
ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಖಾತ್ರಿ
ಉತ್ತರ-ದಕ್ಷಿಣ ಮತ ಕ್ಷೇತ್ರದಲ್ಲೂ "ಹಸ್ತ'ಕ್ಕೆ ಅಧಿಕ ಮತ |ಅಧಿಕಾರ ಹಿಡಿಯುವ ಬಿಜೆಪಿ ನಾಯಕರದ್ದು ತಿರುಕನ ಕನಸು
Team Udayavani, Sep 13, 2021, 3:27 PM IST

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆ ಅತಂತ್ರ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದ್ದು, ಇದಕ್ಕೆ ಸ್ಥಳೀಯ ಜೆಡಿಎಸ್ ನಾಯಕರು ಒಲವು ಹೊಂದಿದ್ದಾರೆ. ಎರಡು ಪಕ್ಷಗಳ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ರವಿವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಈ ಬಗ್ಗೆ ಸ್ಥಳೀಯ ಜೆಡಿಎಸ್ ಮುಖಂಡರೊಂದಿಗೆ ಮಾತುಕತೆ ನಡೆಸಲಾಗಿದೆ. ರಾಜ್ಯದ ಮಟ್ಟದಲ್ಲಿ ಅಂತಿಮ ಮುದ್ರೆ ಮಾತ್ರ ಬೀಳಬೇಕಿದೆ ಎಂದರು.
ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ರಾಷ್ಟ್ರೀಯ ವರಿಷ್ಠಎಚ್.ಡಿ.ದೇವೇಗೌಡ ಮಾತುಕತೆ ನಡೆಸುತ್ತಿದ್ದಾರೆ. ಕೆಪಿಪಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಚರ್ಚೆ ಮಾಡುತ್ತಿದ್ದಾರೆ. ಎರಡೂ ಪಕ್ಷಗಳ ಬಹುತೇಕ ಮೈತ್ರಿ ಖಚಿತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್‌ನವರು ಮೇಯರ್ ಪಟ್ಟಕ್ಕೆ ಬೇಡಿಕೆ ವಿಚಾರವಾಗಿ ಪ್ರಕ್ರಿಯಿಸಿದ ಅವರು, ಮೈತ್ರಿ ಮಾತುಕತೆ ನಡೆಯುತ್ತಿದೆ. ಮೇಯರ್ ಅಥವಾ ಅಧಿಕಾರ ಹಂಚಿಕೆ ಮೈತ್ರಿ ನಂತರವೇ ಚರ್ಚೆಗೆ ಬರಲಿದೆ. ಹೀಗಾಗಿ ಇದು ಈಗ ಅಪ್ರಸ್ತುತ. ಜತೆಗೆ ಮೈತ್ರಿಗೆ ಸಿದ್ಧರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ನಡುವಿನ ಪ್ರತಿಷ್ಠೆಯೂ ಇದಕ್ಕೆ ಅಡ್ಡಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಟೀಲಗೆ ಕನಿಷ್ಟ ಜ್ಞಾನವಿಲ್ಲ: ಬಿಜೆಪಿಯವರು ಭ್ರಷ್ಟಾಚಾರ ಮತ್ತು ಜನರಿಂದ ಲೂಟಿ ಮಾಡಿದ ಹಣವನ್ನು ಪಾಲಿಕೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಖರ್ಚ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಹುರುಪಿನಲ್ಲಿ ಪಾಲಿಕೆ ಚುನಾವಣೆಗೆ ಸಾಕಷ್ಟು ಹಣ ಹಾಕಿದ್ದಾರೆ. ಬಿಜೆಪಿಯಿಂದಲೇ ಪ್ರತಿಯೊಬ್ಬ ಅಭ್ಯರ್ಥಿಗೆ 25 ಲಕ್ಷ ರೂ. ಸುರಿಯಲಾಗಿದೆ. ಆದರೂ, ಬಿಜೆಪಿಯವರಿಗೆ ಕಾಂಗ್ರೆಸ್‌ಗಿಂತ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಕಲಬುರಗಿ ಜನತೆ ಕಾಂಗ್ರೆಸ್‌ನ ಕೈ ಹಿಡಿದ್ದಾರೆ ಎಂದು ಹೇಳಿದರು.
