ಪಡೀಲ್‌ನಿಂದ ಬಿ.ಸಿ.ರೋಡ್‌ ಒಮ್ಮೆ ಹೋಗಿ ಬಂದರೆ ಸುಧಾರಿಸಿಕೊಳ್ಳಲು ವರ್ಷ ಬೇಕು!

Team Udayavani, Sep 11, 2019, 5:49 AM IST

ಪಡೀಲ್‌ನಿಂದ ಬಿ.ಸಿ. ರೋಡ್‌ನ‌ಲ್ಲಿ ಸಾಗುವಾಗ ರಾಷ್ಟ್ರೀಯ ಹೆದ್ದಾರಿ 75 ರ ಅವ್ಯವಸ್ಥೆ ಕಣ್ಣಿಗೆ ಕಾಣುತ್ತದೆ. ವಾಹನ ಸವಾರರು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅನುಸರಿಸಬೇಕಾದ ಬಹುಪಾಲು ನಿಯಮಗಳು ಇಲ್ಲಿ ಮಂಗಮಾಯ. ಕನಿಷ್ಠ ಸೂಚನಾ ಫ‌ಲಕಗಳಿಗೂ ಬರ ಬಂದಿದೆ. ಸುರಕ್ಷತೆಗೆ ಬಳಸ ಬೇಕಾದ ಬ್ಯಾರಿಕೇಡ್‌ಗಳು ಅಪಾಯವನ್ನು ಆಹ್ವಾನಿಸುತ್ತಿವೆ.

ಮಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿ ನಿಂದ ಕರಾವಳಿಯನ್ನು ಸಂಪರ್ಕಿ ಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯೇ 75. ಹಾಸನದಿಂದ ಶಿರಾಡಿ ಘಾಟ್‌ ಮೂಲಕ ಮಂಗಳೂರಿಗೆ ಹಾದು ಬರುವ ಈ ಹೆದ್ದಾರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ಹೆದ್ದಾರಿ ನಿಯಮಗಳನ್ನು ಗಾಳಿಗೆ ತೂರಿರುವುದು ಹಾಗೂ ಅರ್ಧಕ್ಕೆ ಸ್ಥಗಿತಗೊಂಡಿರುವ ರಸ್ತೆ ಕಾಮಗಾರಿಗಳೂ ಕಾರಣವಾಗುತ್ತಿವೆ.

ಉದಯವಾಣಿ ತಂಡವು ಎನ್‌ಎಚ್‌-75ರಲ್ಲಿ ನಂತೂರು ವೃತ್ತದಿಂದ ಬಿಸಿ ರೋಡ್‌ ಮಾರ್ಗವಾಗಿ ಕೊಕ್ಕಡ ಕ್ರಾಸ್‌ವರೆಗೆ ಸಂಚರಿಸಿದಾಗ ಕಂಡು ಬಂದ ವಾಸ್ತವಾಂಶ ಹಲವು. ಈ ಹೆದ್ದಾರಿಯು ಹೆಸರಿಗಷ್ಟೇ ರಾಷ್ಟ್ರೀಯ ಹೆದ್ದಾರಿ. ನಂತೂರಿನಿಂದ ಬಿಸಿ ರೋಡ್‌ವರೆಗಿನ ಸುಮಾರು 20 ಕಿಮೀ. ಅಷ್ಟೇ ಚತುಷಥವಾಗಿ 10 ವರ್ಷಗಳ ಹಿಂದೆ ಬದಲಾಗಿದೆ. ಬಳಿಕ ಉಪ್ಪಿನಂಗಡಿ ಮಾರ್ಗವಾಗಿ ಶಿರಾಡಿ ಘಾಟ್‌ನ ರಸ್ತೆ ಇನ್ನೂ ದ್ವಿಪಥವಾಗಿದೆ.

ಅಡ್ಡಹೊಳೆ-ಬಿಸಿರೋಡ್‌ವರೆಗಿನ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಯೋಜನೆಗೆ ಅನುಮತಿ ಲಭಿಸಿ 2 ವರ್ಷಗಳಾಗಿವೆ. ಆದರೆ, ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ನಾನಾ ಕಾರಣಗಳಿಂದಾಗಿ ಕಾಮಗಾರಿ ಸ್ಥಗಿತಗೊಂಡು ಒಂದು ವರ್ಷವಾಗಿದೆ. ಈ ಅರೆಬರೆ ಕಾಮ ಗಾರಿಯಿಂದಾಗಿ ಅಲ್ಲಲ್ಲಿ ಅಪಘಾತ ವಲಯಗಳು ರೂಪುಗೊಂಡಿವೆ. ಆದರೂ ಹೆದ್ದಾರಿ ಇಲಾಖೆಯವರು ತಲೆ ಕೆಡಿಸಿಕೊಂಡಿಲ್ಲ.

