
ಗ್ರಾಪಂ ಸದಸ್ಯರಿಗೆ ಸರ್ಕಾರದಿಂದ ದೋಖಾ
Team Udayavani, Dec 1, 2021, 5:44 PM IST

ಹಾಸನ: ಜಲ ಜೀವನ್ ಮಿಷನ್ ಯೋಜನೆಯಡಿ ಮನೆ, ಮನೆಗೆ ಕುಡಿಯುವ ನೀರು ಪೂರೈಕೆ ಗ್ರಾಪಂಗಳ 15ನೇ ಹಣಕಾಸು ಆಯೋಗದ ಅನುದಾನವನ್ನೂ ಬಳಸಿಕೊಳ್ಳುವ ಮೂಲಕ ಸರ್ಕಾರ ಗ್ರಾಪಂ ಸದಸ್ಯರ ಅಧಿಕಾರವನ್ನೂ ಕಿತ್ತುಕೊಂಡು ಅವಮಾನ ಮಾಡಿದೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಪಂ ಸದಸ್ಯರು ತಮ್ಮ ಗ್ರಾಮದಲ್ಲಿ ಮೂಲ ಸೌಕರ್ಯ ಸಣ್ಣಪುಟ್ಟ ಕಾಮಗಾರಿಗಳನ್ನೂ ಮಾಡಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು ಜಲ ಜೀವನ್ ಮಿಷನ್ ಕಾಮಗಾರಿಯನ್ನು ರಾಜ್ಯ ಮಟ್ಟದಲ್ಲಿ ಜಿಲ್ಲೆಗೆ ಒಂದು ಪ್ಯಾಕೇಜ್ ಎಂದು ಟೆಂಡರ್ ಕರೆದು ಗುತ್ತಿಗೆದಾರರಿಂದ ಕಮೀಷನ್ ವಸೂಲಿಗೆ ನಿಂತಿದ್ದಾರೆ.
ಸರ್ಕಾರಕ್ಕೆ ಈ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಇಚ್ಛೆ ಇದ್ದರೆ ತಾಲೂಕು ಮಟ್ಟದಲ್ಲಿ ಟೆಂಡರ್ ಕರೆಯಬೇಕಾಗಿತ್ತು. ಗುತ್ತಿಗೆದಾರರ ಪೈಪೋಟಿಯಲ್ಲಿ ಕಾಮಗಾರಿಯನ್ನು ಪಡೆದು ತ್ವರಿತವಾಗ ಅನುಷ್ಠಾನಗೊಳಿಸುತ್ತಿದ್ದರು ಎಂದು ಹೇಳಿದರು. 140 ಕೋಟಿ ಅನ್ಯಾಯ: 2020 -21 ನೇ ಸಾಲಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಅರಕಲಗೂಡು ತಾಲೂಕು ಹೊರತುಪಡಿಸಿ ಜಿಲ್ಲೆಯ 6 ತಾಲೂಕುಗಳಲ್ಲಿ 279.52 ಕೋಟಿ ರೂ. ಕಾಮಗಾರಿಯನ್ನು ಟೆಂಡರ್ ಕರೆದಿದೆ.
ಅದರಲ್ಲಿ ಗ್ರಾಪಂಗಳ 15ನೇ ಹಣಕಾಸು ಆಯೋಗದ ಅನುದಾನ 90 ಕೋಟಿ ರೂ.ಗಳನ್ನು ಯೋಜನೆಗೆ ಬಳಸಿಕೊಂಡಿದೆ. ಹಾಗೆಯೇ 2021 – 22ನೇ ಸಾಲಿನಲ್ಲಿ 145 ಕೋಟಿ ರೂ. ಯೋಜನೆಗೆ ಗ್ರಾಪಂಗಳ 15ನೇ ಹಣಕಾಸು ಆಯೋಗದ ಅನುದಾನ 50 ಕೋಟಿ ರೂ.ಗಳನ್ನು ಬಳಸಿಕೊಂಡಿದೆ. ಅಂದರೆ ಗ್ರಾಪಂ ಸದಸ್ಯರು ತಮ್ಮ ಕ್ಷೇತ್ರದಲ್ಲಿ ಮಾಡಿಸಬಹುದಾಗಿದ್ದ 140 ಕೋಟಿ ರೂ.ಗಳನ್ನು ಯೋಜನೆಗೆ ಸರ್ಕಾರ ಬಳಿಸಿಕೊಂಡು ಗ್ರಾಪಂ ಸದಸ್ಯರಿಗೆ ಅನ್ಯಾಯ ಮಾಡಿದೆ.
