
ಸುಳ್ಯ ನ.ಪಂ.: 20 ವಾರ್ಡ್‌ಗಳಲ್ಲಿ 53 ಸ್ಪರ್ಧಿಗಳು
Team Udayavani, May 21, 2019, 10:09 AM IST

ಸುಳ್ಯ : ನ.ಪಂ. ಚುನಾವಣೆ ನಾಮಪತ್ರ ಹಿಂಪಡೆಯುವ ಅವಧಿ ಸೋಮವಾರ ಮುಗಿದಿದ್ದು, 20 ವಾರ್ಡ್‌ಗಳಲ್ಲಿ 53 ಸ್ಪರ್ಧಿಗಳು ಕಣದಲ್ಲಿ ಉಳಿದಿದ್ದಾರೆ. ಕೆಲವು ಬಂಡಾಯ ಅಭ್ಯರ್ಥಿಗಳು ಕಣದಲ್ಲಿರುವ ಕಾರಣ ಸ್ಪರ್ಧೆ ತೀವ್ರ ಕುತೂಹಲ ಮೂಡಿಸಿದೆ.
20 ವಾರ್ಡ್‌ಗಳ ಪೈಕಿ 12ರಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದೆ. 5 ಕಡೆ ತ್ರಿಕೋನ, 2 ಕಡೆ ಚತುಷ್ಕೋನ, 1 ವಾರ್ಡ್‌ನಲ್ಲಿ ಆರು ಸ್ಪರ್ಧಿಗಳು ಮುಖಾಮುಖೀ ಆಗಿದ್ದಾರೆ. ದುಗಲಡ್ಕ, ಕೊೖಕುಳಿ, ಹಳೆಗೇಟು, ಅಂಬೆಟಡ್ಕ, ಕುರುಂಜಿಬಾಗ್, ಕೇರ್ಪಳ, ಪುರಭವನ, ಭಸ್ಮಡ್ಕ, ಕೆರೆಮೂಲೆ, ಕಾಯರ್ತೋಡಿ, ಜಟ್ಟಿಪಳ್ಳ, ಕಾನತ್ತಿಲ ವಾರ್ಡ್‌ಗಳಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಬೂಡು, ಕಲ್ಲುಮುಟ್ಲು, ಗಾಂಧಿನಗರ, ಮಿಲಿಟ್ರಿ ಗ್ರೌಂಡ್, ಶಾಂತಿನಗರ ವಾರ್ಡ್‌ನಲ್ಲಿ ಬಿಜೆಪಿ, ಕಾಂಗ್ರೆಸ್, ಎಸ್‌ಡಿಪಿಐ ಹಾಗೂ ಪಕ್ಷೇತರರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಜಯನಗರ, ಬೀರಮಂಗಲದಲ್ಲಿ ಬಿಜೆಪಿ, ಎಸ್‌ಡಿಪಿಐ, ಕಾಂಗ್ರೆಸ್, ಪಕ್ಷೇತರರ ನಡುವೆ ಹಣಾಹಣಿ ಏರ್ಪಟ್ಟಿದೆ. ಬೋರುಗುಡ್ಡೆಯಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಎಸ್‌ಡಿಪಿಐ, ಪಕ್ಷೇತರರ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಈ ವಾರ್ಡ್‌ನಲ್ಲಿ 11 ಮಂದಿ ನಾಮಪತ್ರ ಸಲ್ಲಿಸಿದ್ದು, ಐವರು ಹಿಂಪಡೆದು, 6 ಸ್ಪರ್ಧಿಗಳು ಕಣದಲ್ಲಿದ್ದಾರೆ. ಇದು ವಾರ್ಡ್ ಒಂದರಲ್ಲಿ ಗರಿಷ್ಠ ಸ್ಪರ್ಧಿಗಳಿರುವ ಸಂಖ್ಯೆ.
ಇಬ್ಬರು ಕಣದಿಂದ ಹಿಂದಕ್ಕೆ
ಬಿಜೆಪಿ, ಕಾಂಗ್ರೆಸ್ ಬಂಡಾಯ ಸರ್ಧಿಗಳ ಪೈಕಿ ಇಬ್ಬರು ಅಖಾಡದಿಂದ ಹಿಂದೆ ಸರಿದಿದ್ದಾರೆ. ಕಾನತ್ತಿಲ ವಾರ್ಡ್‌ನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜಯಂತಿ ಆರ್. ರೈ ಹಾಗೂ ವಾರ್ಡ್ 15ರಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದ ಅಬ್ದುಲ್ ಮಜೀದ್ ನಾಮಪತ್ರ ಹಿಂಪಡೆದಿದ್ದಾರೆ.
