
ರಾಹುಲ್ ಕೋಲಾರಕ್ಕೆ ಬಂದರೇನು ಬದಲಾವಣೆ ಆಗಲ್ಲ
Team Udayavani, Mar 30, 2023, 1:07 PM IST

ಕೋಲಾರ: ರಾಹುಲ್ ಗಾಂಧಿಗೆ ಇಮೇಜ್ ಇಲ್ಲ, ಕೋಲಾರಕ್ಕೆ ಬಂದರೆ ಇಲ್ಲಿ ಏನೂ ಬದಲಾವಣೆ ಆಗಲ್ಲ, ಬಿಜೆಪಿ ಮತ್ತಷ್ಟು ಬಲಿಷ್ಠವಾಗುತ್ತದೆ. ನನ್ನ ಗೆಲುವಿನ ಹಾದಿ ಸುಲಭವಾಗಲಿದೆ ಎಂದು ಬಿಜೆಪಿ ಸಂಭಾವ್ಯ ಅಭ್ಯರ್ಥಿ ಮಾಜಿ ಸಚಿವ ವರ್ತೂರು ಪ್ರಕಾಶ್ ತಿಳಿಸಿದರು.
ವಿಧಾನಸಭಾ ಚುನಾವಣೆ ಘೋಷಣೆ ಹಿನ್ನಲೆಯಲ್ಲಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಹುಲ್ ಗಾಂಧಿ ಕೋಲಾರಕ್ಕೆ ಬರುವ ವಿಚಾರದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಹುಲ್ ಗಾಂಧಿಗೂ ಕೋಲಾರಕ್ಕೂ ಏನೂ ಸಂಬಂಧ, ಕಾಂಗ್ರೆಸ್ಸಿನವರು ಮೂರು ಜಿಲ್ಲೆಗಳಿಂದ ಅಲ್ಲ, ಇಡೀ ರಾಜ್ಯದಿಂದ ಜನರನ್ನು ಕರೆತಂದರೂ 50 ಸಾವಿರ ಜನರನ್ನು ಸೇರಿಸಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.
ರಾಹುಲ್ ಗಾಂಧಿ ಬಂದು ಹೋಗಲಿ ನಾವು ನರೇಂದ್ರ ಮೋದಿ ಅವರನ್ನು ಕರೆಸುತ್ತೇವೆ. ಮೋದಿ ವಿಶ್ವ ಮೆಚ್ಚಿದ ನಾಯಕ, ಯುವಕರ ಮೆಚ್ಚಿನ ರಾಜಕಾರಣಿ ಅವರು ಬಂದರೆ ಕೋಲಾರದಲ್ಲಿ ಬಿಜೆಪಿಗೆ ಶುಕ್ರದೆಸೆ ಬರುತ್ತದೆ ಎಂದರು.
ರಾಹುಲ್ ಗಾಂಧಿ ಬಂದು ಹೋದ್ರೆ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಪಕ್ಷ ಗೆಲ್ಲಿಸಲು ವಿಫಲರಾಗಿರುವ ಸಂದೇಶ ರವಾನೆಯಾಗುತ್ತದೆ. ರಾಹುಲ್ ಗಾಂಧಿ ಬರುವುದರಿಂದ ಬಿಜೆಪಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಒಂದು ವರ್ಷದಿಂದ ಕ್ಷೇತ್ರದಲ್ಲಿ ಸಂಘಟನೆ: ನಾನು ಒಂದು ವರ್ಷದಿಂದ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಮಾಡಿದ್ದೇನೆ, ಹಳ್ಳಿಗೆ ಮಾತ್ರವಲ್ಲ ಮನೆಮನೆಗೂ ಹೋಗಿ ಮತ ಯಾಚಿಸಿದ್ದೇನೆ, ಅಧಿಕಾರದಲ್ಲಿರುವ ಶಾಸಕ ರಿಂದಾಗದ ಕೆಲಸವನ್ನು ನಾನು ಮಾಡಿದ್ದೇನೆ, ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿಸಿದ್ದೇನೆ ಎಂದರು. ಸಿದ್ದರಾಮಯ್ಯ ಇಲ್ಲಿ ಸ್ಪರ್ಧೆ ಮಾಡಿದ್ರೆ ಚೆನ್ನಾಗಿತ್ತು, ಅವರು ಬಂದಿದ್ದರೆ ಚುನಾವಣಾ ಕಣ ರಂಗೇರುತ್ತಿತ್ತು ಎಂದ ಅವರು, ಸಿದ್ದರಾಮಯ್ಯ ಬಾರದಿದ್ದರೆ ಕೋಲಾರದಲ್ಲಿ ಕಾಂಗ್ರೆಸ್ ಜೆಡಿಎಸ್ ವೀಕ್ ಆಗಲಿದೆ,ಯಾರೇ ಪ್ರತಿಸ್ಪರ್ಧಿ ಆದ್ರೂ ಚುನಾವಣೆ ಎದುರಿಸುತ್ತೇನೆ, ಸೋಲುವ ಮಾತೇ ಇಲ್ಲ ಎಂದರು.
