ಮೀನುಗಾರಿಕೆ ದೋಣಿಗೆ ತೈಲ ಟ್ಯಾಂಕರ್ ಢಿಕ್ಕಿ
Team Udayavani, Aug 10, 2018, 11:53 AM IST
ಪಣಂಬೂರು: ಕೇರಳದ ಕೊಚ್ಚಿಯಿಂದ 35 ನಾಟಿಕಲ್ ಮೈಲು ದೂರದಲ್ಲಿ ಓಶಿಯಾನಿಕ ಎಂಬ ಮೀನುಗಾರಿಕೆ ದೋಣಿಗೆ ಢಿಕ್ಕಿ ಹೊಡೆದು ಯಾವುದೇ ರಕ್ಷಣಾ ಕಾರ್ಯಾಚರಣೆ ನಡೆಸದೆ ಮುಂದೆ ಸಾಗುತ್ತಿದ್ದ ತೈಲ ಟ್ಯಾಂಕರೊಂದನ್ನು ಕೋಸ್ಟ್ ಗಾರ್ಡ್‌ನವರು ವಶಕ್ಕೆ ಪಡೆದು ವಿಚಾರಣೆಗಾಗಿ ನವಮಂಗಳೂರು ಬಂದರಿಗೆ ಕರೆ ತಂದಿದ್ದಾರೆ. ಡೈರೆಕ್ಟರ್ ಜನರಲ್ ಶಿಪ್ಪಿಂಗ್ ಹಾಗೂ ಮರ್ಕಂಟೈಲ್ ಮೆರೈನ್ ಇಲಾಖೆ ಅಧಿಕಾರಿಗಳು ಗುರುವಾರ ತೈಲ ಟ್ಯಾಂಕರ್ ಸಿಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಅವಘಡ ಆ. 6ರಂದು ರಾತ್ರಿ ಸಂಭವಿಸಿದ್ದು, ಮೀನುಗಾರಿಕೆ ದೋಣಿಯಲ್ಲಿದ್ದ ಮೀನುಗಾರರಲ್ಲಿ ಮೂವರು ಮೃತಪಟ್ಟಿದ್ದರೆ, ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ. ಇಬ್ಬರು ಗಾಯಗಳೊಂದಿಗೆ ಪಾರಾಗಿದ್ದರು. ಬದುಕುಳಿದವರು ನೀಡಿದ ಮಾಹಿತಿ ಆಧರಿಸಿ “ದೇಶಶಕ್ತಿ’ ಎಂಬ ಹೆಸರಿನ ಈ ತೈಲ ಟ್ಯಾಂಕರನ್ನು ಕೋಸ್ಟ್ ಗಾರ್ಡ್ ವಶಕ್ಕೆ ಪಡೆದು ನವಮಂಗಳೂರು ಬಂದರಿಗೆ ಕರೆತಂದಿದೆ.
ಒಟ್ಟು ನಾಲ್ಕು ಹಡಗು ತಡೆ
ಮೀನುಗಾರಿಕಾ ದೋಣಿಗೆ ಢಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಒಟ್ಟು ನಾಲ್ಕು ಸರಕು ಸಾಗಾಟ ಹಡಗುಗಳ ಸಂಚಾರವನ್ನು ತನಿಖೆಗಾಗಿ ತಡೆ ಹಿಡಿಯಲಾಗಿದೆ. ಇದುವರೆಗೂ ಯಾವ ಸರಕು ಸಾಗಾಣಿಕೆ ಹಡಗು ಢಿಕ್ಕಿ ಹೊಡೆದಿದೆ ಎಂಬುದು ಖಚಿತಪಟ್ಟಿಲ್ಲ. ಮುಂಬೈಯಲ್ಲಿ ಎರಡು, ಕೊಲೊಂಬೋಗೆ ಹೋಗುತ್ತಿದ್ದ ಒಂದು ಸಹಿತ ಒಟ್ಟು ನಾಲ್ಕು ಹಡಗುಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಮರ್ಕಂಟೈಲ್ ಮೆರೈನ್ ಕೊಚ್ಚಿ ವಿಭಾಗದ ಅಧಿ ಕಾರಿಗಳು, ಕೋಸ್ಟ್ ಗಾರ್ಡ್ ಹಾಗೂ ಕೇರಳ ಪೊಲೀಸರು ಈ ನಿಟ್ಟಿನಲ್ಲಿ ವಿಚಾರಣೆಗೆ ಸಹಯೋಗ ನೀಡಿದ್ದಾರೆ.