ದ.ಕ. ಜಿಲ್ಲಾ ಪೊಲೀಸರ ಅಂಕಿ- ಅಂಶವೊಂದರ ಪ್ರಕಾರ, ಜಿಲ್ಲೆಯಲ್ಲಿ ಈ ವರ್ಷದಲ್ಲಿ ಅಂದರೆ, ಜನವರಿಯಿಂದ ಇಲ್ಲಿವರೆಗೆ ಒಟ್ಟು 645 ಅಪಘಾತ ಗಳಾಗಿದ್ದು, ಆ ಪೈಕಿ 84 ಮಾರಣಾಂತಿಕ ಹಾಗೂ ಉಳಿದ 561 ಮಾರಣಾಂತಿಕವಲ್ಲದ ಅಪಘಾತಗಳಾಗಿವೆ.

ಪಡೀಲ್‌ ಅಪಾಯಕಾರಿ ಜಂಕ್ಷನ್‌
ಈ ಹೆದ್ದಾರಿಯಲ್ಲಿ ನಂತೂರು ವೃತ್ತವು ಹೇಗೆ ವಾಹನ ಸವಾರರಿಗೆ ಅಪಘಾತ ವಲಯವಾಗಿ ಬದಲಾಗಿದೆಯೋ ಅದೇ ರೀತಿ ಪಡೀಲ್‌ ಜಂಕ್ಷನ್‌ ಕೂಡ. ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಇಲ್ಲಿ ಅಪಾಯ ಇದ್ದದ್ದೇ. ಈ ಜಂಕ್ಷನ್‌ನಲ್ಲಿ ನಾಲ್ಕು ದಿಕ್ಕಿನಿಂದ ಬರುವ ವಾಹನಗಳು ನಿರ್ದಿಷ್ಟ ದಿಕ್ಕಿನಲ್ಲಿ ಹಾದು ಹೋಗುವುದಕ್ಕೆ ಯಾವುದೇ ನಿಯಮಗಳಿಲ್ಲ.

ಇಲ್ಲಿ ಬಿಸಿ ರೋಡ್‌ ಕಡೆಯಿಂದ ಬರುವ ವಾಹನಗಳಿಗೆ, ಅತ್ತ ಮಂಗಳೂರು ನಗರದ ಕಡೆಯಿಂದ ಬರುವ ಅಥವಾ ನಂತೂರು ಕಡೆಯಿಂದ ಬರುವ ವಾಹನಗಳಿಗೆ ನೇರವಾಗಿ ತಿರುವು ಪಡೆಯಲು ಸಾಧ್ಯವಿಲ್ಲ. ಏಕೆಂದರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ರೀತಿಯ ಜಂಕ್ಷನ್‌ ಇರುವಾಗ ಅಲ್ಲಿ ಮೇಲುರಸ್ತೆ ಅಥವಾ ಫ್ಲೆ$çಓವರ್‌ ನಿರ್ಮಿಸಬೇಕು. ಜತೆಗೆ, ಇಂಥ ಜಂಕ್ಷನ್‌ನಲ್ಲಿ ಒಂದೆಡೆಯಿಂದ ಮತ್ತೂಂದೆಡೆಗೆ ರಸ್ತೆ ದಾಟಲು ಪಾದಚಾ ರಿಗಳಿಗೂ ಯಾವುದೇ ಸುರಕ್ಷಾ ಕ್ರಮ ಅಳವಡಿಸಿಲ್ಲ. ಇದು ಅಪಘಾತಗಳ ಸಾಧ್ಯತೆಯನ್ನು ಹೆಚ್ಚಿಸಿದೆ.

