
ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡ ; ಕರಾವಳಿಯಾದ್ಯಂತ ಉತ್ತಮ ಮಳೆ
Team Udayavani, Oct 5, 2018, 6:05 AM IST

ಮಂಗಳೂರು/ಉಡುಪಿ: ಅರಬಿ ಸಮುದ್ರದಲ್ಲಿ ಉಂಟಾಗಿರುವ ನಿಮ್ನ ಒತ್ತಡ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಗುರುವಾರ ಸಿಡಿಲಿನಿಂದ ಕೂಡಿದ ಉತ್ತಮ ಮಳೆಯಾಗಿದೆ. ಬೆಳಗ್ಗೆ ಬಿಸಿಲು ಇತ್ತಾದರೂ ಮಧ್ಯಾಹ್ನ ಭಾರೀ ಮೋಡ ಉಂಟಾಗಿ ಮಳೆ ಸುರಿಯಿತು. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ವಿವಿಧೆಡೆ ಸಿಡಿಲಿನ ಆರ್ಭಟಕ್ಕೆ ಹಲವೆಡೆ ಹಾನಿ ಸಂಭವಿಸಿದೆ. ತಲಪಾಡಿ ಸಮೀಪ ಗ್ಯಾಸ್ ಸ್ಟವ್‌ಗೆ ಸಿಡಿಲು ಬಡಿದು ಅಲ್ಲಿದ್ದ ವಸ್ತುಗಳೆಲ್ಲ ಹಾನಿಗೊಳಗಾಗಿವೆ. ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಬ್ಯಾಟರಿ ಸ್ಫೋಟಗೊಂಡಿದೆ.
ಈ ನಡುವೆ ಸಮುದ್ರದಲ್ಲಿ ಉಂಟಾಗಿರುವ ನಿಮ್ನ ಒತ್ತಡ ಮತ್ತಷ್ಟು ತೀವ್ರಗೊಂಡಿದೆ. ಶುಕ್ರವಾರ ವಾಯುಭಾರ ಕುಸಿತ ವಾಗಿ ಮಾರ್ಪಟ್ಟು ಆ ಬಳಿಕ ಚಂಡಮಾರುತದ ಸ್ವರೂಪ ಪಡೆಯಲಿದೆ. ಕ್ರಮೇಣ ಅದು ಒಮಾನ್ ಕರಾವಳಿಯತ್ತ ಚಲಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಾಲ್ಕು ದಿನ ಭಾರೀ ಮಳೆ ಸಂಭವ
ಅರಬಿ ಸಮುದ್ರದದಲ್ಲಿನ ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಅ.5ರಿಂದ 8ರ ವರೆಗಿನ ಅವಧಿಯಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸಹಿತ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಸಿಡಿಲಿನ ಅಬ್ಬರವೂ ಜೋರಾಗಿರುವ ಸಂಭವ ಇದೆ ಎಂದು ಎಚ್ಚರಿಸಲಾಗಿದೆ. ದಕ್ಷಿಣ ಒಳನಾಡಿನಲ್ಲಿಯೂ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಕೇರಳ ಕರಾವಳಿ, ಲಕ್ಷದ್ವೀಪ ಪ್ರದೇಶ, ಆಗ್ನೇಯ ಮತ್ತು ಮಧ್ಯ ಅರಬಿ ಸಮುದ್ರದ ಕಡೆಗೆ ಯಾವುದೇ ಬೋಟುಗಳು ಪ್ರವೇಶಿಸದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಟಾಪ್ ನ್ಯೂಸ್
