
ಶಿರಾಡಿಗೆ ಸುರಂಗ ಮಾರ್ಗ: ಅಪಾಯಕ್ಕೆ ಆಹ್ವಾನ
ಸುರಂಗದ ಬದಲು ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ಸೂಕ್ತ
Team Udayavani, Jan 25, 2023, 7:00 AM IST

ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಶಿರಾಡಿ ಘಾಟಿಯಲ್ಲಿ 23 ಕಿ.ಮೀ. ಸುರಂಗ ಮಾರ್ಗ ಕಾಮಗಾರಿಯ ಗುಮ್ಮ ಮತ್ತೆ ಮುನ್ನೆಲೆಗೆ ಬಂದಿದೆ.
ಡಿಸೆಂಬರ್‌ನಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರೇ “ಈ ಯೋಜನೆ ಕಾರ್ಯ ಸಾಧುವಲ್ಲ’ ಎಂದು ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು. ಆದರೆ ಇತ್ತೀಚೆಗೆ ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಬರೆದ ಪತ್ರದಲ್ಲಿ “ವಿಸ್ತೃತ ಯೋಜನಾ ವರದಿಯನ್ನು ಪೂರ್ಣಗೊಳಿಸಲಾಗುತ್ತಿದೆ. ಮೇಯಲ್ಲಿ ಬಿಡ್ ಆಹ್ವಾನಿಸಲಾಗುವುದು’ ಎಂದು ತಿಳಿಸಿದ್ದಾರೆ. ಈ ಯೋಜನೆ ಸುಮಾರು 15 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕಾರ್ಯಗತಗೊಳಿಸುವ ಉದ್ದೇಶ ರಾ. ಹೆ.ಸಚಿವಾಲಯದ್ದಾಗಿದೆ.
ಇದರ ಬೆನ್ನಿಗೇ ಪರಿಸರಾಸಕ್ತರು “ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದಲ್ಲಿ ಸುರಂಗ ಕೊರೆಯುವಂಥ ಯೋಜನೆಗಳು ನೂರಾರು ಸಂಕಷ್ಟಗಳನ್ನು ತಂದೊಡ್ಡಲಿವೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಪರಿಸರಕ್ಕೆ ತೀರಾ ಹಾನಿ ಎಸಗುವ ಹಾಗೂ ಪಶ್ಚಿಮ ಘಟ್ಟದ ಆರೋಗ್ಯವನ್ನು ಹಾಳುಗೆಡಹುವ ಈ ಯೋಜನೆಯನ್ನು ಕೈ ಬಿಟ್ಟು ಬೆಂಗಳೂರು ತಲುಪುವ ಪರ್ಯಾಯ ಮಾರ್ಗಗಳನ್ನು ಅಭಿವೃದ್ಧಿಗೊಳಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ವಿಭಾಗದ ಮಾರನಹಳ್ಳಿ – ಅಡ್ಡಹೊಳೆ ನಡುವೆ ಚತುಷ್ಪಥ ನಿರ್ಮಾಣ ಪ್ರಗತಿಯಲ್ಲಿದ್ದು, 1,976 ಕೋಟಿ ರೂ. ಮೊತ್ತದ ಬಿಡ್ ಆಹ್ವಾನಿಸಲಾಗಿದೆ. ಜತೆಗೆ 23 ಕಿ.ಮೀ. ಉದ್ದದ ಸುರಂಗ ಮಾರ್ಗ ಕಾಮಗಾರಿಯನ್ನು 15 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.
