
ಸಿಬಂದಿ ಕೊರತೆಯಿಂದ ಬಳಲುತ್ತಿದೆ ಮೂಡುಬಿದಿರೆ ಸರಕಾರಿ ಆರೋಗ್ಯ ಕೇಂದ್ರ
ಎಕ್ಸ್ ರೇ ಟೆಕ್ನೀಶಿಯನ್ ಸಹಾಯಕ ಹುದ್ದೆ 2015ರಿಂದ ತೆರವಾಗಿದೆ.
Team Udayavani, Mar 28, 2023, 12:53 PM IST

ಮೂಡುಬಿದಿರೆ: ತಾಲೂಕು ಸರಕಾರಿ ಆಸ್ಪತ್ರೆಯಾಗುವ ಸನ್ನಾಹದಲ್ಲಿರುವ, ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರವು ಸಿಬಂದಿ ಕೊರತೆಯಿಂದ ಬಳಲುತ್ತಿದೆ. ಮಂಜೂರಾದ 53 ಹುದ್ದೆಗಳ ಪೈಕಿ 29 ಹುದ್ದೆಗಳು ತೆರವಾಗಿವೆ. ಅಂದರೆ ಅರ್ಧಾಂಶಕ್ಕಿಂತಲೂ ಹೆಚ್ಚು ಕೊರತೆ ಇದೆ. 24 ಹುದ್ದೆಗಳು ಪೂರ್ಣಕಾಲಿಕ ಸ್ವರೂಪದಲ್ಲಿವೆ.
ಇಲ್ಲಗಳದೇ ಸಮಸ್ಯೆ
ಇಲ್ಲೀಗ ಆಡಳಿತ ವೈದ್ಯಾಧಿಕಾರಿ ಇಲ್ಲ. ಅದನ್ನು ಹಿರಿಯ ವೈದ್ಯಾಧಿಕಾರಿಯವರೇ ನಿರ್ವಹಿಸ ಬೇಕಾಗಿದೆ. ಜನರಲ್ ಡ್ನೂಟಿ ಮೆಡಿಕಲ್ ಆಫೀಸರ್ ಇಲ್ಲ. ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಿಲ್ಲದೆ ಸಮಸ್ಯೆಯಾಗಿದೆ. ಆದರೂ ಇರುವ ಸಿಬಂದಿ ಆಸ್ಪತ್ರೆಯೊಳಗೆ ಬರುವ ಹೆರಿಗೆ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಉದಾಹರಣೆಗಳಿವೆ. ಇತ್ತಿ ಚೇಗೆ ಗರ್ಭಿಣಿ ಯೊಬ್ಬರು ತೀವ್ರ ಸಂಕಷ್ಟದಲ್ಲಿದ್ದು 108ರಲ್ಲಿ ಮಂಗಳೂರಿಗೆ ಹೋಗುವ ಹಾದಿಯಿಂದಲೇ
ವಾಪಾಸು ಬಂದ ಪ್ರಕರಣವನ್ನು ಸವಾಲಾಗಿ ನಿಭಾಯಿಸಿದ ಪರಿಣತರು ಇಲ್ಲಿದ್ದಾರೆ ಎಂಬುದು ಗಮನಾರ್ಹ.
