ಹಳ್ಳ ಹಿದ್ದೋಯ್ತು ರಸ್ತೆ ತೇಪೆ ಕಾಮಗಾರಿ

Team Udayavani, Nov 20, 2019, 12:02 PM IST

ಹುಬ್ಬಳ್ಳಿ: ಮಳೆಯಿಂದ ಹದಗೆಟ್ಟಿದ್ದ ನಗರದ ರಸ್ತೆಗಳ ಕಾಮಗಾರಿ ಆರಂಭಗೊಂಡಿದ್ದರಿಂದ ಧೂಳಿನ ರಸ್ತೆಗಳಿಗೆ ಮುಕ್ತಿ ಸಿಕ್ಕಿತು ಎಂದು ಸಮಾಧಾನ ಪಟ್ಟುಕೊಂಡಿದ್ದ ಜನರು ಕಳಪೆ ಕಾಮಗಾರಿಯಿಂದಾಗಿ ಮತ್ತೆ ಆತಂಕಕ್ಕೀಡಾಗಿದ್ದಾರೆ.

ಒಂದೆಡೆ ರಸ್ತೆಗೆ ಹಾಕಿದ ಡಾಂಬರ್‌ ಎರಡನೇ ದಿನಕ್ಕೆ ಕಿತ್ತುಕೊಂಡು ಹೋಗುತ್ತಿದ್ದರೆ, ಇನ್ನೊಂದೆಡೆ ರಸ್ತೆಗೆ ಹಾಕಲಾದ ಖಡಿ ರಸ್ತೆಯ ತುಂಬೆಲ್ಲ ಹರಡಿ ಸಂಚಾರವನ್ನು ದುಸ್ತರವಾಗಿಸಿದೆ.

ಒಟ್ಟಿನಲ್ಲಿ ಅವಳಿನಗರದ ರಸ್ತೆಗಳ ಸ್ಥಿತಿ ಅಧೋಗತಿ ಎಂಬಂತಾಗಿದೆ. ಎಲ್ಲಿ ನೋಡಿದರೂ ಧೂಳು-ತಗ್ಗುಗಳ ದರ್ಶನ ಎಂದು ಜನರು ಬೊಬ್ಬೆ ಹೊಡೆಯುತ್ತಿದ್ದಾಗ, ಮಳೆ ಸೇರಿದಂತೆ ಇನ್ನಿತರ ಕಾರಣಗಳನ್ನು ನೀಡಿ ಹು-ಧಾ ಮಹಾನಗರ ಪಾಲಿಕೆ ಸಮಯ ಕಳೆಯುತ್ತಾ, ಇದೀಗ ಅವಳಿನಗರದಲ್ಲಿ ಎಲ್ಲೆಡೆ ತಗ್ಗು ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಕೈ ಹಾಕಿದೆ. ಆದರೆ ಅದರಲ್ಲೂ ಕಳಪೆ ಕಾಮಗಾರಿ ಮಾಡುವ ಮೂಲಕ ಮತ್ತೆ ಜನರ ಅಕ್ರೋಶಕ್ಕೆ ತುತ್ತಾಗುತ್ತಿದೆ.

ಹು-ಧಾ ಮಹಾನಗರ ಪಾಲಿಕೆ ಕಚೇರಿಯ ಕೂಗಳತೆ ದೂರದಲ್ಲಿ ಸರ್‌ ಸಿದ್ದಪ್ಪ ಕಂಬಳಿ ಪ್ರತಿಮೆ ಮುಂಭಾಗದಲ್ಲಿ ಸಿಗ್ನಲ್‌ ಅಳವಡಿಕೆಗಾಗಿ ತೆಗೆಯಲಾಗಿದ್ದ ಗುಂಡಿಯನ್ನು ಕಳೆದ ಎರಡು ದಿನಗಳ ಕೆಳಗೆ ಡಾಂಬರ್‌ ಹಾಕಿ ಮುಚ್ಚಲಾಗಿತ್ತು. ಆದರೆ ಎರಡೇ ದಿನಕ್ಕೆ ಡಾಂಬರ್‌ ಕಿತ್ತುಕೊಂಡು ಹೋಗುತ್ತಿದೆ. ಇದು ಕಾಮಗಾರಿಯ ಸ್ಥಿತಿ-ಗತಿ ಬಿಂಬಿಸುತ್ತಿದೆ.

ಕಾಟಾಚಾರಕ್ಕೆ ತೇಪ : ಅವಳಿನಗರದಲ್ಲಿ ತಗ್ಗು-ಗುಂಡಿ ಮುಚ್ಚುವ ಕಾರ್ಯಕ್ಕೆ ಕೈ ಹಾಕಿರುವ ಹು-ಧಾ ಮಹಾನಗರ ಪಾಲಿಕೆ ಕಾಟಾಚಾರಕ್ಕೆಂಬಂತೆ ತೇಪೆ ಕಾರ್ಯ ಮಾಡಿಸುತ್ತಿದೆ. ಒಂದು ಗುಂಡಿ ಮುಚ್ಚಿದರೆ ಇನ್ನೊಂದು ಗುಂಡಿ ಹಾಗೇ ಬಿಟ್ಟು ಹೋಗುತ್ತಿದ್ದಾರೆ. ದೊಡ್ಡ ದೊಡ್ಡ ಗುಂಡಿಗಳ ಸನಿಹದಲ್ಲಿ ಗುಂಡಿಗಳನ್ನು ಮುಚ್ಚಿದರೆ ಪಕ್ಕದಲ್ಲಿರುವ ಗುಂಡಿಗಳನ್ನು ಮುಚ್ಚುತ್ತಿಲ್ಲ. ಇದೀಗ ಕೋರ್ಟ್‌ ವೃತ್ತದಲ್ಲಿ ಬಿದ್ದಿರುವ ದೊಡ್ಡ ಗುಂಡಿಯನ್ನು ಈಗಾಗಲೇ ಮುಚ್ಚಲಾಗಿದೆ.

