ಕಾಲೂರು ಮಹಿಳೆಯರು ತಯಾರಿಸಿದ ಮಸಾಲೆ ಪದಾರ್ಥಗಳಿಗೆ ಸಂಚಾರಿ ವಾಹನದ ಬಲ

Team Udayavani, May 14, 2019, 6:00 AM IST

ಮಡಿಕೇರಿ : ಭಾರತೀಯ ವಿದ್ಯಾಭವನ ಪ್ರಾಜೆಕ್ಟ್ ಕೂರ್ಗ್‌ ಪ್ರಾಯೋಜಕತ್ವದ ಕಾಲೂರು ಗ್ರಾಮದ ಮಹಿಳೆಯರು ಉತ್ಪಾದಿಸಿದ ಮಸಾಲೆ, ಸಂಬಾರ ಪದಾರ್ಥಗಳ ಮಾರಾಟಕ್ಕೆ ಅಮೆರಿಕ ಕೊಡವ ಕೂಟದ ಪ್ರಾಯೋ ಜಕತ್ವದಲ್ಲಿ ದೊರಕಿರುವ ಸಂಚಾರಿ ವಾಹನಕ್ಕೆ ಚಾಲನೆ ನೀಡಲಾಯಿತು.

ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ ಬಳಿ ನಡೆದ ಸರಳ ಸಮಾರಂಭದಲ್ಲಿ ಜಲಪ್ರಳಯದಿಂದ ಸಂಕಷ್ಟಗೊಳಗಾಗಿದ್ದ ಕಾಲೂರು ಗ್ರಾಮದ ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕಾಗಿ ಭಾರತೀಯ ವಿದ್ಯಾಭವನ ಪ್ರಾಜೆಕ್ಟ್ ಕೂರ್ಗ್‌ ವತಿಯಿಂದ ತರಬೇತಿ ನೀಡಿ ತಯಾರಿಸಲಾದ ಮಸಾಲೆ ಪದಾರ್ಥಗಳ ಮಾರಾಟಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಉತ್ತರ ಅಮೆರಿಕದ ಕೊಡವ ಕೂಟ ದವರು ನೀಡಿದ ಸಂಚಾರಿ ವಾಹನಕ್ಕೆ ವಿದ್ಯಾಭವನದ ಕೊಡಗು ಘಟಕದ ಅಧ್ಯಕ್ಷ ಕೆ.ಎಸ್‌.ದೇವಯ್ಯ ಚಾಲನೆ ನೀಡಿದರು.

ಈ ಸಂದರ್ಭ ಸ್ಪೆಕ್‌ ವ್ಯವಸ್ಥೆಯ ನೆರವಿನೊಂದಿಗೆ ಅಮೆರಿಕದಿಂದ ಮಡಿಕೇರಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನುದ್ದೇಶಿಸಿ ಮಾತನಾಡಿದ ಕೊಡವ ಕೂಟದ ಅಧ್ಯಕ್ಷೆ ಕೊಂಗಂಡ ಜಿನ, ಜಲಪ್ರಳಯದಿಂದ ತತ್ತರಿಸಿರುವ ಕೊಡಗಿನ ಹಲವಾರು ಗ್ರಾಮಗಳಿಗೆ ನೆರವಾಗುವ ನಿಟ್ಟಿನಲ್ಲಿ ಅಮೆರಿಕದಲ್ಲಿ ನೆಲಸಿರುವ ಕೊಡವ ಸಮುದಾಯವರು ಎಲ್ಲ ರೀತಿಯ ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದಾರೆ. ವಿಶೇಷವಾಗಿ ನೊಂದ ಮಹಿಳೆಯರಿಗೆ ಮಾನಸಿಕ ಧೈರ್ಯ ತುಂಬಿ ಆರ್ಥಿಕವಾಗಿ ಆ ಮಹಿಳೆಯರನ್ನು ಪ್ರಬಲಗೊಳಿಸುವ ಯೋಜನೆ ನೂತನ ಎನಿಸಿತು. ಹೀಗಾಗಿ ಕೊಡವ ಕೂಟದಿಂದ ಈ ಯೋಜನೆಗೆ ಸಂಚಾರಿ ವಾಹನ ಪ್ರಾಯೋಜಿಸಲು ನಿರ್ಧರಿಸಲಾಯಿತು ಎಂದರು.