ಪಾಲಿಕೆಯ 55 ಸ್ಥಾನಗಳ ಪೈಕಿ 27 ಸ್ಥಾನ ಗೆದ್ದು ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕೇವಲ 23 ಸ್ಥಾನ ಗೆದ್ದ ಬಿಜೆಪಿಯವರು ತಮಗೆ ಜನರು ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಕೂಡ ಪಾಲಿಕೆಯಲ್ಲಿ ತಮ್ಮದೇ ದೊಡ್ಡ ಪಕ್ಷ ಎಂದು ಹೇಳಿಕೆ ಕೊಟ್ಟಿರುವುದು, ಅವರಿಗೆ ಗಣಿತದ ಕನಿಷ್ಟ ಜ್ಞಾನವೂ ಇದ್ದಂತೆ ಇಲ್ಲ ಎಂದು ಟೀಕಿಸಿದರು.
ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ 23 ಸ್ಥಾನ ಗೆದ್ದಿತ್ತು. ಈ ಬಾರಿ ಹೆಚ್ಚುವರಿಯಾಗಿ ನಾಲ್ಕು ಸ್ಥಾನಗಳು ಬಂದಿವೆ. ಒಟ್ಟಾರೆ ಮತದಾನದಲ್ಲಿ ಕಾಂಗ್ರೆಸ್‌ಗೆ ಶೇ.38ರಷ್ಟು ಮತಗಳು ಬಂದಿವೆ. ಬಿಜೆಪಿಗೆ ಶೇ.31ರಷ್ಟು ಮಾತ್ರ ಮತ ಬಂದಿವೆ. ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ 60 ಸಾವಿರ ಮತ ಕಾಂಗ್ರೆಸ್ ಪಡೆದರೆ, ಬಿಜೆಪಿ ಕೇವಲ 45 ಸಾವಿರ ಮತ ಗಳಿಸಿದೆ. ಬಿಜೆಪಿ ಶಾಸಕರಿರುವ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಕಾಂಗ್ರೆಸ್‌ಗೆ 37 ಸಾವಿರ ಮತ ಬಂದಿದ್ದರೆ, ಬಿಜೆಪಿಗೆ 34 ಸಾವಿರ ಮತಗಳ ಮಾತ್ರ ಬಂದಿವೆ. ಆದರೆ, ಇದರ ಜ್ಞಾನವೂ ಇಲ್ಲದವರಂತೆ ಕಟೀಲ್ ಮತ್ತು ಬಿಜೆಪಿ ಮುಖಂಡರು ಮಾತನಾಡುತ್ತಿದ್ದಾರೆ ಎಂದರು. ಬಿಜೆಪಿಯವರು ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ. ಪಾಲಿಕೆಯಲ್ಲಿ ಅಧಿಕಾರಕ್ಕೆ ಬರುವುದುಬಿಜೆಪಿಯವರದ್ದು ತಿರುಕನಕನಸು.ಅವರು ಯಾವ ನೈತಿಕತೆ ಮೇಲೆ ಪಾಲಿಕೆ ಅಧಿಕಾರ ತಮ್ಮದೇ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕಿ ಖನೀಜ್ ಫಾತೀಮಾ, ಪಕ್ಷದ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಉಪಸಭಾಪತಿ ಬಿ.ಆರ್.ಪಾಟೀಲ, ಮಾಜಿ ಎಂಎಲ್‌ಸಿ ಅಲ್ಲಮಪ್ರಭು ಪಾಟೀಲ, ಮುಖಂಡರಾದ ಸುಭಾಷ ರಾಠೊಡ, ಶರಣಕುಮಾರ ಮೋದಿ ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ಬಾರಿ ವರುಣಾ ಕ್ಷೇತ್ರ ಹೈವೋಲ್ಟೇಜ್ ಅಖಾಡ…ಹಿಂದಿನ ಚುನಾವಣೆಯಲ್ಲಿ ಮತದಾರರ ಒಲವು ಹೇಗಿತ್ತು?

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

Karnataka Poll 2023;ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ; ನೀತಿ ಸಂಹಿತೆ ಜಾರಿ

ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ; ಕಾನೂನು ಪದವೀಧರೆ

ಅಂದು ರಾಹುಲ್ ಹರಿದು ಹಾಕಿದ್ದ ಸುಗ್ರೀವಾಜ್ಞೆ ಪ್ರತಿ ಇಂದು ಅವರಿಗೆ ಮುಳುವಾಯ್ತು!