
ಬಿಜೆಪಿ ಲೋಕಾ ಅಸ್ತ್ರ: ಕಾಂಗ್ರೆಸ್‌ನ 59 ಪ್ರಕರಣ ಲೋಕಾಯುಕ್ತಕ್ಕೆ: ಬೊಮ್ಮಾಯಿ
Team Udayavani, Jan 26, 2023, 6:50 AM IST

ಹಾವೇರಿ/ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಾಗೆಯೇ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಜನರ ಬಳಿಗೆ ಹೋಗುವ ಮುನ್ನ ಲೋಕಾಯುಕ್ತ ಸೇರಿದಂತೆ ತನಿಖಾ ಸಂಸ್ಥೆಗಳ ಬಾಗಿಲು ಬಡಿಯುತ್ತಿವೆ.
ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಕಾಲದ 59 ಭ್ರಷ್ಟಾಚಾರ ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ನೀಡುತ್ತಿದ್ದೇವೆ. ಈ ಬಗ್ಗೆ ತನಿಖೆ ನಡೆಯಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಂಬ್ ಹಾಕಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಕೂಡ ರಮೇಶ್ ಜಾರಕಿಹೊಳಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಗೆ ಮತದಾರರಿಗೆ ಆಮಿಷ ಆರೋಪ ಸಂಬಂಧ ದೂರು ನೀಡಿದ್ದಾರೆ.
ಹಿರೇಕೆರೂರಿನಲ್ಲಿ ಮಾತನಾಡಿದ ಸಿಎಂ, ಈ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ 59 ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ನೀಡುತ್ತಿದ್ದೇವೆ. ಈ ಬಗ್ಗೆ ತನಿಖೆ ನಡೆಯಲಿ. ನಿಮ್ಮ (ಕಾಂಗ್ರೆಸ್)ಬಣ್ಣ-ಮುಖವಾಡ ಕಳಚಿ ಭ್ರಷ್ಟಾಚಾರದ ಮುಖ ರಾಜ್ಯದ ಜನತೆಗೆ ಗೊತ್ತಾಗಲಿದೆ ಎಂದು ಹರಿಹಾಯ್ದರು.
ಸಿದ್ದು ಸರಕಾರದಲ್ಲಿ ನೀರಾವರಿ, ವಿದ್ಯುತ್, ಬಿಡಿಎ ಹೀಗೆ ಎಲ್ಲೆಡೆ ಭ್ರಷ್ಟಾಚಾರ ನಡೆದಿದೆ. ಸುಮಾರು 59ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿತ್ತು. ಅದನ್ನು ಮುಚ್ಚಿ ಹಾಕಲು ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿ ಹಾಕಿದಿರಿ. ನಿಮ್ಮ ಕೈಗೊಂಬೆಯಾಗಿ ಎಸಿಬಿ ರಚಿಸಿದಿರಿ. ಈಗ ಕೋರ್ಟ್ ತೀರ್ಮಾನದಂತೆ ಲೋಕಾಯುಕ್ತ ಆರಂಭಿಸಿದ್ದೇವೆ. ಈ 59 ಪ್ರಕರಣಗಳನ್ನು ಲೋಕಾಯುಕ್ತಕ್ಕೆ ನೀಡುತ್ತೇವೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಸರಕಾರ ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಕೂಡಿ, ಎಲ್ಲ ಸೌಭಾಗ್ಯಗಳನ್ನು ದೌರ್ಭಾಗ್ಯ ಮಾಡಿತು. ಮಕ್ಕಳ ಹಾಸಿಗೆ, ದಿಂಬನ್ನೂ ಬಿಡಲಿಲ್ಲ. ಸಣ್ಣ ನೀರಾವರಿ ಯೋಜನೆಯಡಿ ಕೆಲಸ ಮಾಡದೆ ಒಂದೇ ತಾಲೂಕಿನಲ್ಲಿ 40 ಕೋಟಿ ರೂ. ಬಿಲ್ ಹಾಕಿದರು. ತನಿಖಾ ಅಧಿಕಾರಿಗಳು ಸಸ್ಪೆಂಡ್ ಆಗಿದ್ದರು ಎಂದರು.
ಬೊಮ್ಮಾಯಿ ಭ್ರಷ್ಟಾಚಾರದ ಪಿತಾಮಹ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ದೇಶದ ಮೊದಲ ಭ್ರಷ್ಟಾಚಾರದ ಜೀಪ್ ಹಗರಣ ಪ್ರಾರಂಭವಾಗಿದ್ದು ಕಾಂಗ್ರೆಸ್ ಪಕ್ಷದಿಂದ. ಅಂದಿನ ರಕ್ಷಣ ಸಚಿವರು ರಾಜೀನಾಮೆ ನೀಡಬೇಕಾಗಿ ಬಂತು.
ಹೊಸ ನಾಟಕ
ಬಿಜೆಪಿ ಹಾಗೂ ಸರಕಾರದ ಸಚಿವರು ನಮ್ಮ ಸರಕಾರದ ವಿರುದ್ಧ ಹುಡುಕಾಡಿ ಹುಡುಕಾಡಿ ಆರೋಪ ಮಾಡುತ್ತಿದ್ದಾರೆ. ಅವುಗಳಲ್ಲಿ ಬಹಳಷ್ಟು ಪ್ರಕರಣಗಳ ತನಿಖೆ ನಡೆಸಿ ಕೈ ಬಿಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇವೆಲ್ಲ ಗೊತ್ತಿದ್ದರೂ ತಮ್ಮ ವಿರುದ್ಧದ ಆರೋಪಗಳನ್ನು ಮುಚ್ಚಿಹಾಕಲು ಹೊಸ ನಾಟಕ ಆರಂಭಿಸಿದ್ದಾರೆ. ನಮ್ಮ ವಿರುದ್ಧದ ಎಲ್ಲ ಆರೋಪಗಳ ಬಗ್ಗೆ ಯಡಿಯೂರಪ್ಪ ಸರಕಾರವೇ ತನಿಖೆ ನಡೆಸಿ ಕೈ ಬಿಟ್ಟಿದೆ. ಇಷ್ಟು ದಿನ ಸುಮ್ಮನಿದ್ದು ಚುನಾವಣೆ ಬಂತು ಎಂದು ಈಗ ಮಾತನಾಡಿದರೆ ಜನತೆಗೆ ಗೊತ್ತಾಗುವುದಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವಿಶೇಷ ತನಿಖಾ ತಂಡಕ್ಕೆ ಮನವಿ
ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ನೇರವಾಗಿ ಸಿಐಡಿ ಡಿವೈಎಸ್‌ಪಿ ಶಂಕರ್ ಗೌಡ ಪಾಟೀಲ್ ಹೆಸರನ್ನು ಪ್ರಸ್ತಾವಿಸಿ 76 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಇದರ ತನಿಖೆಗಾಗಿ ವಿಶೇಷ ತನಿಖಾ ತಂಡದ ರಚಿಸಲು ನ್ಯಾಯಾಲಯಕ್ಕೆ ಮನವಿ ಮಾಡಬೇಕು ಎಂದು ಸಿಐಡಿ ಮುಖ್ಯಸ್ಥರನ್ನು ಕಾಂಗ್ರೆಸ್ ಕೇಳಿಕೊಂಡಿದೆ.
ಟಾಪ್ ನ್ಯೂಸ್