ಸ್ವತ್ಛ ಮತ್ತು ಹಸಿರು ಕೊಡಗಿನ (ಕ್ಲೀನ್‌ ಅಂಡ್‌ ಗ್ರೀನ್‌ ಕೂರ್ಗ್‌) ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೊಡವ ಕೂಟವು ನೂತನವಾದ ಯೋಜನೆಯನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ. ಪ್ರಳಯಕ್ಕೊಳಗಾದ ಗ್ರಾಮ ಗಳಲ್ಲಿ ಸಸಿ ನೆಡುವ ಉದ್ದೇಶವನ್ನೂ ಹೊಂದಲಾಗಿದೆ. ಪೊನ್ನಂಪೇಟೆಯ ಸಾಮಿಶಂಕರ ಶಾಲಾ ವಿದ್ಯಾರ್ಥಿಗಳಿಗೆ ಕೊಡವ ಕೂಟದಿಂದ 15 ಕಂಪ್ಯೂಟರ್‌ ಗಳನ್ನು ನೀಡಲಾಗಿದೆ ಎಂದೂ ಜಿನ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ತಾನು ಹುಟ್ಟಿದ ಕಾಲೂರು ಗ್ರಾಮದ ಮಹಿಳೆಯರನ್ನು ಸ್ವಾವಲಂಬಿಗಳಾಗಿಸುವ ಉದ್ದೇಶದಿಂದ ನೀಡಲಾಗುತ್ತಿರುವ ಸವಲತ್ತುಗಳು ತೃಪ್ತಿ ತಂದಿದೆ. ಅಮೆರಿಕಾ ದಲ್ಲಿದ್ದರೂ ಕೊಡಗನ್ನು ಮರೆಯದೇ ಸಂಕಷ್ಟದಲ್ಲಿರುವ ಕೊಡಗಿನ ಸಂತ್ರಸ್ಥರಿಗೆ ನೆರವು ನೀಡಲು ಮುಂದಾಗಿರುವ ಕೊಡವ ಕೂಟದ ಉದ್ದೇಶ ಶ್ಲಾಘನೀಯ ಎಂದರು. ಎಲ್ಲಾದರೂ ಇರು, ಎಂಥಾದರೂ ಇರು, ಕೊಡಗಿನವರಿಗೆ ಸದಾ ನೆರವಾಗುತ್ತಿರು ಎಂಬಂತೆ ಕೊಡವ ಕೂಟದವರು ಸಹಾಯಕ್ಕೆ ಮುಂದಾಗಿದ್ದಾರೆ ಎಂದೂ ಬೋಪಯ್ಯ ಹರ್ಷವ್ಯಕ್ತಪಡಿಸಿದರು.ಭಾರತೀಯ ವಿದ್ಯಾಭವನ ಕೊಡಗು ಘಟಕದ ಅಧ್ಯಕ್ಷ ಕೆ.ಎಸ್‌.ದೇವಯ್ಯ ಮಾತನಾಡಿದರು.

ಸಾತಿ ನಾಗೇಶ್‌ ಕಾಲೂರು, ಡಾ| ಮನೋಹರ್‌ ಜಿ.ಪಾಟ್ಕರ್‌, ಪ್ರಾಜೆಕ್ಟ್ ಕೂರ್ಗ್‌ ಮುಖ್ಯಸ್ಥ ಬಾಲಾಜಿ ಕಶ್ಯಪ್‌, ನಿರ್ದೇಶ ಕರುಗಳಾದ ಕೆ.ಎಸ್‌.ರಮೇಶ್‌ ಹೊಳ್ಳ, ವೇದಮೂರ್ತಿ, ಎಂ.ಇ.ಚಿಣ್ಣಪ್ಪ, ನಯನಾ ಕಶ್ಯಪ್‌, ಅನಿಲ್‌ ಎಚ್‌.ಟಿ., ಗೌರಿಕಶ್ಯಪ್‌, ಓಂಕಾರೇಶ್ವರ ದೇವಾಲಯ ಸುತಿ ಅಧ್ಯಕ್ಷ ಪುಲಿಯಂಡ ಜಗದೀಶ್‌, ರಘುಮಾದಪ್ಪ , ಕಾಲೂರು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಕಾಲೂರು ಮಹಿಳೆಯರು ಯಶಸ್ವಿ ಯೋಜನೆಯಡಿ ತಯಾರಿಸಿದ ಮಸಾಲೆ , ಸಂಬಾರ ಪದಾರ್ಥಗಳು, ಕಾಫಿ ಪುಡಿ, ಜೇನು, ಅಕ್ಕಿಪುಡಿ, ಚಾಕೋಲೇಟ್‌, ಸೇರಿದಂತೆ ಕೊಡಗಿನ ಉತ್ನನ್ನಗಳನ್ನು ಈ ಸಂಚಾರಿ ವಾಹನದಲ್ಲಿ ಕೊಡಗಿನ ವಿಧೆಡೆ ಮಾರಾಟ ಮಾಡಲಾಗುತ್ತದೆ. ಕೊಡಗಿನವರೇ ಉತ್ಪಾದಿಸಿದ ಮಸಾಲೆ ಪದಾರ್ಥಗಳ ಮಾರಾಟದ ಮೊದಲ ಸಂಚಾರಿ ವಾಹನ ಇದಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