ಆದರೆ ಅಲ್ಲಿಯೇ ಪಕ್ಕದಲ್ಲಿರುವ ಕಿತ್ತೂರು ಚನ್ನಮ್ಮ ವೃತ್ತದಿಂದ ಕೋರ್ಟ್‌ ವೃತ್ತಕ್ಕೆ ಬರುವ ರಸ್ತೆಯಲ್ಲಿ ಬಿದ್ದಿರುವ ದೊಡ್ಡ ಗುಂಡಿ ಹಾಗೆಯೇ ಬಿಡಲಾಗಿದೆ. ಇನ್ನು ಕೋರ್ಟ್‌ ವೃತ್ತದಿಂದ ಸಾಯಿಬಾಬಾ ಮಂದಿರದ ಮುಂಭಾಗದಲ್ಲಿ ಬಿದ್ದಿರುವ ತಗ್ಗುಗಳು ಇವರಿಗೇಕೆ ಕಾಣುವುದಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಅವಳಿನಗರದಲ್ಲಿ ನಡೆಯುತ್ತಿರುವ ತೇಪೆ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು. ಎಲ್ಲೆಡೆ ಧೂಳು ಎನ್ನುತ್ತಿದ್ದ ಜನರು ತೇಪೆ ಕಾರ್ಯ ಮಾಡುತ್ತಿದ್ದಾರೆ ಎಂದು ಸಂತಸ ಪಡುವಷ್ಟರಲ್ಲಿಯೇ, ಹಾಕಿರುವ ತೇಪೆ ಕಿತ್ತು ಹೋಗುತ್ತಿದೆ.

ಜನಾಕ್ರೋಶದ ನಂತರ ಪಾಲಿಕೆ ಇದೀಗ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಕೈ ಹಾಕಿದೆ. ಇಲ್ಲಿ ನೋಡಿದರೆ ಹಾಕಿದ ಎರಡೇ ದಿನಕ್ಕೆ ಡಾಂಬರ್‌ ಕಿತ್ತುಕೊಂಡು ಹೋಗುತ್ತಿದೆ. ಕಳಪೆ ಕಾಮಗಾರಿ ನಡೆದಿರುವುದು ಎದ್ದು ಕಾಣುತ್ತಿದ್ದು, ಪಾಲಿಕೆ ಕೂಡಲೇ ಎಚ್ಚೆತ್ತುಕೊಂಡು ಸರಿಯಾಗಿ ಗುಂಡಿ ಮುಚ್ಚಿಸುವ ಕೆಲಸ ಮಾಡಬೇಕು. ಕಳಪೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು.  -ಶೇಖರಯ್ಯ ಮಠಪತಿ, ಹು-ಧಾ ಆಟೋ ರಿಕ್ಷಾ ಮಾಲೀಕರು-ಚಾಲಕರ ಸಂಘದ ಅಧ್ಯಕ್ಷ

 

-ಬಸವರಾಜ ಹೂಗಾರ


ಈ ವಿಭಾಗದಿಂದ ಇನ್ನಷ್ಟು

  • ಧಾರವಾಡ: ಸಾರ್ವಜನಿಕರು ತಮಗೆ ಅಗತ್ಯವಿರುವ ಜಾತಿ, ಆದಾಯ ಮತ್ತು ರಹವಾಸಿ ಪ್ರಮಾಣಪತ್ರವನ್ನು ತಕ್ಷಣ ಪಡೆಯಲು ಅನುಕೂಲವಾಗುವಂತೆ ಸಾರ್ವಜನಿಕರಿಂದ ದಾಖಲೆ ಸಂಗ್ರಹಿಸಿ...

  • ಹುಬ್ಬಳ್ಳಿ: ಹೆಚ್ಚಿನ ಪ್ರಮಾಣದಲ್ಲಿ ಆಹಾರ ತ್ಯಾಜ್ಯ ಉತ್ಪತ್ತಿ ಮಾಡುವ ಹೋಟೆಲ್‌ಗ‌ಳು ಜೈವಿಕ ಅನಿಲ (ಬಯೋಗ್ಯಾಸ್‌) ಉತ್ಪಾದನಾ ಘಟಕ ಹೊಂದಬೇಕು ಎನ್ನುವ ಮಹಾನಗರ...

  • ಧಾರವಾಡ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರೈತಾಪಿ ಸಮದಾಯದ ಜೀವನಾಡಿ ಜಾನುವಾರುಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು...

  • ಕುಂದಗೋಳ: ವೇತನ ಪಾವತಿ ವಿಳಂಬ ಖಂಡಿಸಿ ತಾಲೂಕಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿ ದರ್ಜೆ ಗುತ್ತಿಗೆದಾರರು ಗುರುವಾರ ತಮ್ಮ ಸೇವೆ ಸ್ಥಗಿತಗೊಳಿಸಿ...

  • ಅಳ್ನಾವರ: ಮಕ್ಕಳು ದೇಶದ ಆಸ್ತಿ ಇದ್ದಂಗೆ. ದೇಶದ ಭವಿಷ್ಯ ನಿರ್ಮಿಸುವ ಗುರುತರ ಜವಾಬ್ದಾರಿ ಅವರ ಹೆಗಲ ಮೇಲಿದೆ. ಅಂತಹ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸುವುದು ನಮ್ಮೆಲ್ಲರ...

ಹೊಸ ಸೇರ್ಪಡೆ