ಅತಿಥಿ ಉಪನ್ಯಾಸಕರಿಗೆ ಅಭದ್ರತೆಯ ಭಯ ಬೇಡ: ಸಚಿವ ಅಶ್ವತ್ಥನಾರಾಯಣ
ಎನ್‌ಇಪಿ ಅನುಷ್ಠಾನಕ್ಕೆ ಹೆಚ್ಚಿನ ಉಪನ್ಯಾಸಕರ ಅಗತ್ಯವಿದೆ
Team Udayavani, Nov 30, 2022, 11:06 PM IST
ಧಾರವಾಡ: ಎನ್‌ಇಪಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೆಚ್ಚಿನ ಉಪನ್ಯಾಸಕರ ಅಗತ್ಯವಿದೆ. ಹೀಗಾಗಿ ಮುಂಬರುವ ವರ್ಷಗಳಲ್ಲಿ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಅಗತ್ಯ ಬೀಳುತ್ತದೆ. ಆದ್ದರಿಂದ ಈಗಿರುವ 11 ಸಾವಿರ ಅತಿಥಿ ಉಪನ್ಯಾಸಕರು ಅಭದ್ರತೆಯ ಭಾವನೆ ಒಳಗಾಗುವ ಅಗತ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ತಮ್ಮ ಗೌರವಧನವನ್ನು ಗಣನೀಯವಾಗಿ ಹೆಚ್ಚಿಸಲು ಶ್ರಮಿಸಿದ ಸಚಿವರಿಗೆ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಬುಧವಾರ ಆಯೋಜಿಸಿದ್ದ ಸಮ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಮೊದಲು ಅತಿಥಿ ಉಪನ್ಯಾಸಕರ ಗೌರವಧನಕ್ಕೆ ವರ್ಷಕ್ಕೆ 110 ಕೋಟಿ ರೂ. ಮಾತ್ರ ಮೀಸಲಿಡಲಾಗುತ್ತಿತ್ತು.
ಈಗ ಈ ಮೊತ್ತವನ್ನು 280 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಜತೆಗೆ ಆಯಾ ಕಾಲೇಜುಗಳಿಗೆ ಶುಲ್ಕದ ರೂಪದಲ್ಲಿ ಬರುವ ಹಣವನ್ನು ಕಾಲೇಜಿನ ಖಾತೆಗೇ ಹಾಕಲಾಗುತ್ತಿದೆ. ಈಗ ಅತಿಥಿ ಉಪನ್ಯಾಸಕರು ಮುಂದಿಟ್ಟಿರುವ ಇನ್ನೊಂದಿಷ್ಟು ಬೇಡಿಕೆಗಳ ಬಗ್ಗೆ ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬಹುದೆಂದು ಪರಿಶೀಲಿಸಲು ಸಿಎಂ ಜತೆ ಚರ್ಚಿಸಲಾಗುವುದು ಎಂದರು.