾಮಿ ಮತ್ತಿತರರು ಇದ್ದರು.
Ad
You seem to have an Ad Blocker on.
To continue reading, please turn it off or whitelist Udayavani.