ಕೊಡಗಿನಲ್ಲಿ ಮತ್ತೆ ಮಳೆ : ದಟ್ಟ ಮಂಜು, ಚಳಿಯ ವಾತಾವರಣ
Team Udayavani, Sep 12, 2022, 10:57 AM IST
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ಬಿಡುವು ನೀಡಿದ್ದ ಮಳೆ ಮತ್ತೆ ಸುರಿಯಲಾರಂಭಿಸಿದೆ. ದಟ್ಟ ಮಂಜು ಮುಸುಕಿದ ವಾತಾವರಣದ ನಡುವೆ ಮೈ ಕೊರೆಯುವ ಚಳಿ ಅನುಭವವಾಗುತ್ತಿದೆ.
ಮಾದಾಪುರ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದ ಮೂವತ್ತೂಕ್ಲು ಗ್ರಾಮದ ಮಂಡೀರ ಬಿದ್ದಪ್ಪ ಹಾಗೂ ಮಂಡೀರ ಪೊನ್ನಪ್ಪ ಅವರ ಮನೆಯ ಹಿಂಬದಿಯಲ್ಲಿ ಅಲ್ಪ ಪ್ರಮಾಣದ ಭೂ ಕುಸಿತವಾಗಿದೆ. ಮನೆಯ ಗೋಡೆಗೆ ಹಾನಿಯಾಗಿದೆ. ಮನೆಯ ಮೇಲ್ಭಾಗದಲ್ಲಿ 2018ರಲ್ಲಿ ಉಂಟಾದ ಭೂ ಕುಸಿತದ ಸಂದರ್ಭ ಭಾರೀ ಬಿರುಕು ಮೂಡಿದ್ದು, ಮಳೆ ಮುಂದುವರಿದಲ್ಲಿ ಮತ್ತೆ ಅನಾಹುತ ಸಂಭವಿಸುವ ಆತಂಕ ಮನೆ ಮಂದಿಯನ್ನು ಕಾಡುತ್ತಿದೆ.
ಸ್ಥಳ್ಕಕೆ ಶಾಸಕ ಅಪ್ಪಚ್ಚು ರಂಜನ್, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಭಾಗದಲ್ಲಿರುವ ಮನೆಗಳು, ಬಿರುಕು ಬಿಟ್ಟ ಪ್ರದೇಶ, ನೀಡಲಾಗಿರುವ ನೋಟಿಸ್‌ಗಳ ಕುರಿತು ಕಂದಾಯ ಇಲಾಖೆ ಅಧಿಕಾರಿಗಳಿಂದ ಶಾಸಕರು ಮಾಹಿತಿ ಪಡೆದರು.
2018ರಿಂದಲೂ ಮಳೆಗಾಲದಲ್ಲಿ ಮನೆ ಖಾಲಿ ಮಾಡಿ ಸುರಕ್ಷಿತ ಸ್ಥಳಗಳಿಗೆ ತೆರಳುತ್ತೇವೆ. ಮಳೆ ಕಡಿಮೆಯಾದ ಬಳಿಕ ಮರಳುತ್ತೇವೆ. 2 ವಾರಗಳ ಹಿಂದೆ ಯಷ್ಟೇ ಮನೆಗೆ ಮರಳಿದ್ದೇವೆ. ಪ್ರತೀ ಮಳೆಗಾಲದಲ್ಲೂ ಭಯದಿಂದಲೇ ದಿನ ದೂಡುತ್ತಿದ್ದೇವೆ ಎಂದು ಮನೆ ಮಂದಿ ಅಳಲು ತೋಡಿಕೊಂಡರು.
ಪರ್ಯಾಯ ವ್ಯವಸ್ಥೆ
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಈ ಪ್ರದೇಶ ವಾಸಕ್ಕೆ ಯೋಗ್ಯವಲ್ಲ ಎಂದು 2018ರಲ್ಲಿ ಸರಕಾರ ವರದಿ ನೀಡಿದೆ. ಅಲ್ಲಿರುವ 18 ಮನೆಗಳ ನಿವಾಸಿಗಳಿಗೆ ಪ್ರತ್ಯೇಕ ಬಡಾವಣೆ ನಿರ್ಮಿಸಿ ಆಶ್ರಯ ಒದಗಿಸಲಾಗುವುದು ಎಂದರು.