ಇದನ್ನೂ ಓದಿ;- ಗೋಪಾಲಕೃಷ್ಣ ಯಾಕೆ ನನ್ನ ಕೊಲೆಗೆ ಸಂಚು ಹೂಡಿದರೋ ಗೊತ್ತಿಲ್ಲ: ಎಸ್.ಆರ್.ವಿಶ್ವನಾಥ್
ಪ್ರತಿ ಗ್ರಾಪಂ ಸದಸ್ಯನಿಗೆ 20 ಲಕ್ಷ ರೂ. ಅನುದಾನ ತಪ್ಪಿ ಹೋಗಿದೆ ಎಂದು ದೂರಿದರು. ಗ್ರಾಪಂ ಸದಸ್ಯರ ಹಕ್ಕು ಆಗಿರುವ ಗ್ರಾಪಂಗಳ 15ನೇ ಹಣಕಾಸು ಆಯೋಗದ ಅನುದಾನವನ್ನು ಬಳಸಿಕೊಳ್ಳದೆ ಪ್ರತಿ ಗ್ರಾಪಂ ಸದಸ್ಯ ಕನಿಷ್ಠ 10 ಲಕ್ಷ ರೂ. ಗಳ ಕಾಮಗಾರಿಯನ್ನು ತನ್ನ ಕ್ಷೇತ್ರದಲ್ಲಿ ಮಾಡಿಸುವ ಅನುದಾನ ನೀಡಿ ಸದಸ್ಯರಿಗೆ ಗೌರವ ಕೊಡಲಿ ಎಂದ ರೇವಣ್ಣ ಅವರು, ಕಮೀಷನ್ ಹೊಡೆಯುವ ಕುತಂತ್ರವನ್ನು ಸಚಿವರು ಬಿಡಲಿ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಹಾಸನದ ಚನ್ನಪಟ್ಟಣ ಕೆರೆ ಅಭಿವೃದ್ಧಿ ಹಾಗೂ ಸೌಂದಯಿìಕರಣಕ್ಕೆ ಮಂಜೂರಾಗಿದ್ದ 144 ಕೋಟಿ ರೂ.ಗಳನ್ನು ವಿವಿಧ ಪಾರ್ಕ್ ಹಾಗೂ ಕೆರೆಗಳ ಅಭಿವೃದ್ಧಿಯ ಹೆಸರಿನಲ್ಲಿ ಲೂಟಿ ಹೊಡೆಯಲಾಗುತ್ತಿದೆ. ಜಲಸಂಪನ್ಮೂಲ ಇಲಾಖೆಗಳ ಅಧಿಕಾರಿಗಳೂ ಗುತ್ತಿಗದಾರರೊಂದಿಗೆ ಶಾಮೀಲಾಗಿದ್ದಾರೆ. ವಿಧಾನ ಪರಿಷತ್ ಚುನಾವಣೆ ಮುಗಿದ ನಂತರ ಈ ಹಗರಣವನ್ನು ಬಯಲು ಮಾಡುವೆ ಎಂದು ಹೇಳಿದರು.
ಜಿಲ್ಲೆಗೆ ಐಐಟಿ ತಪ್ಪಿತು: ಹಾಸನಕ್ಕೆ ಐಐಟಿ ತರಬೇಕೆಂದು ಮೊದಲ ಪ್ರಯತ್ನ ಮಾಡಿದ್ದು ನಾನು. ಆದರೆ ಅದು ಧಾರವಾಡದ ಪಾಲಾಯಿತು. ಕೇಂದ್ರೀಯ ವಿವಿಯನ್ನು ಹಾಸನದಲ್ಲಿ ಸ್ಥಾಪಿಸುವ ಪ್ರಯತ್ನ ಮಾಡಿದೆ. ಆದೂ ಕಲುಬುರಗಿ ಪಾಲಾಯಿತು. ಎರಡೂ ರಾಷ್ಟ್ರೀಯ ಪಕ್ಷಗಳೂ ಹಾಸನ ಜಿಲ್ಲೆಗೆ ಅನ್ಯಾಯ ಮಾಡಿವೆ. ಬಹುಗ್ರಾಮ ಕುಡಿವ ನೀರಿನ 1500 ಕೋಟಿ ರೂ. ಪ್ರಸ್ತಾವನೆಯನ್ನೂ ಬಿಜೆಪಿ ಸರ್ಕಾರ ತಡೆ ಹಿಡಿದೆ. ಕುಡಿವ ನೀರಿಯ ಯೋಜನೆ ಕೇಳಿದರೆ ಬಿಜೆಪಿ ಸರ್ಕಾರ ಹಾಸನ ನಗರದ ಒಂದೇ ರಸ್ತೆಯಲ್ಲಿ 15 ಮದ್ಯದಂಗಡಿ ತೆರೆದು ಎಣ್ಣೆ ಭಾಗ್ಯವನ್ನು ನೀಡಿದೆ ಎಂದು ರೇವಣ್ಣ ಅವರು ದೂರಿದರು.
