ಆಂಗ್ಲ ಶಿಕ್ಷಣದಿಂದ ಬದುಕು ಸುಂದರ ಎನ್ನೋದು ಭ್ರಮೆ

ಕಿಟೆಲ್ನಂತಹ ಮೇಧಾವಿಯಿಂದ ಕನ್ನಡ ಭಾಷಾ ನಿಘಂಟು ರಚನೆ •ಆಂಗ್ಲ ಶಾಲೆ ಆರಂಭಿಸುವ ಯೋಜನೆ ಸರ್ಕಾರ ಕೈಬಿಡಲಿ

Team Udayavani, May 8, 2019, 1:18 PM IST

ಹಾವೇರಿ: ಕನ್ನಡ ಸಾಹಿತ್ಯ ಪರಿಷತ್ತಿನ 105ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿದರು.

ಹಾವೇರಿ: ಬದುಕಿನ ಸ್ಥಿತ್ಯಂತರಗಳನ್ನು ಸಮರ್ಥವಾಗಿ ಎದುರಿಸುವ ಮನೋಭಾವ ಕೇವಲ ಮಾತೃಭಾಷೆಯ ಶಿಕ್ಷಣದಿಂದ ಸಾಧ್ಯ ಎಂದು ನಿವೃತ್ತ ಪ್ರೊ| ಪ್ರೇಮಾನಂದ ಲಕ್ಕಣ್ಣನವರ ಹೇಳಿದರು.

ನಗರದ ರಾಚೋಟೇಶ್ವರ ಪಪೂ ಕಾಲೇಜಿನಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 105ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂಗ್ಲಿಷ್‌ ಶಿಕ್ಷಣದಿಂದ ಬದುಕು ಸುಂದರವಾಗುತ್ತದೆ ಎನ್ನುವುದು ಕೇವಲ ಭ್ರಮೆ. ಭಾರತೀಯರಿಗೆ ಹುಸಿ ಆಸೆಗಳನ್ನು ತೋರಿಸಿ ಮೆಕಾಲೆ ಇಂಗ್ಲಿಷ್‌ ಶಿಕ್ಷಣವನ್ನು ಆರಂಭಿಸಿ, ನಮ್ಮ ಭಾಷೆಯೊಂದಿಗೆ ನಮ್ಮ ಭವ್ಯ ಸಂಸ್ಕೃತಿ, ಪರಂಪರೆ ಅವನತಿ ಹೊಂದಲು ಕಾರಣವಾಗಿದೆ. ಅದೇ ಕಿಟೆಲ್ನಂತಹ ಮೇಧಾವಿ ಕನ್ನಡ ಭಾಷಾ ನಿಘಂಟನ್ನು ರಚಿಸಿ ಕನ್ನಡಕ್ಕೆ ಅದ್ಭುತ, ಅನನ್ಯ ಕೊಡುಗೆ ನೀಡಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಶಿಕ್ಷಣ ಮಾಧ್ಯಮವಾದರೆ, ವೈಚಾರಿಕ ಚಿಂತನೆಯ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆ ಆರಂಭಿಸುತ್ತಿದೆ. ಆದರೆ, ವಾಸ್ತವವಾಗಿ ಉತ್ತಮ ಇಂಗ್ಲಿಷ್‌ ಕಲಿಸುವ ಕೌಶಲದ ಶಿಕ್ಷಕರ ಕೊರೆತೆ ಇರುವುದು ಕಟು ಸತ್ಯ. ಮೊದಲು ಶಿಕ್ಷಕರಿಗೆ ಉತ್ತಮ ತರಬೇತಿ ನೀಡದೇ ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವುದು ಮೂರ್ಖತನದ ಪರಮಾವಧಿ. ಸರ್ಕಾರ ಈ ನಿಟ್ಟಿಯಲ್ಲಿ ಚಿಂತಿಸಬೇಕು. ಆಂಗ್ಲಭಾಷಾ ಶಾಲೆಗಳನ್ನು ಆರಂಭಿಸುವ ಯೋಜನೆ ಕೈಬಿಡಬೇಕು ಎಂದರು.

ಹಿರಿಯ ಸಾಹಿತಿ ಗಂಗಾಧರ ನಂದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ ಉಳಿಸುವುದಕ್ಕಾಗಿ ಹಲವಾರು ಮಹನೀಯರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಕನ್ನಡದ ನಂದಾ ದೀಪ ಹಚ್ಚಿ ಹೋಗಿದ್ದಾರೆ. ಇಂಗ್ಲಿಷ್‌ ವ್ಯಾಮೋಹವನ್ನು ತೊರೆದು ನಮ್ಮತನದ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಮಹತ್ತರ ಜವಾಬ್ದಾರಿಯನ್ನು ಪಾಲಿಸಬೇಕಾದುದ್ದು ನಮ್ಮ ಕರ್ತ್ಯವ್ಯ ಎಂದರು.

