
World Heritage ರಾಜ್ಯದ ಬೇಲೂರು,ಹಳೆಬೀಡು,ಸೋಮನಾಥಪುರ ದೇಗುಲಗಳು ಸೇರ್ಪಡೆ: ಎಚ್.ಕೆ. ಪಾಟೀಲ
Team Udayavani, Sep 19, 2023, 6:35 PM IST

ಗದಗ: ರಾಜ್ಯದ ಐತಿಹಾಸಿಕ ಮತ್ತು ಕಲೆ ಸಂಸ್ಕೃತಿಗೆ ಪ್ರತೀಕವಾಗಿರುವ 12 ಮತ್ತು 15ನೇ ಶತಮಾನಗಳಲ್ಲಿ ನಿರ್ಮಾಣಗೊಂಡಿರುವ ಹಾಸನ ಜಿಲ್ಲೆಯ ಬೇಲೂರು, ಹಳೆಬೀಡು ಮತ್ತು ಮೈಸೂರು ಜಿಲ್ಲೆಯ ಸೋಮನಾಥಪುರ ದೇಗುಲಗಳಿಗೆ ಜಾಗತಿಕ ಮನ್ನಣೆ ದೊರೆತಿದ್ದು, ಯುನೆಸ್ಕೋ ಈ ಮೂರು ದೇಗುಲಗಳನ್ನು ವಿಶ್ವ ಪಾರಂಪರಿಕ ತಾಣ ಎಂದು ಘೋಷಣೆ ಮಾಡಿದೆ ಎಂದು ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರದಂದು ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪದ್ಭರಿತ ಕರ್ನಾಟಕ ರಾಜ್ಯದ ಸಂಸ್ಕೃತಿ ಪರಂಪರೆ ಹಿರಿತನಕ್ಕೆ ಮತ್ತು ರಾಜ್ಯ ಸರ್ಕಾರದ ಸತತ ಪರಿಶ್ರಮದ ಫಲವಾಗಿ ರಾಜ್ಯದ ಈ ಮೂರು ದೇಗುಲಗಳ ಕಲೆ ಮತ್ತು ಪರಂಪರೆಯನ್ನು ಯುನೆಸ್ಕೋ ಗುರುತಿಸಿದೆ. ಈ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯುನೆಸ್ಕೋ ಮನ್ನಣೆ ಸಹಕಾರಿ ಆಗಲಿದೆ ಎಂದರು.
ಜಾಗತಿಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಬೆಳವಣಿಗೆಯಿಂದಾಗಿ ಈ ದೇಗುಲಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಸ್ಥಳೀಯ ಕರಕುಶಲ ಮತ್ತು ಗುಡಿ ಕೈಗಾರಿಕೆ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕುವ ಜೊತೆಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಅವಕಾಶ ಮಾಡಿಕೊಡಲಿದ್ದು, ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವೂ ಸಹ ಈ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಮುಂದಡಿ ಇರಿಸಲಿದೆ ಎಂದು ತಿಳಿಸಿದರು.
ಸೋಮವಾರ ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಲ್ಲಿ ನಡೆದ ಯೂನೆಸ್ಕೋದ 45ನೇ ಸರ್ವ ಸದಸ್ಯರ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, 2014ರಲ್ಲಿ ಆಯ್ಕೆ ಪಟ್ಟಿಗೆ ಈ ದೇಗುಲಗಳನ್ನು ಸೇರ್ಪಡೆಗೊಳಿಸಲಾಗಿತ್ತು.
2018ರಲ್ಲಿ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‍ಐ)ಗೆ ರಾಜ್ಯ ಸರ್ಕಾರವು ಈ ದೇಗುಲಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿತ್ತು. ಈ ಬೆಳವಣಿಗೆಗಳ ನಂತರ 2022ರಲ್ಲಿ ಅಂತರಾಷ್ಟ್ರೀಯ ಪುರಾತನ ಸ್ಮಾರಕ ಮತ್ತು ಪ್ರದೇಶಗಳ ಸಮಿತಿಯು ಇಲ್ಲಿಗೆ ಭೇಟಿ ನೀಡಿ, ಈ ದೇಗುಲಗಳ ಹಿರಿಮೆ ಬಗ್ಗೆ ಯುನೆಸ್ಕೋಗೆ ವರದಿ ನೀಡಿತ್ತು.
ಬೇಲೂರು, ಹಳೆಬೀಡು ಮತ್ತು ಸೋಮನಾಥಪುರ ದೇಗುಲಗಳ ಬಗ್ಗೆ ಸಲ್ಲಿಕೆಯಾಗಿದ್ದ ವರದಿಯನ್ನು ಆಧರಿಸಿ ಸೋಮವಾರ ನಡೆದ ಯೂನೆಸ್ಕೋ ಸಭೆಯಲ್ಲಿ ಭಾರತವೂ ಸೇರಿದಂತೆ 21 ದೇಶಗಳು ಈ ದೇಗುಲಗಳನ್ನು ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆ ಮಾಡಲು ಸರ್ವಾನುಮತದ ನಿರ್ಧಾರ ಕೈಗೊಂಡಿರುವುದು ಸಂತಸ ತಂದಿದೆ ಎಂದರು.