ಸೂರಜ್ ಗೆಲುವು ಖಚಿತ : ರೇವಣ್ಣ ವಿಶ್ವಾಸ
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ಸೂರಜ್ ಗೆಲುವು ನಿಶ್ಚಿತ. ಎಚ್ .ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಹಾಸನ ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಗಮನಿಸಿರುವ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳು ಜೆಡಿಎಸ್ ಅಭ್ಯರ್ಥಿ ಗೆಲ್ಲಿಸುವ ತೀರ್ಮಾನ ಮಾಡಿದ್ದಾರೆ ಎಂದು ಮಾಜಿ ಸಚಿವ ಎಚ್ .ಡಿ.ರೇವಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ ಅವರು ಮಾಡಿರುವ ಅಭಿವೃದ್ಧಿ ಕೆಲಸವನ್ನು ಜನರು ಸ್ಮರಿಸುತ್ತಿದ್ದಾರೆ. ಈ ಜಿಲ್ಲೆಯಲ್ಲಿ ದೇವೇಗೌಡರ ಕುಟುಂಬದ ರಾಜಕೀಯ ವಿರೋಧಿಗಳಿದ್ದಾರೆಯೇ ಹೊರತು ಜನರು ಜೆಡಿಎಸ್ ವಿರೋಧ ಮಾಡುವುದಿಲ್ಲ. ದೇವೇಗೌಡರು, ಕುಮಾರಸ್ವಾಮಿ ಅವರ ವರ್ಚಸ್ಸು, ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ ಅವರ ಕೆಲಸವನ್ನು ಜನರು ಗಮನಿಸಿ ಈ ಚುನಾವಣೆಯಲ್ಲಿ ಡಾ.ಸೂರಜ್ ರೇವಣ್ಣ ಅವರನ್ನು ಗೆಲ್ಲಿಸುತ್ತಾರೆ . ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ಸುಳ್ಳುಗಳಿಗೆ ಜನರು ಕಿವಿಗೊಡುವುದಿಲ್ಲ ಎಂದು ಹೇಳಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Server problem: ಸರ್ವರ್ ಸಮಸ್ಯೆ; ಪಡಿತರದಾರರ ಅಲೆದಾಟ

Alcohol: ಮದ್ಯ ಸೇವನೆ ಚಾಲೆಂಜ್-ಅರ್ಧ ಗಂಟೆಯಲ್ಲಿ 90 ಎಂಎಲ್‌ನ 10 ಪ್ಯಾಕೆಟ್ ಸೇವಿಸಿ ಸಾವು

POP free Ganeshotsav: ಪಿಒಪಿ ಮುಕ್ತ ಗಣೇಶೋತ್ಸವಕ್ಕೆ ಭಕ್ತರ ಸ್ಪಂದನೆ

Channarayapatna: ತಹಶೀಲ್ದಾರ್ ಕುರ್ಚಿ ಕಾಳಗ: ದಿನವೂ ಕಡತಕ್ಕೆ ಬದಲಾಗುತ್ತೆ ಸಹಿ

Aluru: ಸಿಡಿಮದ್ದು ಸ್ಫೋಟದಿಂದ ಮನೆಗಳಿಗೆ ಹಾನಿ