ಅಲ್ಲಿಂದ ಮುಂದೆ ಸಾಗುತ್ತಿದ್ದಂತೆ ಎದುರಾಗುವುದು ರೈಲ್ವೆ ಅಂಡರ್‌ಪಾಸ್‌. ಇದು ಹೊಸದಾಗಿ ನಿರ್ಮಾಣ ವಾಗಿ ದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ ಹೆದ್ದಾರಿಯಲ್ಲಿ ಓವರ್‌ ಬ್ರಿಡ್ಜ್ ಅಥವಾ ಅಂಡರ್‌ಪಾಸ್‌ಗಳನ್ನು ನಿರ್ಮಿಸುವಾಗ, ಕೆಲವು ಸೂಚನಾ ಫಲಕಗಳನ್ನು ಅಳವಡಿ ಸಬೇಕು. ಈ ಅಂಡರ್‌ಪಾಸ್‌ ಸಮತಟ್ಟು ಇಲ್ಲದಿರುವಾಗ ಆ ಬಗ್ಗೆ ವಾಹನ ಸವಾ ರರಿಗೆ ಮುನ್ನೆಚ್ಚೆರಿಕೆ ನೀಡುವ ಸೂಚನಾ ಫಲಕಗಳಿ ರಬೇಕು. ಇನ್ನೊಂದು ಕಡೆಯ ಅಂಡರ್‌ಪಾಸ್‌ ಕಾಮಗಾರಿ ಪೂರ್ಣಗೊಳ್ಳದ ಕಾರಣ ದ್ವಿಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಬಿಸಿ ರೋಡ್‌ ಕಡೆಯಿಂದ ಈ ಹೆದ್ದಾರಿ ಯಲ್ಲಿ ಹಾದು ಹೋಗುವವರಿಗೆ ಅಂಡರ್‌ ಪಾಸ್‌ ಬಳಿ ಯಾವ ಕಡೆಗೆ ಹೋಗ ಬೇಕು ಎನ್ನುವುದೇ ತಿಳಿಯದು. ಸೂಚನಾ ಫ‌ಲಕ ಇಲ್ಲದಿರುವುದು ಗೊಂದಲಕ್ಕೆ ಕಾರಣ.

ಸೂಚನಾ ಫಲಕಗಳು ನಾಪತ್ತೆ
ಇನ್ನು ಈ ಹೆದ್ದಾರಿಯಲ್ಲಿ ವಾಹನ ಸವಾರರು ಹಾಗೂ ಪಾದಚಾರಿಗಳ ಅನುಕೂಲಕ್ಕಾಗಿ ಸೂಚನಾ ಫ‌ಲಕಗಳನ್ನು ಅಳವಡಿಸಿಲ್ಲ. ಹೆದ್ದಾರಿ ಅಂದಮೇಲೆ ಪಥಗಳನ್ನು ಬಿಳಿ ಬಣ್ಣದಿಂದ ಸವಾರರಿಗೆ ಕಾಣಿಸುವಂತೆ ಗುರುತು ಮಾಡಿರಬೇಕು. ರಾತ್ರಿ ಹೊತ್ತು ಸವಾರರಿಗೆ ಕಾಣಿಸುವಂತೆ ರಿಫ್ಲೆಕ್ಟರ್‌ಗಳನ್ನು ಹಾಕಿರಬೇಕು. ಆದರೆ, ಬಹಳಷ್ಟು ಕಡೆ ಇದಾವುದೂ ಇಲ್ಲ. ಪಥ ಸೂಚಿಸಲು ಹಾಕಿರುವ ಬಿಳಿ ಗೆರೆಯೂ ಅಲ್ಲಲ್ಲಿ ಮಾಸಿದೆ. ಈ ಮಧ್ಯೆ ಅನೇಕ ಕಡೆಗಳಲ್ಲಿ ವಿದ್ಯುತ್‌ ಕಂಬವನ್ನು ಕೂಡ ಡಿವೈಡರ್‌ಗಳ ಮೇಲೆಯೇ ಹಾಕಿರುವುದು ಆತಂಕಕ್ಕೆ ಕಾರಣವಾಗಿದೆ.