ಈ ಮೊದಲು ಡಿಸೆಂಬರ್‌ನಲ್ಲಿ ಶಿರಾಡಿ ಘಾಟಿ ಸುರಂಗ ಮಾರ್ಗ ಕಾರ್ಯಸಾಧುವಲ್ಲ ಎಂದು ಹೇಳಿದ್ದ ಸಚಿವರೇ ಈಗ ಯೋಜನೆಗೆ ಹೇಗೆ ಅನುಮತಿ ನೀಡುತ್ತಿದ್ದಾರೆ? ಯಾವುದು ಸರಿ? ಯಾವುದನ್ನು ನಂಬಬೇಕು ಎಂಬುದು ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯರ ಪ್ರಶ್ನೆ.
ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ಈಗಾಗಲೇ ವಿವಿಧ ಯೋಜನೆಗಳಿಂದ ಹಾನಿಗೀಡಾಗಿದೆ. ಕಾಡು ಪ್ರಾಣಿಗಳ ಹಾವಳಿ, ಭೂಕಂಪ, ಭೂ ಕುಸಿತಗಳ ಪ್ರಮಾಣ ಹೆಚ್ಚಾಗಿದೆ. ಇಂಥ ಸ್ಥಿತಿಯಲ್ಲಿ ಸುರಂಗ ಮಾರ್ಗ ಬಂದರೆ ಸಮಸ್ಯೆ ಹೆಚ್ಚಲಿದೆ. ಅದರ ಬದಲಾಗಿ ಘಟ್ಟದ ಮೇಲಿನ ಪ್ರದೇಶಗಳನ್ನು ಸಂಪರ್ಕಿಸುವ ಎಲ್ಲ ಸಂಪರ್ಕ ರಸ್ತೆಗಳನ್ನು ಬಲಗೊಳಿಸಿದರೆ ಸುರಂಗ ಮಾರ್ಗದ ಅಗತ್ಯ ಉದ್ಭವಿಸದು ಎಂದು ಸಚಿವರಿಗೆ ಪತ್ರ ಬರೆದು ಮನವರಿಕೆ ಮಾಡಲು ಪರಿಸರಾಸಕ್ತರು ಮುಂದಾಗಿದ್ದಾರೆ.
ಅಪಾಯದ ಬಾಗಿಲು ತೆರೆದಂತೆ
ಈಗಾಗಲೇ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ರೈಲು ಹಳಿ, ಎತ್ತಿನ ಹೊಳೆ ಯೋಜನೆ, ಜಲ ವಿದ್ಯುತ್ ಯೋಜನೆ ಎಂದು ಪಶ್ಚಿಮ ಘಟ್ಟವನ್ನು ಹಾಳು
ಗೆಡವಲಾಗಿದೆ. ಶಿರಾಡಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಭೂಕುಸಿತ ಹೆಚ್ಚುತ್ತಿದೆ. ಅದೇ ಕಂಪನ ಚಾರ್ಮಾಡಿ, ಬಿಸಿಲೆ, ಕಡ್ತಕಲ್, ಎಳನೀರು ಘಾಟಿಗೂ ಹಬ್ಬಿ ಪಶ್ಚಿಮ ಘಟ್ಟದ ಉದ್ದಗಲಕ್ಕೂ ಭೂ ಕುಸಿತ, ಜಲ ಪ್ರವಾಹಗಳು ಉಂಟಾಗುತ್ತಿವೆ. ಇಂಥ ಸಂದರ್ಭದಲ್ಲಿ ಸುರಂಗ ಮಾರ್ಗ ಸೂಕ್ತವಲ್ಲ ಎನ್ನುತ್ತಾರೆ ಪರಿಸರಾಸಕ್ತ ದಿನೇಶ ಹೊಳ್ಳ.
ಸದ್ಯದ ಪರಿಸ್ಥಿತಿಯಲ್ಲಿ ಸುರಂಗ ಮಾರ್ಗಕ್ಕಿಂತ ಪರ್ಯಾಯ ರಸ್ತೆಗಳ ಅಭಿವೃದ್ಧಿಯೇ ಅಗತ್ಯ. ಒಂದುವೇಳೆ ಸುರಂಗ ಮಾರ್ಗ ನಿರ್ಮಾಣವಾದರೂ ಪ್ರಕೃತಿ ವಿಕೋಪ ಸಂಭವಿಸಿ ಏನಾದರೂ ಅನಾಹುತವಾದರೆ ಘಟ್ಟದ ಮೇಲಿನ ಪ್ರದೇಶಗಳೊಂದಿಗೆ ಕರಾವಳಿ ಸಂಪರ್ಕವೇ ಕಡಿತಗೊಂಡೀತು. ಹಾಗಾಗಿ ಅಭಿವೃದ್ಧಿ ಅಗತ್ಯ. ಆದರೆ ಪರಿಸ್ಥಿತಿ ಅವಲೋಕಿಸಿ ನಿರ್ಧರಿಸುವುದು ಸೂಕ್ತ ಎನ್ನುತ್ತಾರೆ ಮಲೆನಾಡು ಜನಹಿತ ಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ.
