
ಸಿಐಡಿ ತನಿಖಾಧಿಕಾರಿಗೆ 76 ಲಕ್ಷ ರೂ. ಲಂಚ: ಕಿಂಗ್‌ಪಿನ್ ಹೊಸ ಬಾಂಬ್
ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ
Team Udayavani, Jan 25, 2023, 7:05 AM IST

ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಿಂದ ಪಾರು ಮಾಡಲು ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರಿಗೆ 76 ಲಕ್ಷ ರೂ. ನೀಡಿರುವುದಾಗಿ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಲೋಕಾಯುಕ್ತರಿಗೆ ದೂರು ನೀಡಿದ್ದು, ಇಡೀ ಪ್ರಕರಣಕ್ಕೆ ಹೊಸ ತಿರುವು ದೊರೆತಂತಾಗಿದೆ.
ಈ ದೂರಿನೊಂದಿಗೆ 8.4 ನಿಮಿಷ ಅವಧಿಯ ಆಡಿಯೋದ ಪೆನ್‌ಡ್ರೈವ್ ದಾಖಲೆಯಾಗಿ ನೀಡಿದ್ದಾನೆ. ಜತೆಗೆ ಈ ಆಡಿಯೋವನ್ನು “ಆರ್.ಡಿ. ಪಾಟೀಲ ಯುವ ಬ್ರಿಗೇಡ್’ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲೂ ಅಪ್‌ಲೋಡ್ ಮಾಡಿದ್ದಾನೆ.
ಶಂಕರಗೌಡ ಪಾಟೀಲ ಅವರು ಪ್ರಕರಣ ಮುಂದುವರಿಸದಿರಲು, ಅದರಿಂದ ಪಾರು ಮಾಡಲು ಮೂರು ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಆದರೆ ನನ್ನಿಂದ ಅಷ್ಟು ಹಣ ಹೊಂದಿಸಲು ಸಾಧ್ಯವಾಗುವುದಿಲ್ಲ. ಬೇಕಿದ್ದರೆ 76 ಲಕ್ಷ ರೂ. ಕೊಡುತ್ತೇನೆ’ ಎಂದು ಹೇಳಿ ಬ್ಯಾಂಕ್ ಆಫ್ ಬರೋಡ ಶಾಖೆಯಿಂದ ಹಣ ಡ್ರಾ ಮಾಡಿಸಿಕೊಂಡು ನನ್ನ ಅಳಿಯ ಶ್ರೀಕಾಂತ ಮೂಲಕ ಅವರಿಗೆ ತಲುಪಿಸಿದ್ದೇನೆ. ಜಾಮೀನು ಪಡೆದು ಹೊರಬಂದ ಬಳಿಕವೂ ಶಂಕರಗೌಡ ಹಾಗೂ ಅವರ ಅ ಧೀನ ಸಿಬ್ಬಂದಿ ಮನೆಗೆ ಬಂದು ಉಳಿದ ಹಣ ನೀಡುವಂತೆ ಕಿರುಕುಳ ನೀಡಿದ್ದಾರೆ’ ಎಂದು ಫೇಸ್‌ಬುಕ್ ವಿಡಿಯೋದಲ್ಲಿ ಆರೋಪ ಮಾಡಿರುವುದು ಈಗ ದೊಡ್ಡ ಸದ್ದು ಮಾಡುತ್ತಿದೆ.
ಆಡಿಯೋದಲ್ಲಿ ಏನಿದೆ?: ಎಂಟು ನಿಮಿಷ ನಾಲ್ಕು ಸೆಕೆಂಡ್ ಅವ ಧಿಯ ವಿಡಿಯೋದಲ್ಲಿ ಆರ್.ಡಿ. ಪಾಟೀಲ ಮಾತು ಮಾತ್ರ ಸ್ಪಷ್ಟವಾಗಿ ಕೇಳಿಸುತ್ತದೆ. ಎದುರಿಗೆ ಮಾತನಾಡಿರುವ ವ್ಯಕ್ತಿಯ ಧ್ವನಿ ಅಸ್ಪಷ್ಟವಾಗಿದೆ. ಏನಾದರೂ ಮಾಡಿ, ನನಗೆ ಹೊರಗೆ ಹೋಗುವಂತೆ ಮಾಡಿ. ನನಗೆ ಪ್ರತಿದಿನವೂ ಮಹತ್ವದ ದಿನವಾಗಿದೆ. ನನಗೆ ಲಂಡನ್‌ನಲ್ಲಿ ಭಕ್ತರೊಬ್ಬರು ಇದ್ದಾರೆ. ಅವರಿಂದ ಹಣದ ವ್ಯವಸ್ಥೆ ಮಾಡುತ್ತೇನೆ ಎಂದಿದ್ದಾನೆ.
