ರಾಜ್ಯದ ಶಾಲೆಗಳಲ್ಲಿ ಮೊಳಗಲಿದೆ “ವಾಟರ್‌ ಬೆಲ್‌”

Team Udayavani, Nov 14, 2019, 6:00 AM IST

ಸಾಂದರ್ಭಿಕ ಚಿತ್ರ

ಮಂಗಳೂರು: ರಾಜ್ಯದ ಎಲ್ಲ ಶಾಲೆಗಳಲ್ಲಿಯೂ ಇನ್ನು ಮುಂದೆ ಪ್ರತಿ ತರಗತಿ ಮುಗಿದಾಕ್ಷಣ ಕೇಳುವ ಗಂಟೆಯ ಸದ್ದಿನೊಂದಿಗೆ ವಾಟರ್‌ ಬೆಲ್‌ ಕೂಡ ಮೊಳಗಲಿದೆ. ಆ ಮೂಲಕ ಕೇರಳ ಮಾದರಿಯಲ್ಲಿ ರಾಜ್ಯದ ಶಾಲೆಗಳಲ್ಲೂ ನೀರು ಕುಡಿಯಲೆಂದೇ ಮಕ್ಕಳಿಗೆ ಸಮಯ ನಿಗದಿಪಡಿಸಲು ರಾಜ್ಯ ಸರಕಾರ ಮುಂದಾಗಿದೆ.

ದಿನಕ್ಕೆ ಕನಿಷ್ಠ ಮೂರ್‍ನಾಲ್ಕು ಲೀಟರ್‌ ನೀರು ಮನುಷ್ಯನ ದೇಹಕ್ಕೆ ಅಗತ್ಯ. ಆದರೆ ನಿರ್ಲಕ್ಷé, ಅತಿಯಾದ ಒತ್ತಡಗಳಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದನ್ನೇ ಜನ ಮರೆಯುತ್ತಾರೆ. ಪರಿಣಾಮ ದೇಹದಲ್ಲಿ ನೀರಿನ ಕೊರತೆಯಾಗಿ ಉರಿಮೂತ್ರ, ಉಷ್ಣದಂತಹ ಹಲವಾರು ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ.

ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿ ಗಳು ಇಂತಹ ಸಮಸ್ಯೆಗಳಿಂದ ಮುಕ್ತರಾಗಬೇಕೆಂಬ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಶಿಕ್ಷಣ ಸಚಿವರು, ಮಕ್ಕಳಿಗೆ ಶಾಲೆಗಳಲ್ಲಿ ನೀರು ಕುಡಿಯಲೆಂದೇ ಸಮಯ ನಿಗದಿಪಡಿಸಲು ಮುಂದಾಗಿದ್ದಾರೆ. ಈ ಬಗ್ಗೆ ಕಾರ್ಯಯೋಜನೆ ರೂಪಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದಾರೆ.

ಮೊಳಗಲಿದೆ ವಾಟರ್‌ ಬೆಲ್‌
ಮಧ್ಯಾಹ್ನದ ಬಿಸಿಯೂಟಕ್ಕೆ ಒಂದಷ್ಟು ಹೊತ್ತು ಸಮಯ ಇರುವಂತೆಯೇ ನೀರು ಕುಡಿಯಲೆಂದೇ ದಿನದಲ್ಲಿ ಮೂರು ಬಾರಿ ವಿರಾಮ ಇರುತ್ತದೆ. ಮೂರು ಬಾರಿಯೂ ಗಂಟೆ ಬಾರಿಸಿ ನೀರು ಕುಡಿಯುವಂತೆ ಮಕ್ಕಳನ್ನು ಎಚ್ಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಕ್ಕಳು ಸಾಕಷ್ಟು ನೀರು ಕುಡಿದು ನಿಗದಿತ ಸಮಯದೊಳಗೆ ತರಗತಿಯೊಳಗೆ ಹೋಗಬೇಕು. ಎಲ್ಲ ಮಕ್ಕಳಿಗೂ ಬಾಟಲ್‌ ನೀರು ತರಲು ಸಾಧ್ಯವಾಗುವುದಿಲ್ಲ ಮತ್ತು ತಂದರೂ ಚಿಕ್ಕ ಬಾಟಲ್‌ನಲ್ಲಿರುವ ನೀರು ಸಾಕಾಗುವುದಿಲ್ಲ. ಅದಕ್ಕಾಗಿ ಶಾಲೆಗಳಲ್ಲೇ ಶುದ್ಧ ನೀರನ್ನು ಕುಡಿಯ ಬೇಕೆಂಬ ಉದ್ದೇಶದಿಂದ ಈ ಕ್ರಮ ಅನುಸರಿಸಲಾಗುತ್ತಿದೆ. ದಿನದ ಯಾವ ಸಮಯದಲ್ಲಿ ವಾಟರ್‌ ಬೆಲ್‌ ಬಾರಿಸಬೇಕೆಂಬ ಬಗ್ಗೆ ಇನ್ನಷ್ಟೇ ಅಧಿಕಾರಿ ಗಳು ಯೋಜಿಸಬೇಕಿದೆ.

