ನಾಳೆಯಿಂದ ಬಿತ್ತನೆ ಆಲೂಗಡ್ಡೆ ಮಾರಾಟ ಆರಂಭ

ರೈತರಿಗೆ ಹೊರೆಯಾಗದ ದರದಲ್ಲಿ ಮಾರಾಟ: ವರ್ತಕರಿಗೆ ಡೀಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಸೂಚನೆ

Team Udayavani, May 15, 2019, 2:38 PM IST

ಹಾಸನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಮತ್ತು ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ಚೇತನ್‌ಸಿಂಗ್‌ ರಾಥೋಡ್‌ ಅವರು ಬಿತ್ತನೆ ಆಲೂಗಡ್ಡೆ ಮಾರಾಟದ ಸಂಬಂಧ ವರ್ತಕರು ಮತ್ತು ರೈತರೊಂದಿಗೆ ಚರ್ಚಿಸಿದರು.

ಹಾಸನ: ನಗರದ ಎಪಿಎಂಸಿ ಪ್ರಾಂಗಣದಲ್ಲಿ ಬಿತ್ತನೆ ಆಲೂಗಡ್ಡೆಯನ್ನು ಮೇ16 ರಿಂದ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಬಿತ್ತನೆ ಬೀಜ ತರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳು, ಆಲೂಗಡ್ಡೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು, ರೈತರು ಮತ್ತು ವರ್ತಕರ ಸಭೆಯಲ್ಲಿ ಮೇ16 ರಿಂದ ಎಪಿಎಂಸಿಯಲ್ಲಿ ರೈತರಿಗೆ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ ಪ್ರಾರಂಭಿಸಲು ತೀರ್ಮಾನಿಸಲಾಯಿತು.

ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಕುರಿತು ವಿವಿಧ ತಾಲೂಕು ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಯವರು, ಆಲೂಗಡ್ಡೆ ಬಿತ್ತನೆ ಬೀಜಕ್ಕೆ ಶೇ.50ರಷ್ಟು ಸಬ್ಸಿಡಿ ನೀಡಲಾಗುವುದು. ಈ ಕುರಿತು ರೈತರಿಗೆ ಕರಪತ್ರಗಳನ್ನು ವಿತರಿಸುವುದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಯವರು ಸೂಚನೆ ನೀಡಿದರು.

ಎಪಿಎಂಸಿ ಪ್ರಾಂಗಣದಲ್ಲಿ ಆಲೂ ಬೀಜ ಮಾರಾಟ: ಹಾಸನ ಎಪಿಎಂಸಿ ಪ್ರಾಂಗಣದಲ್ಲಿ ಆಲೂಗಡ್ಡೆ ಮಾರಾಟ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಬಿತ್ತನೆ ಆಲೂಗಡ್ಡೆ ಮಾರಾಟದ ವ್ಯವಸ್ಥೆ ಮಾvಲಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟ ನಡೆಯಲಿದೆ. ಮಾರಾಟದ ಸಂದರ್ಭದಲ್ಲಿ ಗಲಾಟೆಗೆ ಆಸ್ಪದ ನೀಡದಂತೆ ಎಚ್ಚರ ವಹಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.

ದರ ನಿಗದಿ ಕುರಿತು ಚರ್ಚೆ: ದರ ನಿಗದಿಗೆ ಸಂಬಂಧಿಸಿದಂತೆ ರೈತರು ಮತ್ತು ವರ್ತಕರ ಜೊತೆ ಚರ್ಚೆ ನಡೆಸಿದ ಜಿಲ್ಲಾಧಿಕಾರಿಯವರು ರೈತರಿಗೆ ಹೊರೆಯಾಗದ ರೀತಿಯಲ್ಲಿ ದರ ನಿಗದಿ ಮಾಡುವುದು ನಮ್ಮ ಉದ್ದೇಶವಾಗಿದೆ. ಇದಕ್ಕೆ ವರ್ತಕರು ಸಹಕರಿಸಬೇಕು. ರೈತರಿಂದ ಯಾವುದೇ ರೀತಿಯ ದೂರುಗಳು ಬಾರದಂತೆ ಎಚ್ಚರ ವಹಿಸಿ ವರ್ತಕರು ಬಿತ್ತನೆ ಆಲೂಗಡ್ಡೆ ಮಾರಾಟ ಮಾಡಬೇಕು ಎಂದು ಸೂಚಿಸಿದರು.

