ಸಾವರ್ಕರ್‌ಗೆ ಭಾರತರತ್ನ ಪ್ರಧಾನಿಯ ಟೊಳ್ಳು ದೇಶಭಕ್ತಿ

ಮಂಗಳೂರಿನ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ಟೀಕೆ

Team Udayavani, Oct 19, 2019, 6:00 AM IST

ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ಮಂಗಳೂರು: ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದು, ಮಹಾತ್ಮಾ ಗಾಂಧಿ ಹತ್ಯೆಗೆ ಸಂಚು ನಡೆಸಿದ ಆರೋಪ ಹೊತ್ತಿರುವ ವೀರ ಸಾವರ್ಕರ್‌ಗೆ ಭಾರತ ರತ್ನ ನೀಡಲು ಮೋದಿ ನೇತೃತ್ವದ ಕೇಂದ್ರ ಸರಕಾರ ಮುಂದಾಗಿದೆ. ಇದು ಪ್ರಧಾನಿಯ ಟೊಳ್ಳು ದೇಶಭಕ್ತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಅವರು ಶುಕ್ರವಾರ ನಗರದ ಬೆಂದೂರು ಚರ್ಚ್‌ ಹಾಲ್‌ನಲ್ಲಿ ನಡೆದ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಗಾಂಧಿ ಹತ್ಯೆಗೆ ಸಂಚು ರೂಪಿಸಿದವರಲ್ಲಿ ವೀರ ಸಾವರ್ಕರ್‌ ಓರ್ವ ಆರೋಪಿಯಾಗಿದ್ದು, ಬಳಿಕ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡರು. ಅಂಥವರಿಗೆ ಭಾರತ ರತ್ನ ನೀಡುವುದು ಸರಿಯಲ್ಲ ಎಂದರು. ಮುಂದಿನ ಪಾಲಿಕೆ ಚುನಾವಣೆ ಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸ ಬೇಕು ಎಂದು ಕರೆ ನೀಡಿದರು.

ಕೋಮುವಾದದ ಪ್ರಯೋಗಾಲಯ
ಬಿಜೆಪಿಯ ಅಭಿವೃದ್ಧಿ ಸಾಧನೆ ಶೂನ್ಯ. ಆರೆಸ್ಸೆಸ್‌ ಮತ್ತು ಬಿಜೆಪಿಗೆ ಮಂಗಳೂರು ಕೋಮುವಾದಕ್ಕೆ ಪ್ರಯೋಗಾಲಯ ಇದ್ದ ಹಾಗೆ. ಬಿಜೆಪಿಯವರು ಜನರ ಮನಸ್ಸನ್ನು ಬೇರೆಡೆ ಸೆಳೆಯುವುದಕ್ಕೆ ಪ್ರತಿಯಾಗಿ ಗಂಭೀರವಾಗಿ ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನು ಜನರೆದುರು ಇಡುವ ಕೆಲಸವನ್ನು ಕಾಂಗ್ರೆಸ್‌ ಕಾರ್ಯಕರ್ತರು ಮಾಡಬೇಕು ಎಂದರು.

ಬಡವರ ಅಕ್ಕಿ ನಿಲ್ಲಿಸುವ ಯತ್ನ
ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಕರ್ನಾಟಕದಲ್ಲಿ ನೀಡುವಂತೆ ಬಡವರಿಗೆ ಉಚಿತವಾಗಿ ಅಕ್ಕಿ ನೀಡುವುದಿಲ್ಲ. ಯಡಿಯೂರಪ್ಪ ನೇತೃತ್ವದ ಸರಕಾರ ಅದನ್ನೂ ನಿಲ್ಲಿಸಲು ಹವಣಿಸುತ್ತಿದೆ ಎಂದರು.

2020ರಲ್ಲಿ ಚುನಾವಣೆ
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವು ಹೆಚ್ಚೆಂದರೆ ಈ ವರ್ಷದ ಡಿಸೆಂಬರ್‌ ಅಥವಾ ಜನವರಿ- ಫೆಬ್ರವರಿ ತನಕ ಅಧಿಕಾರದಲ್ಲಿ ಇರಬಹುದು; 2020ರಲ್ಲಿ ವಿಧಾನ ಸಭಾ ಚುನಾವಣೆ ಬರುವುದು ಖಚಿತ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.

ಡಿಸಿಸಿ ಅಧ್ಯಕ್ಷ ಹರೀಶ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಯು.ಟಿ. ಖಾದರ್‌, ಐವನ್‌ ಡಿ’ಸೋಜಾ, ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್‌ ಸೊರಕೆ, ಅಭಯಚಂದ್ರ ಜೈನ್‌, ಮಾಜಿ ಶಾಸಕ ಮೊದಿನ್‌ ಬಾವಾ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ನಾಯಕರಾದ ಪಿ.ವಿ. ಮೋಹನ್‌, ಕವಿತಾ ಸನಿಲ್‌, ಅಶೋಕ್‌ ಪಟ್ಟಣ್‌, ಪ್ರಕಾಶ್‌ ರಾಥೋಡ್‌, ಯು.ಆರ್‌. ಸಭಾಪತಿ, ಅಶೋಕ್‌ ಕುಮಾರ್‌, ಚಮನ್‌ ಫಝಾìನಾ ಉಪಸ್ಥಿತರಿ ದ್ದರು. ಮಾಜಿ ಶಾಸಕ ಜೆ.ಆರ್‌. ಲೋಬೋ ಸ್ವಾಗತಿಸಿದರು. ರೋಹಿತ್‌ ಉಳ್ಳಾಲ ಕಾರ್ಯಕ್ರಮ ನಿರ್ವಹಿಸಿದರು.