ಗ್ರಾಮೀಣ ಭಾಗದಲ್ಲಿ ಪ್ರಚಾರ ಮುಗಿಸಿದ್ದೇನೆ, ನಗರ ಭಾಗದಲ್ಲಿ ಪ್ರಚಾರ ಆರಂಭಿಸುತ್ತೇನೆ, ಜೆಡಿಎಸ್ ಬಗ್ಗೆ ನನಗೆ ಮೊದಲಿಂದಲೂ ಸಾಫ್ಟ್ ಕಾರ್ನರ್ ಇದೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಬಗ್ಗೆ ಮೊದಲಿಂದಲೂ ನಂಬಿಕೆ ಇದೆ ಎಂದರು.
ಯಾರಿಗೆ ಟಿಕೆಟ್ ನೀಡಿದರೂ ಗೆಲ್ಲಿಸುತ್ತೇನೆ: ಬಿಜೆಪಿ ಟಿಕೆಟ್ ನನಗೆ ಸಿಗುವುದು ಎಂಬ ವಿಶ್ವಾಸವಿದೆ, ಈ ನಡುವೆ ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಕೆಲಸ ಮಾಡಿ ಗೆಲ್ಲಿಸುತ್ತೇನೆ. ಕೋಲಾರದಲ್ಲಿ ಕಳೆದ ಐದು ವರ್ಷಗಳಿಂದ ಶಾಸಕರಾಗಿರುವ ಶ್ರೀನಿವಾಸಗೌಡ ಕ್ಷೇತ್ರದ ಜನತೆ, ಅಭಿವೃದ್ಧಿಯನ್ನು ಮರೆತು ಮಲಗಿ ನಿದ್ದೇ ಮಾಡಿದ್ದು, ನನಗೆ ವರದಾನವಾಗಿದೆ, ಜನರು ನನ್ನ ಹಿಂದೆ 10 ವರ್ಷ ಶಾಸಕನಾಗಿದ್ದಾಗ ಮಾಡಿದ ಕೆಲಸವನ್ನು ನೋಡಿದ್ದಾರೆ, ಆಶೀರ್ವಾದ ಮಾಡುತ್ತಾರೆ ಎಂದು ತಿಳಿಸಿದರು.
ರಾಹುಲ್ ಮತ್ತೇನಾದರೂ ಮಾತನಾಡಿದರೆ ತಕ್ಕ ಶಾಸ್ತಿ : ರಾಹುಲ್ ಗಾಂಧಿ 2019ರಲ್ಲಿ ಒಮ್ಮೆ ಬಂದಾಗ ಹಿಂದುಳಿದ ವರ್ಗವೊಂದರ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ಕೋರ್ಟ್‌ನಿಂದ ಶಿಕ್ಷೆಗೆ ಒಳಗಾಗಿ ಸಂಸತ್ ಸದಸ್ಯತ್ವ ಕಳೆದುಕೊಂಡಿದ್ದಾರೆ. ಮತ್ತೆ ಇಲ್ಲಿ ಬಾಯಿಗೆ ಬಂದಂತೆ ಮಾತನಾಡಿದರೆ ಯಾರಾದರೂ ಕೋರ್ಟ್‌ಗೆ ಹೋಗೇ ಹೋಗುತ್ತಾರೆ ಮತ್ತೆ ತಕ್ಕ ಶಾಸ್ತಿಯಾಗದಿರದು ಎಂದು ಎಚ್ಚರಿಸಿದರು.
ಟಾಪ್ ನ್ಯೂಸ್