ಕಾಂಗ್ರೆಸ್, ಬಿಜೆಪಿಗೆ ಬಂಡಾಯ ಬಿಸಿ
ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ಬೂಡುವಿನಿಂದ ರಿಯಾಜ್ ಕಟ್ಟೆಕ್ಕಾರ್, ಬೋರುಗುಡ್ಡೆಯಿಂದ ಆರ್.ಕೆ. ಮಹಮ್ಮದ್, ಬೀರಮಂಗಲ ವಾರ್ಡ್ ನಿಂದ ಅಬ್ದುಲ್ ರಹಿಮಾನ್ ಮೊಗರ್ಪಣೆ, ಜಯನಗರ ವಾರ್ಡ್‌ನಿಂದ ನವೀನ್ ಮಚಾದೋ ಅವರು ಕಣದಲ್ಲಿದ್ದು, ನಾಮಪತ್ರ ಹಿಂಪಡೆದಿಲ್ಲ. ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಶಾಂತಿನಗರ ವಾರ್ಡ್‌ನಿಂದ ಜನಾರ್ದನ, ಜಯನಗರ ವಾರ್ಡ್‌ನಿಂದ ಮೋಹಿನಿ ಅವರು ಕಣದಲ್ಲಿ ಉಳಿದುಕೊಂಡಿದ್ದಾರೆ.
ಜೆಡಿಎಸ್ 1, ಎಸ್‌ಡಿಪಿಐ 2
ಎಸ್‌ಡಿಪಿಐ ಪಕ್ಷ ಒಟ್ಟು 6 ಕಡೆ ನಾಮಪತ್ರ ಸಲ್ಲಿಸಿದ್ದು, ನಾಲ್ಕು ಕಡೆ ನಾಮಪತ್ರ ವಾಪಸು ಪಡೆದಿದೆ. ಕಲ್ಲುಮುಟ್ಲು, ನಾವೂರು ವಾರ್ಡ್‌ಗಳಲ್ಲಿ ಸ್ಪರ್ಧಿಸುತ್ತಿದೆ. ನಾಮಪತ್ರ ಹಿಂಪಡೆದ ವಾರ್ಡ್‌ಗಳಲ್ಲಿ ಬೇರೆ ಅಭ್ಯರ್ಥಿಗೆ ಪಕ್ಷ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದೆ. ಬೋರುಗುಡ್ಡೆ ವಾರ್ಡ್ ನಲ್ಲಿ ಜೆಡಿಎಸ್ ಏಕೈಕ ಅಭ್ಯರ್ಥಿ ಕಣದಲ್ಲಿ ಉಳಿದಿದ್ದಾರೆ.
10 ಪಕ್ಷೇತರ ಅಭ್ಯರ್ಥಿಗಳು
ಕಾಂಗ್ರೆಸ್, ಬಿಜೆಪಿ ಬಂಡಾಯ ಅಭ್ಯರ್ಥಿಗಳು ಸೇರಿ ಒಟ್ಟು 10 ಮಂದಿ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಯನಗರ, ಶಾಂತಿನಗರ, ಬೀರಮಂಗಲ, ಬೂಡು, ಬೋರುಗುಡ್ಡೆ, ಮಿಲಿಟ್ರಿ ಗ್ರೌಂಡ್‌ನಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳಿಗೆ ಪಕ್ಷೇತರರು ಪೈಪೋಟಿ ನೀಡಲಿದ್ದಾರೆ.
ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ
ಸುಳ್ಯ ಮೇ 20: ನ.ಪಂ. ಚುನಾವಣೆ ಪ್ರಯುಕ್ತ ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುವ ತಾಲೂಕು ಹಾಗೂ ಹೊರ ತಾಲೂಕಿನ ಸಿಬಂದಿಗೆ ತರಬೇತಿ ಕಾರ್ಯಾಗಾರವು ಸೋಮವಾರ ತಾ.ಪಂ. ಸಭಾಂಗಣದಲ್ಲಿ ನಡೆಯಿತು.
