ಪಿಎಸ್‌ಐ ನೇಮಕಾತಿ: ದೈಹಿಕ ಪರೀಕ್ಷೆಯಲ್ಲೂ ಅಕ್ರಮ?
Team Udayavani, May 29, 2022, 1:05 PM IST
ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಒಂದೆಡೆಯಾದರೆ ದೈಹಿಕ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ವಾಸನೆ ಕೇಳಿ ಬಂದಿದ್ದು, ಸಿಐಡಿ ಈ ನಿಟ್ಟಿನಲ್ಲಿ ತನಿಖೆ ಆರಂಭಿಸಲು ಮುಂದಾಗಿದೆ.
ಪಿಎಸ್‌ಐ ನೇಮಕಾತಿ ಹಗರಣದ ಎರಡನೇ ಹಂತದ ತನಿಖೆಯನ್ನು ಸಿಐಡಿ ಅಧಿಕಾರಿಗಳು ತೀವ್ರಗೊಳಿಸಿದ್ದು, ಹಗರಣದ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಮನೆ ಕೆಲಸದಾತ ಪ್ರಕಾಶ ಕಲ್ಲೂರ ಎಂಬಾತನನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 33ಕ್ಕೆ ಏರಿದಂತಾಗಿದೆ.
ಲಿಖೀತ ಪರೀಕ್ಷೆಯಲ್ಲಿ ಬ್ಲೂಟೂತ್ ಮೂಲಕ ಹಾಗೂ ಒಎಂಆರ್ ಶೀಟ್ ತಿದ್ದುಪಡಿ ಮೂಲಕ ಅಕ್ರಮ ಎಸಗಿದ್ದರೆ ಕೆಲವು ಅಭ್ಯರ್ಥಿಗಳನ್ನು ಅರ್ಹತೆ ಇಲ್ಲದಿದ್ದರೂ ದೈಹಿಕ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಕುರಿತಾಗಿ ಬಲವಾದ ಆರೋಪ ಕೇಳಿ ಬಂದಿದೆ.
ಈ ನಿಟ್ಟಿನಲ್ಲಿ ತನಿಖೆ ಕೈಗೊಂಡಲ್ಲಿ ಬಯಲಿಗೆ ಬರುವ ಸಾಧ್ಯತೆಯಿದೆ. ಈ ಅಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿರುವ ಶಂಕೆಯಿದೆ. ಕಳೆದ ನಾಲ್ಕು ದಿನಗಳಿಂದ ಸಿಐಡಿ ಪೊಲೀಸರು ಈ ಆರೋಪದ ಆಧಾರದ ಮೇಲೆ ವಿವಿಧ ಆಯಾಮಗಳಿಂದ ತನಿಖೆ ಕೈಗೊಂಡಿದ್ದು, ಎಲ್ಲ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ-ಅವಲೋಕಿಸಿ ಕೆಲವರ ಬಂಧನಕ್ಕೆ ಮುಂದಾಗಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೀದರ್ ನ ಏಳು ಜನರ ದುರ್ಮರಣ
ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಇಲ್ಲಿಯ ವರೆಗೆ 33 ಜನರ ಬಂಧನವಾಗಿದ್ದರೆ ದೈಹಿಕ ಪರೀಕ್ಷೆ ಹಾಗೂ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಇನ್ನೂ 20 ಜನರ ಬಂಧನವಾಗುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದು ಬರುತ್ತಿದೆ. ಒಟ್ಟಾರೆ ಮೊದಲ ಹಂತದಂತೆ ತನಿಖೆ ಕ್ಷಿಪ್ರವಾಗಿ ಹಾಗೂ ಆಳವಾಗಿ ನಡೆದರೆ ತನಿಖೆ ಒಂದು ಹಂತಕ್ಕೆ ಬಂದು ನಿಲ್ಲುತ್ತದೆ ಎನ್ನಲಾಗುತ್ತಿದೆ.