ಖಾಸಗಿ ರಸ್ತೆ ಮಣ್ಣು ಹೆದ್ದಾರಿಗೆ ಬಂದರೆ FIR
Team Udayavani, May 31, 2018, 2:00 AM IST
ಪುತ್ತೂರು: ಮಾಣಿ- ಮೈಸೂರು ಹೆದ್ದಾರಿ ಮಂಗಳವಾರ ಒಂದು ಮಳೆಗೇ ನದಿಯಂತಾಗಿತ್ತು. ರಾತ್ರಿ ಹೊತ್ತು ಸಂಚರಿಸುವ ವಾಹನ ಸವಾರರಿಗೆ ಇದು ರಸ್ತೆಯೋ, ಚರಂಡಿಯೋ ಎಂಬ ಗೊಂದಲ ಉಂಟಾಗಿತ್ತು. ಖಾಸಗಿ ಜಾಗದ ಮಣ್ಣು ಹೆದ್ದಾರಿಗೆ ಬಂದು ಬಿದ್ದಿರುವುದೇ ಈ ಸಮಸ್ಯೆಗೆ ಮೂಲ ಕಾರಣ. ಇದಲ್ಲದೆ, ಚರಂಡಿ ಸಮಸ್ಯೆ, ಹೆದ್ದಾರಿ ತಗ್ಗಿನಲ್ಲಿರುವುದು ಇನ್ನೊಂದು ಕಾರಣ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಲೋಕೋಪಯೋಗಿ ಇಲಾಖೆ ಹಾಗೂ KRDCL, ಪ್ರಕರಣ ದಾಖಲಿಸಲು ಮುಂದಾಗಿವೆ. ಮುಂದೆ ಇಂತಹ ಪ್ರಕರಣ ಗಮನಕ್ಕೆ ಬಂದರೆ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದೆ.
ದರ್ಬೆ, ಸಂಪ್ಯ, ಕಾವು ಪ್ರದೇಶಗಳಲ್ಲಿ ಹೆದ್ದಾರಿ ನದಿಯಂತಾಗಿತ್ತು. ಸಂಜೆ ಹೊತ್ತಿಗೆ ಮಳೆ ತೀವ್ರವಾಗಿ ಸುರಿದ ಕಾರಣ, ಮನೆ ದಾರಿ ಹಿಡಿದಿದ್ದ ನಾಗರಿಕರಿಗೆ ತೊಂದರೆಯಾಯಿತು. ಕೆಲವು ಕಡೆಗಳಲ್ಲಿ ನಾಗರಿಕರೇ ಸ್ವಯಂಸೇವಕರಾಗಿ ನಿಂತು, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅವರು ಬಂದು ಏನೂ ಮಾಡುವಂತಿರಲಿಲ್ಲ. ಬುಧವಾರ ಬೆಳಗ್ಗೆ ಚರಂಡಿಯನ್ನು ಸರಿಪಡಿಸುವ ಕಡೆ ಗಮನ ಹರಿಸಲಾಯಿತು.
ದುರಸ್ತಿ ಕೆಲಸ ಸ್ಥಗಿತ
ಮಂಗಳವಾರ ಮಧ್ಯಾಹ್ನದ ಬಳಿಕ ಭಾರಿ ಮಳೆಯಾಗಿದೆ. ವಿದ್ಯುತ್ ಸಮಸ್ಯೆ ಎಂದಿನಂತೆ ಕಾಡಿದೆ. ಸಂಪ್ಯ ಬಳಿ ಟ್ರಾನ್ಸ್‌ಫಾರ್ಮರ್ ರಿಪೇರಿಗೆ ಬಂದಿದ್ದ ಲೈನ್ ಮ್ಯಾನ್ ಗಳಿಬ್ಬರಿಗೆ ಹೆಜ್ಜೇನು ದಾಳಿ ಮಾಡಿ ಗಾಯಗೊಳಿಸಿತ್ತು. ಹೀಗಾಗಿ, ದುರಸ್ತಿ ಕೆಲಸ ಸ್ಥಗಿತಗೊಂಡು, ವಿದ್ಯುತ್ ಸಮಸ್ಯೆ ತಲೆದೋರಿತು.
ಕಾಲನಿಗಳಲ್ಲಿ ಅವ್ಯವಸ್ಥೆ
ಕಾಲನಿಗಳಲ್ಲಿ ನಿವೇಶನ ಹಂಚುವ ವೇಳೆ ಅಸಮರ್ಪಕ ಮಾನದಂಡ ಅನುಸರಿಸಿದ್ದು, ಈಗ ನಿವಾಸಿಗಳಿಗೆ ತಲೆನೋವಾಗಿದೆ. ಮನೆ ಹಿಂಭಾಗದ ಗುಡ್ಡ ಕುಸಿದಿದೆ. ಚರಂಡಿ ಇಲ್ಲದೆ ಮನೆಯೊಳಗೇ ನುಗ್ಗುವ ನೀರು. ಮನೆ ಮುಂಭಾಗದ ಬರೆ ಜರಿದು, ಮನೆಗೆ ಕಂಟಕ ಒದಗಿದೆ. ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಯಾವುದೇ ಆಶ್ವಾಸನೆ ನೀಡಿಲ್ಲ. ಇನ್ನು ಯಾವುದೇ ರೂಪದಲ್ಲೂ ಈ ಕಾಮಗಾರಿಗಳನ್ನು ನಡೆಸಲು ಸಾಧ್ಯವಿಲ್ಲದಂತಹ ಸ್ಥಿತಿ ಇದೆ. ಇಂತಹ ವಿಕೋಪಗಳಿಗೆ ಪರಿಹಾರವೂ ಇಲ್ಲ ಎಂದು ಗ್ರಾ. ಪಂ.ಸದಸ್ಯರು ತಿಳಿಸಿದ್ದಾರೆ. ಪುತ್ತೂರು ತೋಟಗಾರಿಕಾ ಇಲಾಖೆಗೆ ಹೋಗುವ ರಸ್ತೆಗೆ ಮರ ಬಿದ್ದಿದೆ. ಇದರಿಂದ ಸಂಚಾರ ಸಮಸ್ಯೆ ಸೃಷ್ಟಿಯಾಯಿತು. ತತ್ ಕ್ಷಣದಲ್ಲೇ ಮರ ತೆರವು ಮಾಡಲಾಯಿತು.
ಕೇಸು
ಇದುವರೆಗೆ ಹೆದ್ದಾರಿಗೆ ಬಿದ್ದ ಮಣ್ಣನ್ನು ಇಲಾಖೆ ವತಿಯಿಂದಲೇ ತೆರವು ಮಾಡಿದ್ದೇವೆ. ಇನ್ನು ಮುಂದೆ ಖಾಸಗಿ ಜಾಗದ ಮಣ್ಣು ಹೆದ್ದಾರಿಗೆ ಬಿದ್ದರೆ, ಆಯಾ ಜಾಗದ ಮಾಲೀಕರ ಮೇಲೆ FIR ದಾಖಲಿಸಲಾಗುವುದು. ಆ ಮಣ್ಣನ್ನು ಅವರೇ ತೆರವು ಮಾಡಬೇಕು.
– ಪ್ರಮೋದ್, ಲೋ. ಇಲಾಖೆ ಎಂಜಿನಿಯರ್