ಚುನಾವಣಾಧಿಕಾರಿಗಳಾದ ದೇವರಾಜ ಮುತ್ಲಾಜೆ ಮತ್ತು ಎನ್. ಮಂಜುನಾಥ ಮಾತನಾಡಿ, ಮತದಾರರಿಗೆ ತೊಂದರೆ ಆಗದಂತೆ, ವ್ಯವಸ್ಥೆಯಲ್ಲಿ ಲೋಪ ಬಾರದಂತೆ ಮತದಾನ ಪ್ರಕ್ರಿಯೆ ಸುವ್ಯವಸ್ಥಿತವಾಗಿ ಪೂರ್ಣಗೊಳಿಸಲು ಎಲ್ಲ ಸಿಬಂದಿ ಆದ್ಯತೆ ನೀಡಬೇಕು. ಕರ್ತವ್ಯ ನಿರ್ವಹಣೆಗೆ ಪೂರಕವಾಗಿ ಎಲ್ಲ ನಿಯಮ ತಿಳಿದುಕೊಂಡಿರಬೇಕು ಎಂದವರು ತಿಳಿಸಿದರು.
ಈ ಬಾರಿ ಮತದಾನದ ಅವಧಿ ಬೆಳಗ್ಗೆ 7ರಿಂದ ಸಂಜೆ 5ರ ತನಕ ಇರಲಿದೆ. ವಿ.ವಿ. ಪ್ಯಾಟ್ ಇರುವುದಿಲ್ಲ. ಈ ಬಾರಿ ಎಡಗೈ ಉಂಗುರ ಬೆರಳಿಗೆ ಶಾಯಿ ಹಾಕಬೇಕು. ವಾರ್ಡ್‌ಗೆ ಒಂದರಂತೆ ಮತದಾನ ಕೇಂದ್ರಗಳು ಇವೆ ಎಂದವರು ಮಾಹಿತಿ ನೀಡಿದರು.
ಉಪ ತಹಶೀಲ್ದಾರ್ ವೇದಾವತಿ, ನ.ಪಂ. ಚುನಾವಣ ಡಿಟಿ ಮಂಜುನಾಥ, ಸೆಕ್ಟರ್ ಆಫೀಸರ್ ಮಹಾಬಲ ಕುಳ ಉಪಸ್ಥಿತರಿದ್ದರು. ಗಾಂಧಿನಗರ ಕಾಲೇಜಿನ ಉಪನ್ಯಾಸಕ ರಾಜೇಶ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಕ್ಷ್ಮೀಶ ರೈ ಅವರು ತರಬೇತಿ ನೀಡಿದರು.
ನಾಮಪತ್ರ ಹಿಂಪಡೆದವರು!
ಸೋಮವಾರ ನಾಮಪತ್ರ ಹಿಂಪಡೆಯುವಿಕೆ ದಿನದಂದು 64 ಸ್ಪರ್ಧಿಗಳ ಪೈಕಿ 11 ಮಂದಿ ನಾಮಪತ್ರ ಹಿಂಪಡೆದಿದ್ದಾರೆ. ವಾರ್ಡ್ 3 (ಜಯನಗರ) ಜೆಡಿಎಸ್ ಅಭ್ಯರ್ಥಿ ಸುರೇಶ್ ಕಾಮತ್, ವಾರ್ಡ್ 6ರ (ಬೀರಮಂಗಲ) ಎಸ್‌ಡಿಪಿಐ ಅಭ್ಯರ್ಥಿ ಮಹಮ್ಮದ್ ಮಿರಾಜ್, ವಾರ್ಡ್ 14ರ (ಕಲ್ಲುಮುಟ್ಲು) ಎಸ್‌ಡಿಪಿಐ ಅಭ್ಯರ್ಥಿ ತೌಸಿಫಾ ಎಂ.ಕೆ., ವಾರ್ಡ್-15 (ನಾವೂರು) ಎಸ್‌ಡಿಪಿಐ ಅಭ್ಯರ್ಥಿ ಮಹಮ್ಮದ್ ಮಿರಾಜ್, ಪಕ್ಷೇತರ ಅಭ್ಯರ್ಥಿ(ಕಾಂಗ್ರೆಸ್ ಬಂಡಾಯ) ಅಬ್ದುಲ್ ಮಜೀದ್, ವಾರ್ಡ್ – 16ರ (ಕಾಯರ್ತೋಡಿ) ಎಸ್‌ಡಿಪಿಐ ಅಭ್ಯರ್ಥಿ ತೌಸಿಫಾ ಎಂ.