ಮಕ್ಕಳ ತಜ್ಞರ ಹುದ್ದೆ ಖಾಲಿ ಇದ್ದು, ಸದ್ಯ ಕರೆ ಮೇರೆಗೆ ಹೊರಗಿನವರು ಸೇವೆ ನೀಡುವ ಸ್ಥಿತಿ ಇದೆ. ಕಚೇರಿ ಅಧೀಕ್ಷಕರ ಹುದ್ದೆ, ಜ್ಯೂನಿಯರ್ ಫಾರ್ಮಸಿಸ್ಟ್ ಎರಡು ಹುದ್ದೆಗಳೂ ಖಾಲಿ ಬಿದ್ದಿವೆ. ಪ್ರಥಮ ದರ್ಜೆ ಗುಮಾಸ್ತರಿಲ್ಲ. ಇರುವ ದ್ವಿತೀಯ ದರ್ಜೆ ಗುಮಾಸ್ತೆಯೇ ಎಲ್ಲವನ್ನೂ ನಿರ್ವಹಿಸಬೇಕಾಗಿದೆ. ಹಿರಿಯ ಆರೋಗ್ಯ ಸಹಾಯಕಿ ಹುದ್ದೆ ತೆರವಾಗಿ 6 ವರ್ಷಗಳೇ ಸಂದಿವೆ. ಗ್ರೂಪ್ ಡಿ ಯ 10 ಹುದ್ದೆಗಳಲ್ಲಿ 9 ಹುದ್ದೆಗಳು ಖಾಲಿ ಇವೆ. ಇವರಲ್ಲಿ 7 ಮಂದಿ ಹೊರಗುತ್ತಿಗೆಯವರು. ಓರ್ವರು ಮಾತ್ರ ಇಲ್ಲಿ ಕೆಲಸ ಮಾಡುತ್ತಿದ್ದು ಇನ್ನೋರ್ವರು ಜಿಲ್ಲಾ ಹಿರಿಯ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಾರೆ, ಸಂಬಳ ಮಾತ್ರ ಮೂಡುಬಿದಿರೆಯಲ್ಲಿ ಆಗುವುದಂತೆ!
ವಿಧಾನಸಭೆಯಲ್ಲಿ ಪ್ರಸ್ತಾಪ
ಗುರುವಾರದಂದು ಮಾತ್ರ ಇಲ್ಲಿಗೆ ನೇತ್ರ ತಜ್ಞರು ಬರುತ್ತಿದ್ದು, ಇಲ್ಲಿಗೆ ಪೂರ್ಣಕಾಲಿಕ ನೇತ್ರ ತಜ್ಞರು ಬೇಕಾಗಿದ್ದಾರೆ. ದಂತ ವೈದ್ಯರಿದ್ದಾರೆ. ಯಂತ್ರ ಸ್ವಲ್ಪ ಕೆಟ್ಟಿದೆ. ಡಯಾಲಿಸಿಸ್ ಘಟಕವಿದೆ. ಆದರೆ ತಂತ್ರಜ್ಞರಿಲ್ಲದೆ ತುಕ್ಕು ಹಿಡಿಯುತ್ತಿದೆ ಎಂದು ಸ್ವತ: ಶಾಸಕರೇ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಕ್ರಮ ಜರಗಿಸಲು ಒತ್ತಾಯಮಾಡಿದ್ದಾರೆ. ಸದ್ಯವೇ ಈ ಸಮಸ್ಯೆಗೆ ಪರಿಹಾರ ಲಭಿಸುವ ನಿರೀಕ್ಷೆ ಇದೆ.
ಮೂಡುಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ಪಾಲಡ್ಕ, ಬೆಳುವಾಯಿ, ಶಿರ್ತಾಡಿ, ನೆಲ್ಲಿಕಾರು ಮತ್ತು ಕಲ್ಲಮುಂಡ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹತ್ತು ಉಪಕೇಂದ್ರಗಳಿವೆ. ಬೇರೆಲ್ಲ ಅನುತ್ಪಾದಕ, ಜನಪ್ರಿಯ ಯೋಜನೆಗಳಿಗೆ ದುಡ್ಡು ಸುರಿಯುವ ಸರಕಾರ ಬಹಳ ಮುಖ್ಯವಾಗಿ ಬೇಕಾಗಿರುವ ಆರೋಗ್ಯ ವಿಚಾರಕ್ಕೆ ಆದ್ಯತೆ, ಬಜೆಟ್‌ನಲ್ಲಿ ಅವಶ್ಯಕ ನಿಧಿ ಒದಗಿಸುವಲ್ಲಿ ಹಿಂದೆ ಬೀಳುವುದೇಕೆ ಎಂಬುದು
ಆರೋಗ್ಯಾಕಾಂಕ್ಷಿಗಳ ಕಾಳಜಿಯ ಪ್ರಶ್ನೆ .