22 ಕಡೆ ಡೀವಿಯೇಷನ್‌
ಪಡೀಲ್‌ನಿಂದ ಬಿಸಿ ರೋಡ್‌ವರೆಗಿನ ಸುಮಾರು 16 ಕಿಮೀ. ರಸ್ತೆಯಲ್ಲಿ ಒಟ್ಟು 22 ಕಡೆ ಒಂದು ಬದಿಯಿಂದ ಮತ್ತೂಂದು ಬದಿಗೆ ಸಾಗಬೇಕಾಗುವ (ಡೀವಿಯೇಷನ್‌) ಸಂದರ್ಭಗಳಿವೆ. ಸಾಮಾನ್ಯವಾಗಿ ಹೆದ್ದಾರಿಗಳಲ್ಲಿ ವಾಹನಗಳು ವೇಗವಾಗಿ ಸಂಚರಿಸುವ ಕಾರಣ ನಿಗದಿತ ದೂರದ ನಂತರವೇ ಈ ರೀತಿ ತಿರುವುಗಳಿಗೆ ಅವಕಾಶಗಳಿರುತ್ತವೆ. ಆದರೆ, ಈ ಹೆದ್ದಾರಿಯಲ್ಲಿ ಸರ್ವೀಸ್‌ ರಸ್ತೆ ನಿರ್ಮಿಸದ ಕಾರಣ, ಮನಸೋ-ಇಚ್ಛೆ ಬೇಕಾದ ಕಡೆ ತಿರುವು ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇಂಥ ಅವೈಜ್ಞಾನಿಕ ಡೀವಿಯೇಷನ್‌ಗಳಲ್ಲಿ ಏಕಾಏಕಿ ತಿರುವು ಪಡೆಯುವಾಗ ಹಿಂಬದಿಯಿಂದ ಬರುವ ವಾಹನಗಳು ಢಿಕ್ಕಿ ಹೊಡೆಯುವ ಸಾಧ್ಯತೆಯೇ ಹೆಚ್ಚು.

14 ಕಡೆ ಬ್ಯಾರಿಕೇಡ್‌
ಈ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಅಪಾಯವನ್ನು ಆಹ್ವಾನಿಸುತ್ತಿರುವುದೇ ಬ್ಯಾರಿಕೇಡ್‌ಗಳು. ಪಡೀಲ್‌ನಿಂದ ಬಿಸಿ ರೋಡ್‌ವರೆಗೆ ಸುಮಾರು 14 ಕಡೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಕೆಲವೆಡೆ ಬ್ಯಾರಿಕೇಡ್‌ಗಳನ್ನು ಇಟ್ಟು ಅದು ಮಗುಚಿ ಬೀಳದಂತೆ ಹಳೆಯ ಟೈಯರ್‌-ಕಲ್ಲು ಇಡಲಾಗಿದೆ. ಇಂಡಿಯನ್‌ ರೋಡ್‌ ಕಾಂಗ್ರೆಸ್‌ ಹಾಗೂ ಹೆದ್ದಾರಿ ನಿಯಮಗಳ ಪ್ರಕಾರ, ಈ ರೀತಿ ಹೆದ್ದಾರಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಬೇಕಾದರೆ, ಅದಕ್ಕೆ ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಆದರೆ, ರಾತ್ರಿವೇಳೆ ಬರುವ ವಾಹನ ಸವಾರರಿಗೆ ಈ ಬ್ಯಾರಿಕೇಡ್‌ಗಳು ಕಾಣುವುದಿಲ್ಲ. ಹೀಗಾಗಿ, ರಸ್ತೆ ದಾಟುವವರ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕರ ಸುರಕ್ಷತೆಗೆ ಹಾಕುವ ಬ್ಯಾರಿಕೇಡ್‌ಗಳೇ ವಾಹನ ಸವಾರರಿಗೆ ಮುಳುವಾಗುತ್ತಿವೆ.

ಅಪಘಾತಕ್ಕೆ ಕಾರಣ
·  ಹೆದ್ದಾರಿ ನಿಯಮ ಉಲ್ಲಂಘನೆ
·  ಅರ್ಧಕ್ಕೆ ಸ್ಥಗಿತಗೊಂಡ ರಸ್ತೆ ಕಾಮಗಾರಿ
·  ಅವೈಜ್ಞಾನಿಕ ಡೀವಿಯೇಷನ್‌
·  ಮುನ್ನೆಚ್ಚರಿಕೆ ಇಲ್ಲದ ಸೂಚನ ಫ‌ಲಕ
·  ನಿರ್ದಿಷ್ಟ ನಿಯಮಗಳಿಲ್ಲದ ಪಡೀಲ್‌ ಜಂಕ್ಷನ್‌

ಉದಯವಾಣಿ ವಾಸ್ತವ ವರದಿ
 ಮಂಗಳೂರು ಟೀಮ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