ಕೆರೆ, ರಾಜಕಾಲುವೆ ಒತ್ತುವರಿ ತೆರವಿಗೆ ಆಗ್ರಹ
Team Udayavani, Sep 24, 2020, 5:00 PM IST
ಬಂಗಾರಪೇಟೆ: ತಾಲೂಕಿನಾದ್ಯಂತ ಕೆರೆಗಳ ಮತ್ತು ರಾಜಕಾಲುವೆಗಳ ಒತ್ತುವರಿಗಳನ್ನು ಸರ್ವೆ ಮಾಡಿಸಿ ತೆರವುಗೊಳಿಸಿ ಅಂತರ್ಜಲ ಹೆಚ್ಚಿಸುವ ಕಾರ್ಯವನ್ನು ಕಂದಾಯ ಇಲಾಖೆ ವತಿಯಿಂದ ಪ್ರತ್ಯೇಕ ತಂಡ ರಚಿಸಿ ಕೆರೆ, ರಾಜಕಾಲುವೆಗಳ ಒತ್ತುವರಿದಾರರ ವಿರುದ್ಧ ಕ್ರಮ ಜರುಗಿಸಬೇಕೆಂದು ಕೆ.ಎಸ್.ಪುಟ್ಟಣ್ಣಯ್ಯ ಬಣದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಹಶೀಲ್ದಾರ್ ಕೆ. ರಮೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ಸರ್ಕಾರದಿಂದ ಸಾವಿರಾರು ಕೋಟಿ ರೂ. ಮಂಜೂರಾಗಿದ್ದು, ಕೆ.ಸಿ. ವ್ಯಾಲಿ, ಎತ್ತಿನಹೊಳೆ, ಯರಗೋಳ್ ನೀರಾವರಿ ಯೋಜನೆಗಳಿಂದ ತಾಲೂಕಿನ ಸಾಕಷ್ಟು ಕೆರೆಗಳಿಗೆ ನೀರು ಹರಿಸುವ ಯೋಜನೆಯನ್ನು ಸರ್ಕಾರದವರೇಸೂಚಿಸಿರುತ್ತಾರೆ. ಆದರೆ ತಾಲೂಕಿನಲ್ಲಿ ಕೆರೆಗಳನ್ನು ನುಂಗುತ್ತಿರುವವರ ವಿರುದ್ಧ ತಾಲೂಕು ಆಡಳಿತ ಕ್ರಮ ಜರುಗಿಸದಿರುವುದು ದುರಾದೃಷ್ಟಕ ಎಂದು ಆತಂಕ ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಅಮರೇಶ್ ಮಾತನಾಡಿ, ತಾಲೂಕಿನಾದ್ಯಂತ ಸಂಪೂರ್ಣ ಕೆರೆಗಳ ಮತ್ತು ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಿ ತಾಲೂಕಿನಜನತೆಗೆಮತ್ತು ಜಾನುವಾರುಗಳು, ಪ್ರಾಣಿ, ಪಕ್ಷಿಗಳಿಗೆ ಅನಾನುಕೂಲವಾಗದಂತೆ, ನ್ಯಾಯ ಒದಗಿಸಬೇಕೆಂದು ರೈತಸಂಘದಿಂದ ಮನವಿ ಮಾಡಿಕೊಳ್ಳುತ್ತಿದ್ದು, ಕೂಡಲೇ ವಿಶೇಷ ತಂಡ ರಚಿಸಿ ಕೆರೆಗಳ ರಕ್ಷಣೆಗೆ ನಿಲ್ಲಬೇಕೆಂದು ಒತ್ತಾಯಿಸಿದರು.
ಸಂಚಾಲಕ ಐತಾಂಡಹಳ್ಳಿ ಉದಯ್ ಕುಮಾರ್, ವೆಂಕಟೇಶ್, ಮರಗಲ್ ವೆಂಕಟರಾಮಪ್ಪ, ಶೌಖತ್‌ವುಲ್ಲಾಖಾನ್, ಕೆಜಿಎಫ್ ತಾಲೂಕು ಅಧ್ಯಕ್ಷ ವಡ್ಡಹಳ್ಳಿ ಮಂಜುನಾಥ್, ಕ್ಯಾಸಂಬಳ್ಳಿ ಪ್ರತಾಪ್, ಕುಮಾರ್, ಚೌಡಪ್ಪ ಮುಂತಾದವರು ಹಾಜರಿದ್ದರು.