ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆ

•ಶಾಲೆ-ಕಾಲೇಜುಗಳಲ್ಲಿ ವೀರ ಸೈನಿಕರ ಸ್ಮರಣೆ; ನಾಟಕ ಪ್ರದರ್ಶನ•ಗಜಾನನ ಮಹಾಮಂಡಳದಿಂದ ದೇಶಾಭಿಮಾನ ರ್ಯಾಲಿ

Team Udayavani, Jul 27, 2019, 8:08 AM IST

ಹುಬ್ಬಳ್ಳಿ: ಇಲ್ಲಿನ ಜೆಎಸ್ಸೆಸ್‌ ಶಾಲೆಯಲ್ಲಿ 20ನೇ ಕಾರ್ಗಿಲ್ ವಿಜಯೋತ್ಸವ ಪ್ರಯುಕ್ತ ವಿದ್ಯಾರ್ಥಿಗಳು ಕಿರುನಾಟಕ ಪ್ರದರ್ಶಿಸಿದರು.

ಹುಬ್ಬಳ್ಳಿ: ಕಾರ್ಗಿಲ್ ಯುದ್ಧದಲ್ಲಿ ಭಾರತದ ಸಾಕಷ್ಟು ಸೈನಿಕರು ಬಲಿದಾನ ಮಾಡಿದ್ದಾರೆ. ಅವರ ಗೌರವಾರ್ಥ ಜು. 26ರಂದು ಕಾರ್ಗಿಲ್ ವಿಜಯೋತ್ಸವ ಆಚರಿಸುತ್ತಿದ್ದೇವೆ. ನಮ್ಮ ಸೈನಿಕರ ಬಲಿದಾನವನ್ನು ನಾವೆಲ್ಲ ಸ್ಮರಣೆ ಮಾಡಬೇಕು ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಹಿರಿಯ ಅಧಿಕಾರಿ ರವೀಂದ್ರ ಕವಲಿ ಹೇಳಿದರು.

ಶ್ರೀ ಗಜಾನನ ಮಹಾಮಂಡಳವು ಕಾರ್ಗಿಲ್ ವಿಜಯೋತ್ಸವದ ವೀರ ಸೈನಿಕರ ಸ್ಮರಣೆ ಹಾಗೂ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ಮಾಡಿದ ವೀರಯೋಧರಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ದೇಶಾಭಿಮಾನಿ ಅಭಿನಂದನಾ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾರ್ಗಿಲ್ನಲ್ಲಿ ದೇಶದ ಸೈನಿಕರು ಪಾಕಿಸ್ತಾನದ ಸೈನಿಕರ ವಿರುದ್ಧ ಹೋರಾಟ ನಡೆಸಿ ಪರಾಕ್ರಮ ಮೆರೆಯುವ ಮೂಲಕ ದೊಡ್ಡ ಗೆಲುವು ತಂದುಕೊಟ್ಟಿದ್ದರು ಎಂದರು.

ಎಸ್‌ಜೆಎಂವಿಎಸ್‌ ಮಹಿಳಾ ಕಾಲೇಜಿನ ಎನ್ನೆಸ್ಸೆಸ್‌ ಅಧಿಕಾರಿ ಡಾ| ಲಿಂಗರಾಜ ಅಂಗಡಿ ಮಾತನಾಡಿ, ಭಾರತದ ಸೈನಿಕರು ಪಾಕಿಸ್ತಾನದ ಸೈನಿಕರನ್ನು ಬೆನ್ನಟ್ಟಿ ಛಲ ಮೆರೆದ ದಿನವಿದು. ಪ್ರಾಣದ ಹಂಗು ತೊರೆದು ದೇಶಕ್ಕಾಗಿ ಶ್ರಮಿಸುತ್ತಿರುವ ಸೈನಿಕರಿಗೆ ಕೇಂದ್ರ ಸರಕಾರ ಸಾಕಷ್ಟು ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.

ಅಕ್ಕನ ಬಳಗದ ಮಾಜಿ ಅಧ್ಯಕ್ಷೆ ಸುಲೋಚನಾ ಭೂಸನೂರ ಮಾತನಾಡಿ, ದೇಶದ ಗಡಿ ಕಾಯುವ ಯೋಧರಿಗೆ ನಾವೆಲ್ಲ ಪ್ರೋತ್ಸಾಹ ನೀಡಬೇಕು. ಪ್ರೇರಕ ಶಕ್ತಿಯಾಗಬೇಕು ಎಂದರು.

ಮಹಾಮಂಡಳದ ಅಧ್ಯಕ್ಷ ಡಿ. ಗೋವಿಂದರಾವ್‌ ಮಾತನಾಡಿದರು. ಎಸಿಪಿ ಎಚ್.ಕೆ. ಪಠಾಣ, ಎಸ್‌ಜೆಎಂವಿಎಸ್‌ ಪ್ರಾಂಶುಪಾಲರಾದ ಶ್ರೀಮತಿ ಡಾ| ಜಿ.ಎಚ್. ಕಳ್ಳಿಮಠ, ಪ್ರೊ| ಗಂಗಾಧರ ಗುಡಾರದ, ಲ್ಯಾಮಿಂಗ್ಟನ್‌ ಪ್ರೌಢಶಾಲೆ ಮುಖ್ಯಾಧ್ಯಾಪಕ ಜಿ.ಆರ್‌. ಶಿವಪ್ರಸಾದ, ಜಿ.ಬಿ. ಬೂದನೂರ, ಮುಖ್ಯಾಧ್ಯಾಪಕಿ ಜಿ.ಬಿ. ಮಹಾಳಂಕ, ನಾಗರಾಜ ಚಿಂಚಲಿ, ಕೆ.ಪಿ. ಪುಲಾನೇಕರ, ಶ್ರೀಮತಿ ಎಂ.ಜಿ. ಶಿಂಗೆ, ಉಮಾ ಪಂಚಾಂಗಮಠ, ಗೀತಾ ಮುಳ್ಳೊಳ್ಳಿ, ನಿರ್ಮಲಾ ಅಂಗಡಿ ಇದ್ದರು.

ರ್ಯಾಲಿಯು ಲ್ಯಾಮಿಂಗ್ಟನ್‌ ಶಾಲೆ ಆವರಣದಿಂದ ಸಂಗೊಳ್ಳಿ ರಾಯಣ್ಣ ವೃತ್ತ, ಕಿತ್ತೂರ ಚನ್ನಮ್ಮ ವೃತ್ತ ಮಾರ್ಗವಾಗಿ ಮರಳಿ ಶಾಲೆಗೆ ತಲುಪಿತು. ವಿವಿಧ ಶಾಲೆ- ಕಾಲೇಜು ವಿದ್ಯಾರ್ಥಿನಿಯರು, ಶಿಕ್ಷಕರು ಪಾಲ್ಗೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