ಕೆ., ವಾರ್ಡ್-17ರ (ಬೋರುಗುಡ್ಡೆ) ಎಸ್‌ಡಿಪಿಐ ಅಭ್ಯರ್ಥಿಗಳಾದ ಮಹಮ್ಮದ್ ರಫೀಕ್, ಮಹಮ್ಮದ್ ಮುಸ್ತಾಫ, ಪಕ್ಷೇತರ ಅಭ್ಯರ್ಥಿಗಳಾದ ಮಹಮ್ಮದ್ ಮಸೂದ್ ಕೆ.ಎ., ಅಬ್ದುಲ್ ರಶೀದ್ ಪಿ.ಎಂ., ವಾರ್ಡ್-20ರ (ಕಾನತ್ತಿಲ) ಪಕ್ಷೇತರ ಅಭ್ಯರ್ಥಿ (ಬಿಜೆಪಿ ಬಂಡಾಯ) ಜಯಂತಿ ಆರ್. ರೈ ಅವರು ನಾಮಪತ್ರ ಹಿಂಪಡೆದಿದ್ದಾರೆ. ಸಲ್ಲಿಕೆಯಾಒಟ್ಟು 65 ನಾಮಪತ್ರಗಳ ಪೈಕಿ ಪುರಭವನ 10ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿತ್ತು.
ಖರ್ಚು-ವೆಚ್ಚ: ಅಭ್ಯರ್ಥಿಗಳಿಗೆ ಮಾಹಿತಿ ಸಭೆ
ಸುಳ್ಯ : ನ.ಪಂ. ಚುನಾವ ಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಚುನಾವಣಾ ಖರ್ಚು-ವೆಚ್ಚ ಹಾಗೂ ಇತರ ನಿಯಮಗಳ ಬಗ್ಗೆ ಮಾಹಿತಿ ಸಭೆ ಸೋಮವಾರ ನ.ಪಂ. ಆವರಣದಲ್ಲಿ ನಡೆಯಿತು.
ಅಭ್ಯರ್ಥಿಗಳು ಎರಡು ದಿನಗಳಿ ಗೊಮ್ಮೆ ಖರ್ಚು-ವೆಚ್ಚದ ಮಾಹಿತಿಯನ್ನು ನ.ಪಂ.ನಲ್ಲಿ ನೇಮಿಸಿರುವ ಚುನಾವಣೆ ಖರ್ಚು – ವೆಚ್ಚ ದಾಖಲು ಅಧಿಕಾರಿಗೆ ಸಲ್ಲಿಸಬೇಕು. ಅಭ್ಯರ್ಥಿ ಅಥವಾ ಅವರ ಏಜೆಂಟ್ ಬಂದು ಮಾಹಿತಿ ನೀಡಬೇಕು. ತಪ್ಪು ಲೆಕ್ಕ ನೀಡಿದ್ದಲ್ಲಿ ಜನಪ್ರತಿನಿಧಿ ಆದ ಬಳಿಕ ಸದಸ್ಯತ್ವ ರದ್ದಾಗುವ ಸಾಧ್ಯತೆಯೂ ಇದೆ. ಈ ಬಗ್ಗೆ ನಿಗಾ ಇರಿಸಿ ಎಲ್ಲ ಮಾಹಿತಿಗಳನ್ನು ತಪ್ಪದೇ ದಾಖಲಿಸಬೇಕು ಎಂದು ಚುನಾವಣಾಧಿಕಾರಿಗಳಾದ ಎನ್. ಮಂಜುನಾಥ ಹಾಗೂ ದೇವರಾಜ ಮುತ್ಲಾಜೆ ಹೇಳಿದರು.
ಈ ಸಂದರ್ಭದಲ್ಲಿ 20 ವಾರ್ಡ್ ಗಳ ಅಭ್ಯರ್ಥಿಗಳು, ಏಜೆಂಟರು ಉಪಸ್ಥಿತರಿದ್ದರು. ವಾರ್ಡ್ 1ರಿಂದ 10 ಹಾಗೂ 11ರಿಂದ 20ರ ಅಭ್ಯರ್ಥಿಗಳಿಗೆ ಪ್ರತ್ಯೇಕ ಸಭೆ ಏರ್ಪಡಿಸಲಾಯಿತು.
ಟಾಪ್ ನ್ಯೂಸ್