ಈ ನಡುವೆ ಕಲಬುರಗಿ ಲೋಕಾಯುಕ್ತ ಎಸ್‌ಪಿ ಎ.ಆರ್. ಕರ್ನೂಲ್ ಅವ ರು, ಆರ್.ಡಿ. ಪಾಟೀಲ ದೂರನ್ನು ಲೋಕಾಯುಕ್ತರಿಗೆ ಕಳುಹಿಸಿರುವ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಆರೋಪ ನಿರಾಕರಣೆ
ಈ ಎಲ್ಲ ಆರೋಪಗಳನ್ನು ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ ಅಲ್ಲಗಳೆದಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ಪಾಟೀಲನೊಂದಿಗೆ ನಾನು ಮಾತನಾಡಿರುವುದು ಎನ್ನಲಾದ ಘಟನೆ ನಡೆದಿದ್ದು ಕಳೆದ ಜುಲೈನಲ್ಲಿ. ಈ ಆರೋಪದ ಬಗ್ಗೆ ಎಸಿಬಿಯವರೂ ಈಗಾಗಲೇ ತನಿಖೆ ನಡೆಸಿ ಇದರಲ್ಲಿ ಏನೂ ಹುರುಳಿಲ್ಲ ಎಂದು ಕೈಬಿಟ್ಟಿದ್ದಾರೆ. ತನಿಖಾ ಧಿಕಾರಿಗಳ ನೈತಿಕತೆ ಕುಗ್ಗಿಸಲು ಹಾಗೂ ಜನರಲ್ಲಿ ಸುಖಾಸುಮ್ಮನೆ ತನಿಖೆ ಕುರಿತು ಅನುಮಾನ ಹುಟ್ಟಿಸಲು ಹೂಡಿರುವ ತಂತ್ರ ಇದು. ನನಗೆ ಹಲವು ಬಾರಿ ತನ್ನ ಹಿಂಬಾಲಕರನ್ನು ಛೂಬಿಟ್ಟು ಹಲ್ಲೆ ಮಾಡಲೂ ಯತ್ನಿಸಿದ್ದ. ಇದೆಲ್ಲವನ್ನೂ ಎದುರಿಸಿ ಪ್ರಕರಣವನ್ನು ಒಂದು ಹಂತಕ್ಕೆ ತಂದಿರುವ ತೃಪ್ತಿ ನಮಗಿದೆ ಎಂದಿದ್ದಾರೆ.
ತನಿಖೆ ಬಳಿಕ ಕ್ರಮ:ಸಿಎಂ
ಆರ್.ಡಿ.ಪಾಟೀಲ ವಿಚಾರದಲ್ಲಿ, ಆತನೇ ಬಿಡುಗಡೆ ಮಾಡಿರುವ ಹಣ ಬೇಡಿಕೆಯ ವಿಚಾರದ ವಿಡಿಯೋ ಕುರಿತು ಪೊಲೀಸ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಈ ವೇಳೆ ಅಧಿಕಾರಿಯದ್ದು ತಪ್ಪು ಎಂದು ತಿಳಿದುಬಂದರೆ ಖಂಡಿತವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪಿಎಸ್‌ಐ ಹಗರಣದ ತನಿಖೆ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಡೆಯುತ್ತಿದೆ. ನಾವು ಏನು ಹೇಳಲಿಕ್ಕೆ ಆಗುವುದಿಲ್ಲ. ಆದರೆ, ಮೊದಲು ನಾವು ವಿಡಿಯೋ ನೋಡೋಣ., ಆಡಿಯೋ ಕೇಳ್ಳೋಣ. ಬಳಿಕ ಸತ್ಯಾಸತ್ಯತೆ ತಿಳಿದು ಕ್ರಮದ ಬಗ್ಗೆ ವಿಚಾರ ಮಾಡೋಣ ಎಂದರು.
ಟಾಪ್ ನ್ಯೂಸ್