ಬೇಲೂರು, ಹಳೆಬೀಡು, ಸೋಮನಾಥಪುರ ದೇಗುಲಗಳು ಯುನೆಸ್ಕೋ ಪಟ್ಟಿಗೆ ನಾಲ್ಕನೇ ತಾಣವಾಗಿ ಸೇರ್ಪಡೆಗೊಂಡಿವೆ. ಈಗಾಗಲೇ ರಾಜ್ಯದ ಪಶ್ಚಿಮಘಟ್ಟ ಪ್ರದೇಶ, ಹಂಪಿ, ಪಟ್ಟದಕಲ್ಲು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ ಎಂದು ಮಾಹಿತಿ ನೀಡಿದರು.
ಕರುನಾಡಿನ ಅಂದಿನ ಕಲೆ ಸಂಸ್ಕೃತಿಯ ಸಿರಿವಂತಿಕೆ ಮತ್ತು ಸರ್ಕಾರದ ಸತತ ಪರಿಶ್ರಮದ ಪರಿಣಾಮ 12 ಮತ್ತು 15ನೇ ಶತಮಾನದಲ್ಲಿ ಹೊಯ್ಸಳರ ವಿಷ್ಣುವರ್ಧನರ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ಮೂರು ದೇಗುಲಗಳನ್ನು ಮೃದು ಕಲ್ಲಿನಲ್ಲಿ ನಿರ್ಮಾಣವಾಗಿದೆ. ಇದರ ಕೆತ್ತನೆ ಅಂದಿನ ಕಲೆ ಸಂಸ್ಕೃತಿ ಮತ್ತು ಪರಂಪರೆಗೆ ಹಿಡಿದ ಕನ್ನಡಿಯಂತಿದೆ. ಇದೀಗ ಈ ಕಲೆ ಪರಂಪರೆ ಜಾಗತಿಕ ಮಟ್ಟಕ್ಕೆ ತಲುಪಲಿದ್ದು, ಇದರಿಂದ ಈ ಮೂರೂ ದೇಗುಲಗಳು ಜಾಗತಿಕ ಪ್ರವಾಸಿ ತಾಣವಾಗಲಿದೆ. ಈ ಮೂರು ದೇಗುಲಗಳಿಗೆ ಯೂನೆಸ್ಕೋ ಸ್ಥಾನಮಾನ ದೊರತಿರುವ ಪರಿಣಾಮ ಜಾಗತಿಕ ಮಟ್ಟದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಯೋಜನಾಬದ್ಧ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಿದೆ. ಈ ಬೆಳವಣಿಗೆಯಿಂದ ಸ್ಥಳೀಯರಿಗೂ ಹೆಚ್ಚಿನ ಅನುಕೂಲ ಆಗಲಿದೆ ಎಂದರು.
ಕನ್ನಡ ನಾಡಿನ ಕಲೆ ಸಂಸ್ಕೃತಿ, ಪರಂಪರೆಯನ್ನು ನಾಡಿನಾದ್ಯಂತ ಬಿಂಬಿಸುವಲ್ಲಿ ಬೇಲೂರು, ಹಳೆಬೀಡು, ಸೋಮನಾಥಪುರ ದೇಗುಲಗಳ ಪಾತ್ರ ಪ್ರಮುಖವಾದುದು, ಈ ದೇಗುಲಗಳಿಗೆ ಈ ಹಿಂದೆಯೇ ಜಾಗತಿಕ ಮಟ್ಟದ ಹಿರಿಮೆ ಸಿಗಬೇಕಿತ್ತು. ತಡವಾಗಿಯಾದರೂ ಈಗ ಯೂನೆಸ್ಕೋ ಈ ದೇಗುಲಗಳ ಹಿರಿಮೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆಸಿರುವುದು ಶ್ಲಾಘನೀಯ, ಇದಕ್ಕೆ ಕಾರಣರಾದ ಪ್ರವಾಸೋದ್ಯಮ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಾದ ಕಪಿಲ್ ಮೋಹನ್, ಪ್ರವಾಸೊದ್ಯಮ ಇಲಾಖೆ ನಿರ್ದೆಶಕರಾದ ರಾಮಪ್ರಸಾದ ಮನೋಹರ, ಪುರಾತತ್ವ ಇಲಾಖೆ ಆಯುಕ್ತ ದೇವರಾಜ ಅವರ ನೇತೃತ್ವದ ಅಧಿಕಾರಿಗಳ ಪರಿಶ್ರಮದ ಫಲವಾಗಿದೆ. ಈ ಜಾಗತಿಕ ಮನ್ನಣೆಗೆ ಶ್ರಮಿಸಿದ ಅಧಿಕಾರಿಗಳಿಗೆ, ಯುನೆಸ್ಕೋಗೆ ಹಾಗೂ ರಾಜ್ಯದ ಜನತೆಗೆ ಅಭಿನಂದನೆಗಳು ಸಲ್ಲಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಹಾಗೂ ಅಪರ ಜಿಲ್ಲಾದಿಕಾರಿ ಅನ್ನಪೂರ್ಣ ಎಂ. ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

MP Election: ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ… ಮೂವರು ಕೆಂದ್ರ ಸಚಿವರು ಕಣಕ್ಕೆ

Hosapete: ಬಸ್ ಪಲ್ಟಿ; 10ಕ್ಕೂ ಹೆಚ್ಚು ಜನರಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