ರೈತರಿಗೆ ಪ್ರೋತ್ಸಾಹಧನ: ಆಲೂಗಡ್ಡೆ ಬೆಳೆ ಪ್ರೋತ್ಸಾಹಧನ ಪಡೆಯಲು ರೈತರು ಎಪಿಎಂಸಿಗೆ ಆಲೂಗಡ್ಡೆ ಖರೀದಿಗೆ ಬರುವ ಸಮಯದಲ್ಲಿ ಅರ್ಜಿ ನಮೂನೆ, ಪಹಣಿ, ಆಧಾರ್‌, ಬ್ಯಾಂಕ್‌ ಖಾತೆ ಸಂಖ್ಯೆ (ಬ್ಯಾಂಕ್‌ ಪಾಸ್‌ ಪುಸ್ತಕದ ನಕಲು), ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ನಕಲು ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು ಎಂದು ಹೇಳಿದ‌ರು.

ಆಲೂಗಡ್ಡೆ ಬೆಳೆಗೆ ಅಗತ್ಯವಿರುವ ಸಸ್ಯ ಸಂರಕ್ಷಣೆ ಔಷಧಿಗಳು ಹಾಗೂ ರಸಾಯನಿಕ ಗೊಬ್ಬರ ಎಪಿಎಂಸಿ ಆವರಣದಲ್ಲೇ ರೈತರಿಗೆ ದೊರೆಯುವಂತೆ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಪಿಎಂಸಿ ಆವರಣದಲ್ಲಿ ಕಂದಾಯ ಇಲಾಖೆಯಿಂದ ಸಂಬಂಧಪಟ್ಟ ಕಂದಾಯ ವೃತ್ತದ ಅಧಿಕಾರಿಗಳ ಮೂಲಕ ರೈತರಿಗೆ ಪಹಣಿ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರು ತಿಳಿಸಿದರು.

ಪೊಲೀಸ್‌ ಬಂದೋಬಸ್ತ್: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನ್‌ಸಿಂಗ್‌ ರಾಥೋಡ್‌ ಮಾತನಾಡಿ, ಆಲೂಗಡ್ಡೆ ಬಿತ್ತನೆ ಬೀಜ ವಿತರಣೆ ಸಂದರ್ಭದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗುವುದು. ವರ್ತಕರು ಒಂದು ಸಮಿತಿಯನ್ನು ರಚನೆ ಮಾಡಿ ಆ ಮೂಲಕ ರೈತರ ವಾಗ್ವಾದ ಹಾಗೂ ಇನ್ನಿತರ ಸಮಸ್ಯೆಗಳು ಕಂಡು ಬಂದಲ್ಲಿ ಅವುಗಳನ್ನು ಬಗೆಹರಿಸಲು ಸಹಕರಿಸಿ ಎಂದು ಮನವಿ ಮಾಡಿದರು.

ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಂಜುನಾಥ್‌, ತಹಶೀಲ್ದಾರ್‌ ಶ್ರೀನಿವಾಸಯ್ಯ, ವಿಜ್ಞಾನಿಗಳಾದ ಸಂಧ್ಯಾ, ಸೌಮ್ಯ, ಜಂಟಿ ಕೃಷಿ ನಿರ್ದೇಶಕ‌ ಮಧುಸೂದನ್‌ ವರ್ತಕರ ವಿವಿಧ ಪದಾಧಿಕಾರಿಗಳು ಹಾಗೂ ರೈತರು ಸಭೆಯಲ್ಲಿ ಭಾಗವಹಿಸಿದ್ದರು.

ತೋಟಗಾರಿಕೆ ಇಲಾಖೆಯಿಂದ ಮಾಹಿತಿ: ತೋಟಗಾರಿಕೆ ಇಲಾಖೆ ವತಿಯಿಂದ ಎಪಿಎಂಸಿ ಆವರಣದಲ್ಲಿ ತೆರೆಯಲಾಗಿರುವ ಮಾಹಿತಿ, ಸಲಹಾ ಕೇಂದ್ರದ ಅಧಿಕಾರಿಗಳನ್ನು ಅಯಾಯ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸ ಬಹುದು. ತಾಂತ್ರಿಕ ವರಗಳಿಗೆ ತೋಟಗಾರಿಕೆ ಉಪ ನಿರ್ದೇಶಕರು, ಹಾಸನ ದೂ:08172-268387, 9448999223, ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಆಲೂರು : 08170- 218981, 8105860661, ಅರಕಲಗೂಡು :08175 -221491, 7019205501, ಅರಸೀಕೆರೆ: 08174 -231808, 9632745241,ಬೇಲೂರು: 08177 -222070, 991 6392080, ಚನ್ನರಾಯಪಟ್ಟಣ : 08176-252282, 9448238920, ಹಾಸನ : 08172-262390, 990 0238655 ಹೊಳೆನರಸೀ ಪುರ: 08175-272970, 8453563540.ನ್ನು ಸಂಪ ರ್ಕಿಸಬಹುದೆಂದು ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