ನಿವೃತ್ತ ಶಿಕ್ಷಕ ಸಿ.ಎಸ್‌. ಮರಳಿಹಳ್ಳಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್‌ ಮತ್ತು ಸರ್‌ ಎಂ. ವಿಶ್ವೇಶ್ವರಯ್ಯನವರ ದೂರದರ್ಶಿತ್ವದ ಫಲವಾಗಿ ಸ್ಥಾಪನೆಯಾಗಿ, ಇಂದು ವಾಮನ ಮೂರ್ತಿಯಿಂದ ತ್ರಿವಿಕ್ರಮ ಸ್ವರೂಪವಾಗಿ ಬೆಳೆದು ನಿಂತಿದೆ. ಇಂಥ ಸಂಸ್ಥೆಗೆ ಕನ್ನಡಿಗರಾದ ನಾವು ಪ್ರತಿನಿಧಿಯಾಗಿ ಕಸಾಪದ ಚಟುವಟಿಕೆಗಳಿಗೆ ಸಹಾಯ ಸಹಕಾರ ನೀಡಬೇಕಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಅಧ್ಯಕ್ಷ ಎಚ್.ಬಿ. ಲಿಂಗಯ್ಯ ಮಾತನಾಡಿ, ಜಿಲ್ಲಾ ಕಸಾಪವು ನಿರಂತರವಾಗಿ ಹಲವಾರು ಸಾಹಿತ್ಯಿಕ ಚಟುವಟಿಕೆ ಹಮ್ಮಿಕೊಳ್ಳುತ್ತಿದೆ. ಪ್ರತಿ ತಾಲೂಕಿನಲ್ಲಿ ನಾಡಹಬ್ಬ, ತಾಲೂಕು ಸಮ್ಮೇಳನ, ಜಿಲ್ಲಾ ಸಮ್ಮೇಳನಗಳು ನಡೆಯುತ್ತಿವೆ. ಸರ್ಕಾರವು ಆಂಗ್ಲ ಮಾಧ್ಯಮ ಶಾಲೆ ತೆರೆಯುವುದಕ್ಕೆ ಕಸಾಪವು ತೀವ್ರವಾಗಿ ಖಂಡಿಸಿದ್ದು, ಸದ್ಯದಲ್ಲೇ ಪ್ರತಿಭಟನೆ ಸಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಹುಕ್ಕೇರಿಮಠ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕಸಾಪದ ಸಂಸ್ಥಾಪನಾ ದಿನಾಚರಣೆಯು ನಮ್ಮೆಲ್ಲರ ಆತ್ಮಾವಲೋಕನದ ಸಮಯವಾಗಿದ್ದು, ಕನ್ನಡನಾಡಿನಲ್ಲಿ ಕನ್ನಡವೇ ಕಳವಳಕಾರಿ ಸ್ಥಿತಿಯಲ್ಲಿದೆ. ನಮ್ಮನ್ನು ಆಳುವ ಜನಪ್ರತಿನಿಧಿಗಳು ಮತ್ತು ಕನ್ನಡದ ಸ್ವಾಮಿ ಸಂತರೆ ಆಂಗ್ಲ ಮಾಧ್ಯಮದ ಶಾಲೆಗಳನ್ನು ತೆಗೆದು ಶಿಕ್ಷಣವನ್ನು ವ್ಯಾಪಾರಿಕರಣಗೊಳಿಸಿದ್ದಾರೆ. ವೇದಿಕೆಯ ಮೇಲೆ ಕನ್ನಡದ ಬಗ್ಗೆ ಭಾಷಣ ಮಾಡುವ ಸಾಹಿತಿಗಳು, ಕನ್ನಡಪರ ಸಂಘಟನೆ ಸದಸ್ಯರು, ಕನ್ನಡ ಶಾಲೆಯ ಶಿಕ್ಷಕರೇ ತಮ್ಮ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮದ ಶಾಲೆಗೆ ಸೇರಿದರೆ, ಕನ್ನಡ ಹೇಗೆ ಉಳಿದೀತು ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಸಾಹಿತ್ಯ ಶ್ರೀ ಪ್ರಶಸ್ತಿ ಪಡೆದ ಹಿರಿಯ ಬಂಡಾಯ ಸಾಹಿತಿ ಸತೀಶ ಕುಲಕರ್ಣಿ, ಇತ್ತೀಚಿಗೆ ಕನ್ನಡ ಸಾಹಿತ್ಯದಲ್ಲಿ ಡಾಕ್ಟರೆಟ್ ಪಡೆದ ಡಾ| ಪುಷ್ಪಾ ಶಲವಡಿಮಠ, ನಿವೃತ್ತ ಆರೋಗ್ಯ ನಿರೀಕ್ಷಕ ಶಂಕರ ಸುತಾರ, ಸಮಾಜ ಸೇವಕ ವಿವೇಕಾನಂದ ಬೆಂಡಿಗೇರಿ ಅವರನ್ನು ಕಸಾಪದ ವತಿಯಿಂದ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಹಿರಿಯ ಸಾಹಿತಿ ವಿರುಪಾಕ್ಷಪ್ಪ ಕೋರಗಲ್ಲ, ಪಿ.ಡಿ. ಶಿರೂರ, ಹನುಮಂತಗೌಡ ಗೊಲ್ಲರ, ಜಿ.ಎಂ. ಮಠದ, ಎಸ್‌.ವಿ. ಹಿರೇಮಠ, ವೈ.ಎಂ. ಬೇಲಿ, ದಾಕ್ಷಾಯಿಣಿ ಗಾಣಗೇರ, ಲಲಿತಾ ಹೊರಡಿ, ಅಮೃತಮ್ಮ ಶೀಲವಂತರ, ವಿ.ವಿ. ಹರಪನಹಳ್ಳಿ, ಎಸ್‌.ಎನ್‌. ದೊಡ್ಡಗೌಡರ, ಬಿ.ಪಿ. ಶಿಡೇನೂರ, ಪ್ರಭು ಹಿಟ್ನಳ್ಳಿ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