ಪರ್ಯಾಯ ಉಪಾಯವೇ ಸೂಕ್ತ ಯಾಕೆ?
ಸಂಪಾಜೆ ಮಡಿಕೇರಿ, ಚಾರ್ಮಾಡಿ, ಶಿಶಿಲ-ಬೈರಾಪುರ ರಸ್ತೆ, ಬಿಸಿಲೆ ಘಾಟಿ ಮೊದಲಾದ ರಸ್ತೆಗಳು ಬೆಂಗಳೂರು ಹಾಗೂ ಕರಾವಳಿ ಸಂಪರ್ಕಕ್ಕೆ ಇರುವ ಪರ್ಯಾಯ ಮಾರ್ಗಗಳು. ಅವುಗಳನ್ನು ಅಭಿವೃದ್ಧಿಪಡಿಸಿದರೆ ಹೆಚ್ಚು ಅನುಕೂಲವಾಗಲಿದೆ.
1 ಪಶ್ಚಿಮ ಘಟ್ಟದ ಮೇಲಿನ ಒತ್ತಡವನ್ನು (ವಾಹನ ದಟ್ಟಣೆ ಹಾಗೂ ಸುರಂಗ ಮಾರ್ಗದಿಂದಾಗುವ ಅನಾಹುತ) ಕೊಂಚ ಕಡಿಮೆ ಮಾಡಬಹುದು.
2 ಈ ರಸ್ತೆಗಳ ಅಭಿವೃದ್ಧಿಗೆ ಕೆಲವು 400-500 ಕೋಟಿ ರೂ. ಸಾಕಾಗಬಹುದು. ಅನಾವಶ್ಯಕವಾಗಿ 15 ಸಾವಿರ ಕೋಟಿ ರೂ. ಪೋಲಾಗುವುದನ್ನು ತಡೆಯಬಹುದು.
3 ಪರ್ಯಾಯ ಮಾರ್ಗಗಳನ್ನು ಅಭಿವೃದ್ಧಿಗೊಳಿಸು ವುದರಿಂದ ವಾಹನ ದಟ್ಟಣೆಯೂ ಹಂಚಿ ಹೋಗಿ ರಸ್ತೆಯ ಬಾಳಿಕೆಯೂ ಹೆಚ್ಚುತ್ತದೆ. ಅವಘಡ ಸಂಭವಿಸಿದಾಗ ಆಗುವ ಟ್ರಾಫಿಕ್ ಜಾಮ್‌ನಂಥ ಸಮಸ್ಯೆಗೂ ಪರಿಹಾರ ಸಿಗಲಿದೆ.
4 ಪರ್ಯಾಯ ಮಾರ್ಗಗಳಿಗೆ ವಾಹನ ದಟ್ಟಣೆ ಹಂಚಿ ಹೋಗುವುದರಿಂದ ಆ ರಸ್ತೆಗಳ ಸುತ್ತಮುತ್ತಲಿನ ಪಟ್ಟಣಗಳ ಸ್ಥಳೀಯ ಆರ್ಥಿಕತೆಗೂ ಪುನಃಶ್ಚೇತನ ನೀಡಿದಂತಾಗಲಿದೆ.
– ಭರತ್ ಶೆಟ್ಟಿಗಾರ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Missing: ಕಾಂಗ್ರೆಸ್ ಟ್ವೀಟ್ ಗೆ ಕಟುವಾಗಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ

ಅಹ್ಮದ್ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್ ಶಿಂಧೆ

Hunsur: ಗೂಡ್ಸ್ ವಾಹನ ಢಿಕ್ಕಿಯಾಗಿ ಬೈಕ್ ಸವಾರ ಮೃತ್ಯು

ಲೋಕಾಯುಕ್ತ ದಾಳಿ: ಇಬ್ಬರು ಸರಕಾರಿ ಅಧಿಕಾರಿಗಳ ಮನೆಯಲ್ಲಿತ್ತು ಕೋಟಿ ಕೋಟಿ ಮೌಲ್ಯದ ಸೊತ್ತುಗಳು

Gyanvapi Case: ಮಸೀದಿ ಸಮಿತಿಯ ಸವಾಲು ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್