ಇಂದ್ರಪ್ರಸ್ಥದಲ್ಲಿದೆ ವಾಟರ್‌ಬೆಲ್‌!
ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಕಳೆದೆರಡು ತಿಂಗಳ ಹಿಂದೆಯೇ ವಾಟರ್‌ಬೆಲ್‌ ವ್ಯವಸ್ಥೆ ಅನುಷ್ಠಾನಗೊಂಡಿದೆ. ಬೆಳಗ್ಗೆ 10.35, ಮಧ್ಯಾಹ್ನ 12 ಮತ್ತು 2 ಗಂಟೆಗೆ ಇದಕ್ಕಾಗಿಯೇ ಗಂಟೆ ಬಾರಿಸುತ್ತಿದ್ದು, ಮಕ್ಕಳು ಮನೆಯಿಂದ ತಂದ ಬಾಟಲ್‌ ನೀರು ಅಥವಾ ಶಾಲೆಯಲ್ಲೇ ಇರುವ ನೀರನ್ನು ಕುಡಿಯುತ್ತಾರೆ. ಮಕ್ಕಳು ನೀರು ಕುಡಿಯುತ್ತಾರೋ, ಇಲ್ಲವೋ ಎಂಬುದನ್ನು ಶಿಕ್ಷಕರೂ ಗಮನಿಸುತ್ತಾರೆ. ಎಲ್‌ಕೆಜಿಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ದಿನಕ್ಕೆ ಮೂರು ಹೊತ್ತು ನೀರು ಕುಡಿಯುವುದು ಕಡ್ಡಾಯವಾಗಿರುತ್ತದೆ. “ಮಕ್ಕಳು ಬಾಟಲ್‌ಗ‌ಳಲ್ಲಿ ತಂದ ನೀರನ್ನು ಹಾಗೆಯೇ ಮನೆಗೊಯ್ಯುತ್ತಾರೆ ಎಂಬ ಪೋಷಕರ ದೂರಿನ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದೇವೆ’ ಎಂದು ಪ್ರಾಂಶುಪಾಲ ಜೋಸ್‌ ಎಂ.ಜೆ. ತಿಳಿಸಿದ್ದಾರೆ.

ಕೇರಳ ಮಾದರಿ
ಕೇರಳದಲ್ಲಿ ವಾಟರ್‌ ಬೆಲ್‌ ಹೆಸರಿನಲ್ಲಿ ದಿನಕ್ಕೆ ಮೂರು ಹೊತ್ತು ಗಂಟೆ ಬಾರಿಸಲಾಗುತ್ತದೆ. ಈ ವೇಳೆ ವಿದ್ಯಾರ್ಥಿಗಳು ತಪ್ಪದೇ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಕೇರಳದಲ್ಲಿ ಚಾಲ್ತಿಯಲ್ಲಿರುವ ಈ ಕಾರ್ಯಕ್ರಮದ ಬಗ್ಗೆ ಟ್ವಿಟರ್‌ ಬಳಕೆದಾರರೊಬ್ಬರ ಟ್ವೀಟ್‌ ನೋಡಿದ ಶಿಕ್ಷಣ ಸಚಿವರು ರಾಜ್ಯದಲ್ಲಿಯೂ ಇದನ್ನು ಅನುಸರಿಸಲು ಮುಂದಾಗಿದ್ದಾರೆ.

15 ದಿನಗಳಲ್ಲಿ ಅನುಷ್ಠಾನ
ಹೆಚ್ಚಿನ ಜನರೂ ಅಗತ್ಯ ಪ್ರಮಾಣದ ನೀರು ಕುಡಿಯದೇ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಮಕ್ಕಳಲ್ಲಂತೂ ಇದು ಸಾಮಾನ್ಯ. ಭಾವೀ ಪ್ರಜೆಗಳು ಆರೋಗ್ಯವಂತರಾಗಿರಬೇಕು ಎಂಬ ಉದ್ದೇಶದಿಂದ ಕೇರಳದ ಶಾಲೆಗಳಲ್ಲಿ ನೀರು ಕುಡಿಯಲು ಸಮಯ ನಿಗದಿಪಡಿಸಿದಂತೆ ರಾಜ್ಯದಲ್ಲಿಯೂ ಮಾಡಲಾಗುವುದು. ಈಗಾಗಲೇ ಕಾರ್ಯಯೋಜನೆ ರೂಪಿಸಲು ಆಯುಕ್ತರಿಗೆ ಸೂಚಿಸಲಾಗಿದ್ದು, 15 ದಿನಗಳಲ್ಲಿ ಅನುಷ್ಠಾನವಾಗಲಿದೆ.
– ಎಸ್‌. ಸುರೇಶ್‌ ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು

-  ಧನ್ಯಾ ಬಾಳೆಕಜೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