ಕ್ರಿಯಾಶೀಲ
ಏಕೈಕ ಲಿಪಿಕ-ಗುಮಾಸ್ತೆ ಹುದ್ದೆ 8 ವರ್ಷಗಳಿಂದ ಖಾಲಿ ಇದೆ. ಒಬ್ಬರು ಗುತ್ತಿಗೆಯಲ್ಲಿದ್ದಾರೆ. ಕಿರಿಯ ಆರೋಗ್ಯ ಸಹಾಯಕಿಯರಲ್ಲಿ 10 ಹುದ್ದೆಗಳಲ್ಲಿ 3 ಹುದ್ದೆಗಳು ತೆರವಾಗಿ 8 ವರ್ಷಗಳಾಗಿವೆ. ಕಿ.ಆ. ಸಹಾಯಕರ (ಪುರುಷ) ಹುದ್ದೆ ಖಾಲಿ ಬಿದ್ದು 5 ವರ್ಷಗಳಾಗಿವೆ. ವಾಹನ ಚಾಲಕರ 2 ಹುದ್ದೆಗಳು ಖಾಲಿ ಇದ್ದು, ನೇಶನಲ್‌ಹೆಲ್ತ್ ಮಿಶನ್‌ನಿಂದ 3 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎಕ್ಸ್ ರೇ ಟೆಕ್ನೀಶಿಯನ್ ಸಹಾಯಕ ಹುದ್ದೆ 2015ರಿಂದ ತೆರವಾಗಿದೆ. ಲ್ಯಾಬ್ ಟೆಕ್ನೀಶಿಯನ್ ಸಹಾಯಕ ಹುದ್ದೆಯೊಂದು ಖಾಲಿ ಬಿದ್ದು 8 ವರ್ಷ ಆಗಿದೆ. ಲ್ಯಾಬ್ ಟೆಕ್ನೀಶಿಯನ್ ಹುದ್ದೆ ಒಂದು ಮಂಜೂರು, ಒಂದು ಶಾಶ್ವತ ಹುದ್ದೆ ಇದೆ. ಹೊರಗುತ್ತಿಗೆಯಲ್ಲಿ 4 ಮಂದಿ ಇದ್ದಾರೆ. ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಹುದ್ದೆಯೊಂದು ತೆರವಾಗಿಲ್ಲದೆ, ಬಹಳ ಸಕ್ರಿಯವಾಗಿ ಕ್ರಿಯಾಶೀಲವಾಗಿರುವುದು ಗಮನಾರ್ಹ.
ದಿನಕ್ಕೆ 300 ಹೊರರೋಗಿಗಳು
ಮೂಡುಬಿದಿರೆ ಸ. ಆ. ಕೇಂದ್ರಕ್ಕೆ ದಿನವಹಿ ಸುಮಾರು 300 ಹೊರರೋಗಿಗಳು ಆಗಮಿಸುತ್ತಿದ್ದಾರೆ. ಒಳರೋಗಿಗಳಾಗಿ ಮಾಸಿಕ ಸುಮಾರು 60-70ರಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡನೇ ಶುಕ್ರವಾರ ಮಾನಸಿಕ ಆರೋಗ್ಯ ತಜ್ಞರು, ಮೂರನೇ ಮಂಗಳವಾರ ಶ್ರವಣ ತಜ್ಞರು ಆಗಮಿಸುತ್ತಾರೆ. ಕಟ್ಟಡಗಳು ಸಾಕಷ್ಟಿವೆ. ಪಶ್ಚಿಮ ಭಾಗದಲ್ಲಿ ಇನ್ನೂ ಒಂದು 6 ಹಾಸಿಗೆಗಳ ವಾರ್ಡ್ ಜಿಲ್ಲಾ ಆರೋಗ್ಯಾಧಿಕಾರಿಯವರ ನಿಧಿಯಿಂದ ನಿರ್ಮಾಣವಾಗುತ್ತಿವೆ.
*ಧನಂಜಯ ಮೂಡುಬಿದಿರೆ
ಟಾಪ್ ನ್ಯೂಸ್
