
ಕಳಚಿದ ಪಾರಿಜಾತ ಪರಂಪರೆಯ ಕೊಂಡಿ: ಹಿರಿಯ ಕಲಾವಿದ ಬಸವಲಿಂಗಯ್ಯ ಹಿರೇಮಠ ನಿಧನ
Team Udayavani, Jan 9, 2022, 9:04 AM IST

ಧಾರವಾಡ : ಶ್ರೀ ಕೃಷ್ಣ ಪಾರಿಜಾತ ನಾಟಕವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ ಹಿರಿಯ ಜಾನಪದ ಕಲಾವಿದ ಗಾಯಕ ಬಸವಲಿಂಗಯ್ಯ ಹಿರೇಮಠ (65 ವ) ಅವರು ರವಿವಾರ ಬೆಳಗಿನ ಜಾವ ನಿಧನರಾದರು.
ಅವರು ಪತ್ನಿ, ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೂಲತಃ ಬೆಳಗಾವಿ ಜಿಲ್ಲೆಯ ಬೇಲೂರಿನವರಾದ ಬಸವಲಿಂಗಯ್ಯ ನೀನಾಸಂ ಶಿಕ್ಷಣ ಪಡೆದು, ಸುಗಮ ಸಂಗೀತ ಕ್ಷೇತ್ರದಲ್ಲಿ ಗಾಯಕರಾಗಿ ಹೆಸರು ಮಾಡಿದರು. ದೊಡ್ಡಾಟ, ಸಣ್ಣಾಟ, ಪಾರಿಜಾತ ನಾಟಕಗಳನ್ನು ಆಧುನಿಕ ರಂಗಭೂಮಿಗೆ ಪರಿಚಯಿಸಿ ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು ಅವುಗಳನ್ನು ಹೊಸ ಪೀಳಿಗೆಗೆ ಪರಿಚಯಿಸಿದರು.
ಕುಲಗೋಡು ತಮ್ಮಣ್ಣ ವಿರಚಿತ 12 ಗಂಟೆಗಳ ಅವಧಿಯ ಶ್ರೀ ಕೃಷ್ಣ ಪಾರಿಜಾತ ವನ್ನು ಮೂರು ಗಂಟೆಯಲ್ಲಿ ಪ್ರೇಕ್ಷಕರ ಮನ ಮುಟ್ಟುವಂತೆ ಮಾಡಿ ಸಾವಿರಕ್ಕೂ ಅಧಿಕ ಪ್ರಯೋಗದಿಂದ ಜನ ಮಾನಸದಲ್ಲಿ ಛಾಪು ಮೂಡಿಸಿದ್ದರು.
ಇದನ್ನೂ ಓದಿ:ಇಂದು ಅನಿವಾಸಿ ಭಾರತೀಯರ ದಿನ : ಸದೃಢವಾಗಲಿ ತಾಯ್ನಾಡಿನೊಂದಿಗಿನ ನಂಟು
ಜಾನಪದ ಸಂಶೋಧನಾ ಸಂಸ್ಥೆ ಮೂಲಕ ಯುವ ಕಲಾವಿದರು, ಯುವ ಸಮೂಹದ ಮುಂದೆ ಜಾನಪದ ಕಲಾ ತರಬೇತಿ ಮಾಡಿ ಸೈ ಎನಿಸಿಕೊಂಡ ಬಸವಲಿಂಗಯ್ಯ ಅವರ ಕಂಚಿನಕಂಠದ ಹಾಡುಗಾರಿಕೆಗೆಎಲ್ಲರೂ ತಲೆತೂಗುತ್ತಿದ್ದರು.
ಅಮೇರಿಕಾ, ಇಂಗ್ಲೆಂಡ್, ದುಬೈ ಸೇರಿದಂತೆ ವಿಶ್ವ ದ ಇತರ ರಾಷ್ಟ್ರಗಳಲ್ಲಿ ಕೂಡ ಕೃಷ್ಣ ಪಾರಿಜಾತ ಸಣ್ಣಾಟ ಪ್ರದರ್ಶನ ನೀಡಿದ್ದ ಅವರ ಕಲಾ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಬಿರುದು ಸನ್ಮಾನಗಳು ಒಲಿದು ಬಂದಿದ್ದವು.
ಅವರ ಜಾನಪದ ಗಾಯನ ಕಾರ್ಯಕ್ರಮಗಳು ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾಗಿದ್ದವು.
ಟಾಪ್ ನ್ಯೂಸ್