ನಳಿನ್‌ಗೆ ಆರ್ಥಿಕ ಸ್ಥಿತಿಯ ಜ್ಞಾನವಿಲ್ಲ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರನ್ನು ಟೀಕಿಸಿದ ಸಿದ್ದರಾಮಯ್ಯ, ನಳಿನ್‌ಗೆ ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಜ್ಞಾನವಿಲ್ಲ. ರಾಜ್ಯದಲ್ಲಿ ಜಿಲ್ಲೆಗಳೆಷ್ಟು ಎಂಬುದೇ ಗೊತ್ತಿಲ್ಲ. ಯಡಿಯೂರಪ್ಪ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಪ್ರಧಾನಿ ಮೋದಿಗೆ ಒಲ್ಲದ ಕೂಸು ಆಗಿದ್ದರೆ, ನಳಿನ್‌ ಬಿಜೆಪಿಯ ರಾಜ್ಯ ಉಸ್ತುವಾರಿ ಸಂತೋಷ್‌ ಸ್ವಿಚ್‌ ಒತ್ತಿದಾಗ ನೃತ್ಯ ಮಾಡುತ್ತಾ¤ರೆ. ಇದು ರಾಜ್ಯದ ಪರಿಸ್ಥಿತಿ ಎಂದು ವ್ಯಂಗ್ಯವಾಡಿದರು.

ಸರಕಾರ ವರ್ಗಾವಣೆ ದಂಧೆಯಲ್ಲಿ ಮಗ್ನ
ಮಂಗಳೂರು: ರಾಜ್ಯದಲ್ಲಿ ಪ್ರವಾಹ ಬಂದು ಜನರು ಸಂಕಷ್ಟ ಅನುಭವಿಸುತ್ತಿದ್ದರೂ ಸರಕಾರ ಪರಿಹಾರ ಕಾರ್ಯ ನಡೆಸದೆ ವರ್ಗಾವಣೆ ದಂಧೆಯಲ್ಲಿಯೇ ನಿರತವಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬಿಜೆಪಿಗೆ ಆಪರೇಷನ್‌ ಮಾಡುವುದಷ್ಟೇ ತಿಳಿದಿದೆ.

ನಮ್ಮವರನ್ನು ಹಣ ಕೊಟ್ಟು ಖರೀದಿಸುತ್ತಾರೆ. ಅಷ್ಟು ಹಣ ಅವರಿಗೆ ಎಲ್ಲಿಂದ ಬರುತ್ತದೆ ಅನ್ನುವುದು ಜನರಿಗೆ ಗೊತ್ತಾಗಬೇಕು. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯವನ್ನು ಬಳಸಿ ವಿಪಕ್ಷದವರನ್ನು ಹೆದರಿಸುವ ಮೂಲಕ ದೇಶ ಆಳುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಬಿಜೆಪಿ ಇದೆ ಎಂದರು. ಮಹಾರಾಷ್ಟ್ರಕ್ಕೆ ನೀರು ಬಿಡುವ ಯಡಿಯೂರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಇದು ಚುನಾ ವಣೆಗೋಸ್ಕರ ನೀಡಿದ ಹೇಳಿಕೆ. ಎರಡೂ ರಾಜ್ಯಗಳ ಮಧ್ಯೆ ಮಾತುಕತೆ ಆಗದೆ ಏನೂ ಮಾಡಲು ಆಗುವುದಿಲ್ಲ ಎಂದರು.

ಮೋದಿ ನನ್ನ ಕಿಸೆಯಲ್ಲಿದ್ದಾರೆಯೇ?
“ಸಿದ್ದರಾಮಯ್ಯರನ್ನು ವಿರೋಧಿಸಿದ್ರೆ ಇಡಿ, ಐಟಿ ದಾಳಿ’ ಎಂದು ಅನರ್ಹ ಶಾಸಕ ಬಿ.ಸಿ. ಪಾಟೀಲ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, “ಮೋದಿ ಅಮಿತ್‌ ಶಾ ಏನು ನನ್ನ ಕಿಸೆಯಲ್ಲಿದ್ದಾರಾ? ನಾನು ಹೇಳಿದ ಹಾಗೆ ಮೋದಿ ಕೇಳ್ತಾರಾ? ಇವೆಲ್ಲ ಬಾಲಿಶ ಹೇಳಿಕೆಗಳು’ ಎಂದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